ADVERTISEMENT

ಸೊರಬ: ಶೇ 53ರಷ್ಟು ಮಳೆ ಕೊರತೆ, ಕೃಷಿಗೆ ಹಿನ್ನಡೆ

ರಾಘವೇಂದ್ರ ಟಿ.
Published 29 ಜೂನ್ 2024, 6:32 IST
Last Updated 29 ಜೂನ್ 2024, 6:32 IST
ಸೊರಬದ ದಂಡಾವತಿ ನದಿಯ ಒಡಲು ಬರಿದಾಗಿರುವುದು
ಸೊರಬದ ದಂಡಾವತಿ ನದಿಯ ಒಡಲು ಬರಿದಾಗಿರುವುದು   

ಸೊರಬ: ಪ್ರಸಕ್ತ ಮುಂಗಾರಿನಲ್ಲಿ ತಾಲ್ಲೂಕಿನಲ್ಲಿ ಶೇ 53ರಷ್ಟು ಮಳೆಯ ಕೊರತೆಯಾಗಿದ್ದು, ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ.

ಕಳೆದ ವರ್ಷ ಭೀಕರ ಬರಗಾಲ ಎದುರಿಸಿದ್ದ ರೈತರು ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಈವರೆಗೂ  ಮಳೆ ಸಮರ್ಪಕವಾಗಿ ಸುರಿಯದ ಕಾರಣ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.

ಮಳೆಗಾಲ ಆರಂಭವಾಗುವ ಸೂಚನೆ ಕಾಣುತ್ತಿದ್ದಂತೆಯೇ ರೈತರು ಬಿತ್ತನೆಗೆ ಭೂಮಿ ಸಜ್ಜುಗೊಳಿಸಿದ್ದರು. ಮುಂಗಾರು ತಡವಾಗಿ ಪ್ರವೇಶಿಸಿದ್ದರಿಂದ ತೊಂದರೆ ಉಂಟಾಗಿದೆ. ಉಳುಮೆಗೆ ಹದ ಮಳೆ ಬೀಳದೆ ಇರುವುದರಿಂದ ಅವಕಾಶ ಸಿಕ್ಕಿಲ್ಲ.

ADVERTISEMENT

ತಾಲ್ಲೂಕಿನಲ್ಲಿ ಭತ್ತವನ್ನೇ ಹೆಚ್ಚು ಬೆಳೆಯಲಾಗುತ್ತದೆ. ಮಳೆ ಕೊರತೆ ಕಾರಣ ಭೂಮಿಯು ಬಿತ್ತನೆಗೆ ಪೂರಕವಾಗಿಲ್ಲ. ಜೂನ್ ವೇಳೆಗಾಗಲೇ ತಾಲ್ಲೂಕಿನ ಜೀವನದಿಗಳಾದ ವರದಾ ಹಾಗೂ ದಂಡಾವತಿ ನದಿಗಳು ತುಂಬಿ‌ ಹರಿದು ಕೃಷಿ ಚಟುವಟಿಕೆಗಳಿಗೆ ಆಸರೆ ಆಗಬೇಕಿತ್ತು. ಜೂನ್ ಮುಗಿದು ಜುಲೈ ಸಮೀಪಿಸುತ್ತಿದ್ದರೂ ನದಿಯ ಒಡಲಿನಲ್ಲಿ ಹನಿ ನೀರು ಇಲ್ಲ.

ಕೆಲವು ರೈತರು ನದಿ ನೀರನ್ನು ಆಶ್ರಯಿಸಿ ಭತ್ತದ ಸಸಿಗೆ ಮಡಿ ಸಿದ್ಧಪಡಿಸುತ್ತಿದ್ದರು. ಕೆರೆ–ಕಟ್ಟೆಗಳು ತುಂಬಿದ್ದರೂ  ಅರ್ಧದಷ್ಟು ರೈತರು ಈಗಾಗಲೇ ನಾಟಿಗಾಗಿ ಭತ್ತದ ಸಸಿ ಮಡಿ ಸಿದ್ಧಪಡಿಸಿದ್ದಾರೆ. ಜೂನ್ ಮೊದಲ ವಾರದಲ್ಲಿ ಬಿದ್ದ ಮಳೆಗೆ  ಜೋಳ ಬಿತ್ತನೆ ಮಾಡಲಾಗಿದ್ದು, ತೇವಾಂಶ ಇಲ್ಲದ ಕಾರಣ ಬೀಜ ಮೊಳಕೆಯೊಡೆದಿಲ್ಲ. ಜಡೆ ಹಾಗೂ ಆನವಟ್ಟಿ ಹೋಬಳಿಗಳಲ್ಲಿ ಭತ್ತದ ಬೀಜ ಬಿತ್ತನೆ ಮಾಡಲಾಗಿದೆ.

ಕೃಷಿ ಜಮೀನಿನಲ್ಲಿ ಎಮ್ಮೆಗಳನ್ನು ಮೇಯಿತ್ತಿರುವುದು

‘ಗೊಬ್ಬರ, ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇವೆ‌. ನಮಗೆ ನಿತ್ಯ ಆಕಾಶ ನೋಡುವುದೇ ಕಾಯಕ’ ಎನ್ನುತ್ತಾರೆ ಹೊಸೂರು ಗ್ರಾಮದ ರೈತ ಹೊನ್ನಪ್ಪ.

ಗುಡ್ಡೆಕೆರೆ ಬಸಪ್ಪ ಅಂಕರವಳ್ಳಿ
ಇತ್ತೀಚಿನ ವರ್ಷಗಳಲ್ಲಿ ಮಳೆ ಸಕಾಲಕ್ಕೆ ಆಗುತ್ತಿಲ್ಲ. ರೈತರು ಹದ ತಪ್ಪಿ ಬೆಳೆ ಮಾಡಿದರೂ ಯೋಗ್ಯ ಇಳುವರಿ ಕಾಣಲು ಸಾಧ್ಯವಿಲ್ಲ.‌ ಸರ್ಕಾರ ಮುಂಗಾರು ಪೂರ್ವದಲ್ಲಿ ರೈತರ ನೆರವಿಗೆ‌ ಮುಂದಾಗಬೇಕು.
ಗುಡ್ಡೆಕೆರೆ ಬಸಪ್ಪ ರೈತ ಅಂಕರವಳ್ಳಿ
ಕೆ.ಜಿ.ಕುಮಾರ್
ಜುಲೈ ಮೊದಲ ವಾರದವರೆಗೆ ‌ಮಳೆ ವಾತಾವರಣ ಕಡಿಮೆ ಇದ್ದು ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯಲು ಮುಂದಾಗಬೇಕು.
ಕೆ.ಜಿ.ಕುಮಾರ್ ಸಹಾಯಕ ಕೃಷಿ ಅಧಿಕಾರಿ
ಅಲ್ಪಾವಧಿ ತಳಿ ಸೂಕ್ತ
ತಾಲ್ಲೂಕಿನಲ್ಲಿ ಒಟ್ಟು 19500 ಹೆಕ್ಟೇರ್ ಭತ್ತ ಬೆಳೆಯ ಗುರಿ ಹೊಂದಲಾಗಿದ್ದು ಈಗಾಗಲೇ 3930 ಹೆಕ್ಟೇರ್ ಕೂರಿಗೆ ಬಿತ್ತನೆ ಮಾಡಲಾಗಿದೆ. ನಾಟಿಗೆ ಸಸಿಮಡಿ ಸಿದ್ಧತೆಗೆ ಮಳೆ ಕೊರತೆ ಇದೆ. 9000 ಹೆಕ್ಟೇರ್ ಪ್ರದೇಶದ ಪೈಕಿ 6840 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆ ಪೂರ್ಣಗೊಂಡಿದೆ. ರೈತರು ಮಳೆ ಕೊರತೆ ಉಂಟಾದಲ್ಲಿ ದೀರ್ಘಾವಧಿ ಭತ್ತದ ತಳಿಗಳಿಗೆ ಬದಲಾಗಿ ಅಲ್ಪಾವಧಿ ಭತ್ತದ ತಳಿಗಳನ್ನು ಉಪಯೋಗಿಸುವುದು ಸೂಕ್ತ. ತೀವ್ರ ಮಳೆ ಕೊರತೆ ಉಂಟಾದಲ್ಲಿ ದ್ವಿದಳ ಧಾನ್ಯ ಬೆಳೆಯುವುದು ಸೂಕ್ತ ಎಂದು ಸಹಾಯಕ ಕೃಷಿ ಅಧಿಕಾರಿ ಕೆ.ಜಿ. ಕುಮಾರ್ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.