ಶಿವಮೊಗ್ಗ: ಸೊರಬ ತಾಲ್ಲೂಕು ಲಕ್ಕವಳ್ಳಿಯ ಮೋಕ್ಷ ಮಂದಿರ ಸಂಸ್ಥಾನ ಜೈನ ಮಠದ ನಿರ್ಲಕ್ಷ್ಯ ಖಂಡಿಸಿ ಜ.12ರಿಂದ 15ರವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮಠದ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಮಠ ಸಂಪೂರ್ಣವಾಗಿ ವರದಾ ನದಿಯ ಪ್ರವಾಹದಿಂದ 2019ರಲ್ಲಿ ಮುಳುಗಿ ಹೋಗಿದೆ. ಮಠ ಸಂರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಇಲಾಖೆಗಳಿಗೆ ಪತ್ರ ಬರೆದರೂ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಜೈನ ಮಠ ತಾತ್ಸಾರ ಮಾಡುವುದು ಸಲ್ಲದು. ಹಣ ಇದ್ದರೂ ಬಿಡುಗಡೆ ಮಾಡುತ್ತಿಲ್ಲ. ಹಾಗಾಗಿ, ಉಪವಾಸ ಸತ್ಯಾಗ್ರಹ ಅನಿವಾರ್ಯ ಎಂದರು.
ಅಲ್ಪಸಂಖ್ಯಾತರಾದ ಜೈನರಿಗೆ ಶೇ 2ರಷ್ಟು ಅನುದಾನ ಸಹ ಸಿಗುತ್ತಿಲ್ಲ. ಆಯೋಗ, ಅಭಿವೃದ್ಧಿ ನಿಗಮಗಳ ಕಣ್ಣಿಗೆ ಜೈನರು ಬೀಳುವುದೇ ಇಲ್ಲ. ಶಾಸಕರಾಗಲಿ, ಸಂಸದರಾಗಲಿ ಇತ್ತ ಕಡೆ ನೋಡುವುದೂ ಇಲ್ಲ. ದೇವಸ್ಥಾನಗಳಿಗೆ ಸುಲಭವಾಗಿ ಹಣ ನೀಡಲಾಗುತ್ತದೆ. ಆದರೆ, ಜೈನ ಮಠಗಳಿಗೆ ತಾರತಮ್ಯ ಮಾಡಲಾಗುತ್ತಿದೆ. ಜೈನರನ್ನು 2ಬಿಗೆ ಸೇರಿಸಲು ಕೂಡ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಠದ ಭಕ್ತರಾದ ಸಂತೋಷ್, ರಾಮಚಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.