ಸಾಗರ: ಮಳೆಯ ಕಾರಣ ಈವರೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ನವೆಂಬರ್ 1ರ ನಂತರ ನಗರವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಿರುವ ವಿವಿಧ ಕಾಮಗಾರಿಗಳ ಸಂಬಂಧ ಸೋಮವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿ ಗೃಹವನ್ನು ಕೆಡವಿ ಆಸ್ಪತ್ರೆಗಾಗಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ನಗರವ್ಯಾಪ್ತಿಯಲ್ಲಿ ಸುಸಜ್ಜಿತ ರಂಗ ಮಂದಿರ ₹ 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಮೊದಲ ಹಂತದಲ್ಲಿ ₹ 4.80 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ನಗರದ ವಿವಿಧ ವಾರ್ಡ್‌ಗಳಲ್ಲಿ ಮಳೆಯಿಂದ ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು. ಅಗತ್ಯವಿರುವಲ್ಲಿ ಹೊಸದಾಗಿ ರಸ್ತೆ ನಿರ್ಮಿಸಲಾಗುವುದು. ಹಾಳಾಗಿರುವ ಉದ್ಯಾನಗಳಿಗೆ ಕಾಯಕಲ್ಪ ನೀಡಲಾಗುವುದು ಎಂದರು.
ನಗರಸಭೆಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್‌ನ ನಗರಸಭೆ ಸದಸ್ಯೆ ಎನ್. ಲಲಿತಮ್ಮ ಅವರು ತಡೆಯಾಜ್ಞೆ ತಂದಿರುವ ಹಿನ್ನಲೆಯಲ್ಲಿ ಈಚೆಗೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅವರ ವಿರುದ್ಧ ಬಿಜೆಪಿ ಸದಸ್ಯರು ಲಘುವಾಗಿ ವರ್ತಿಸಿರುವುದು ಖಂಡನೀಯ. ಲಲಿತಮ್ಮ ಅವರು ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದಾರೆ. ಆದಾಗ್ಯೂ ಅವರಿಗೆ ಅಪರಾಧಿ ಎಂದು ಹೇಳಿ ಸಭೆಯಿಂದ ಹೊರ ಹೋಗುವಂತೆ ಹೇಳಿರುವುದು ಮಹಿಳೆಯರು, ದಲಿತರ ಬಗ್ಗೆ ಬಿಜೆಪಿಗೆ ಇರುವ ಕೆಟ್ಟ ಮನಃಸ್ಥಿತಿ ತೋರಿಸುತ್ತದೆ ಎಂದು ಟೀಕಿಸಿದರು.
ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಅಶೋಕ ಬೇಳೂರು, ತಾರಾಮೂರ್ತಿ, ಗಿರೀಶ್ ಕೋವಿ, ಲಿಂಗರಾಜ ಆರೋಡಿ, ಬಸವರಾಜ್ ಕುಗ್ವೆ, ಉಮೇಶ್ ಸೂರನಗದ್ದೆ, ಟಿ.ಪಿ.ರಮೇಶ್ ಇದ್ದರು.
ಫ್ಲೆಕ್ಸ್ ಅಳವಡಿಸಿದ ಮಾತ್ರಕ್ಕೆ ಸಿಎಂ ಆಗಲು ಸಾಧ್ಯವೆ?
‘ಸಚಿವ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಜಾರಕಿಹೊಳಿ ಎಂದು ಫ್ಲೆಕ್ಸ್ ಅಳವಡಿಸಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ನಾಳೆ ನನ್ನ ಅಭಿಮಾನಿಗಳು ಬೇಳೂರು ಮುಂದಿನ ಮುಖ್ಯಮಂತ್ರಿ ಎಂದು ಫ್ಲೆಕ್ಸ್ ಹಾಕಿದ ಮಾತ್ರಕ್ಕೆ ನಾನು ಸಿಎಂ ಆಗಲಾರೆ. ಯಾವುದಕ್ಕೂ ತೀರ್ಮಾನ ಕೈಗೊಳ್ಳಲು ಪಕ್ಷದ ಹೈಕಮಾಂಡ್ ಇದೆ’ ಎಂದು ಬೇಳೂರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.