ಸೊರಬ: ರೈತರು ಕೃಷಿ ಪಂಪ್‌ಸೆಟ್‍ಗಳಿಗೆ ಆರ್‌ಆರ್ ನಂಬರ್ನೋಂದಾಯಿಸಿದರೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ತೋರಗೊಂಡನಕೊಪ್ಪ ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಚಂದ್ರಗುತ್ತಿ ಭಾಗಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ವಿದ್ಯುತ್ ಗ್ರಿಡ್ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗಾಗಿ ನೀರಿನ ಸಂಗ್ರಹ ಘಟಕ ಸ್ಥಾಪನೆ, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು.
ಚಂದ್ರಗುತ್ತಿಯ ಐತಿಹಾಸಿಕ ರೇಣುಕಾಂಬಾ ದೇವಸ್ಥಾನವನ್ನು ‘ಎ’ ಗ್ರೇಡ್‍ಗೆ ಏರಿಸಲಾಗುವುದು. ಈ ಮೂಲಕ ದೇವಸ್ಥಾನದ ಸಮಗ್ರ ಅಭಿವೃದ್ಧಿ ಮತ್ತು ಭಕ್ತರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದಲೇ ಜಾತ್ರೆಯನ್ನು ನಿರ್ವಹಣೆ ಮಾಡಿದಂತೆ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಚಂದ್ರಗುತ್ತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಯಲಸಿ, ಹುಲ್ತಿಕೊಪ್ಪ, ಯಡಗೊಪ್ಪ, ಹರೀಶಿ, ಕೋಡಂಬಿ, ಕುಂಡಗಳಲೆ, ಕೆಂಚಿಕೊಪ್ಪ, ತೋರಗೊಂಡನಕೊಪ್ಪ, ಹರಳಗಿ,ಕಕ್ಕರಸಿ, ಕಿರಗುಣಸೆ, ಕುಪ್ಪೆ ಗ್ರಾಮ
ಗಳಲ್ಲಿ ₹ 12.49 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ರಾಜು ಕೆಂಚಿಕೊಪ್ಪ, ಪ್ರಸನ್ನ ಶೇಟ್, ಶಿವಕುಮಾರ ಕಡಸೂರು, ಪರಮೇಶ್ವರ ಮಣ್ಣತ್ತಿ, ಪರಶುರಾಮ ಭೋವಿ, ದ್ಯಾವಪ್ಪ, ಫಕೀರಪ್ಪ, ಕೃಷ್ಣಮೂರ್ತಿ ಕೊಡಕಣಿ, ಅಭಿಷೇಕ ಗೌಡ, ಕಿರಣ ಕುಮಾರ್, ಚನ್ನಬಸಪ್ಪ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.