ಶಿವಮೊಗ್ಗ: ಕನ್ನಡದ ಬೆಳವಣಿಗೆಗೆ ಕಾನೂನಾತ್ಮಕ ಹಾಗೂ ಕ್ರಿಯಾತ್ಮಕ ಪ್ರತಿಕ್ರಿಯೆಗಳೂ ಅಗತ್ಯ ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದ 94ನೇ ವಾರ್ಷಿಕೋತ್ಸವದಲ್ಲಿ ಶನಿವಾರ ಮಾತನಾಡಿದ ಅವರು, ‘ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ 22 ಪ್ರಾದೇಶಿಕ ಭಾಷೆಗಳು ಬಸವಳಿಯುತ್ತಿವೆ. ಆದರೆ ರಾಜ್ಯಗಳು ಭಾಷೆಯ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಇದಕ್ಕೆ ನಮ್ಮ ಸಂವಿಧಾನ ತಡೆಗೋಡೆಯಂತೆ ನಿಂತಿದೆ’ ಎಂದು ಹೇಳಿದರು.
‘ಮಾತೃಭಾಷೆಯಲ್ಲಿ ಶಿಕ್ಷಣ ಎಂಬ ಪರಿಕಲ್ಪನೆಯಲ್ಲೇ ಗೊಂದಲವಿದೆ. ತೆಲುಗು ಮೂಲದ ಪತಿ, ತಮಿಳು ಮೂಲದ ಪತ್ನಿ ಬೆಂಗಳೂರಿನಲ್ಲಿ ನೆಲೆಸಿದ್ದರೆ ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು? ಪ್ರಾದೇಶಿಕತೆಯ ಆಧಾರದಲ್ಲಿ ಗಡಿ ನಿರ್ಧರಿಸಿದ ನಾವು, ಭಾಷೆಗೆ ಮಾತ್ರ ಗಡಿಯ ಚೌಕಟ್ಟನ್ನು ವಿಧಿಸುವುದು ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿನಯ್ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ನಾಲ್ವರು ಹಿರಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕರ್ನಾಟಕ ಸಂಘದಿಂದ ಏರ್ಪಡಿಸಿದ್ದ ಸಮೂಹ ಗಾಯನ ಸ್ಪರ್ಧೆಯ ವಿಜೇತರಿಗೆ ಟಿ.ಎಸ್.ನಾಗಾಭರಣ ಪ್ರಶಸ್ತಿ ಪ್ರದಾನ ಮಾಡಿದರು.
ಹಿರಿಯ ಸದಸ್ಯರಿಗೆ ಸನ್ಮಾನ: ಕರ್ನಾಟಕ ಸಂಘದ ಹಿರಿಯ ಸದಸ್ಯರಾದ ರಾಮಮೂರ್ತಿ ತೆಮ್ಮೆಮನೆ, ಎಚ್.ಕೆ.ಶಾಮಸುಂದರ ಶಾಸ್ತ್ರಿ, ಎಚ್.ಎಸ್.ರಮಾ ಶಾಸ್ತ್ರಿ, ಎಚ್.ಜಿ.ರಾಮಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ರಾಮಮೂರ್ತಿ ತೆಮ್ಮೆಮನೆ ಹಾಗೂ ಎಚ್.ಎಸ್.ರಮಾ ಶಾಸ್ತ್ರಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.