ಭದ್ರಾವತಿ: ವಿಶ್ವಕರ್ಮಜಯಂತಿಯನ್ನು ಕಾರ್ಮಿಕರ ದಿನಾಚರಣೆಯನ್ನಾಗಿ ಘೋಷಿಸುವ ಮೂಲಕ ಕೇಂದ್ರ ಸರ್ಕಾರ ಭಾರತೀಯತೆಯ ಕಾರ್ಮಿಕ ದಿನಾಚರಣೆಗೆ ಮುನ್ನುಡಿ ಬರೆಯಬೇಕು’ ಎಂದು ಉದ್ಯಮಿ ನಟರಾಜ್ಭಾಗವತ್ ಹೇಳಿದರು.
ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ನೇತೃತ್ವದಲ್ಲಿ ಭಾನುವಾರ ಜರುಗಿದ ವಿಶ್ವಕರ್ಮ ಜಯಂತಿ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಷ್ಟ್ರದ ಬಹುತೇಕ ಪ್ರಾಚೀನ ದೇವಾಲಯಗಳ ಸೃಷ್ಟಿಕರ್ತರುವಿಶ್ವಕರ್ಮರು. ಪ್ರಪಂಚಕ್ಕೆ ವೈಭವಯುತ ಕಟ್ಟಡಗಳನ್ನು ನಿರ್ಮಿಸಿದ ಮೇಧಾವಿ ವಾಸ್ತುಶಿಲ್ಪಿಗಳು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂತಹವರ ನೆನಪಿನ ಜಯಂತಿ ನಮ್ಮ ರಾಷ್ಟ್ರಾಭಿಮಾನದ ಸಂಕೇತದ ದಿನವಾಗಬೇಕು’ಎಂದರು.
‘ವಿದೇಶದಲ್ಲಿ ನಡೆದ ಕಾರ್ಮಿಕ ಹೋರಾಟದ ನೆನಪಿನಲ್ಲಿ ಮೇ ದಿನಾಚರಣೆ ಆಚರಿಸುವುದು ನಮ್ಮ ಸಂಸ್ಕೃತಿಗೆ ಒಗ್ಗುವಂಥದ್ದಲ್ಲ. ಅದು ಕಮ್ಯುನಿಸ್ಟ್ ಇತಿಹಾಸಕಾರರು ಸೃಷ್ಟಿಸಿದ ಬಹುದೊಡ್ಡ ಪಿತೂರಿ’ ಎಂದುಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ್ ದೂರಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರ ಬದುಕಿಗೆ ನೆರವಾಗುವ ಅನೇಕ ಕೆಲಸವನ್ನು ಮಾಡುತ್ತಿದ್ದು, ಅದರ ಸದುಪಯೋಗ ಪಡೆಯಬೇಕು’ ಎಂದು ಉದ್ಯಮಿ ಮಂಗೋಟೆ ರುದ್ರೇಶ್ ಮನವಿ ಮಾಡಿದರು.
ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ವಿತರಣೆ ನಡೆಯಿತು. ಸಭೆಗೂ ಮುನ್ನ ಪಟ್ಟಣದ ಬೀದಿಗಳಲ್ಲಿ ವಿಶ್ವಕರ್ಮ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.
ಬಿಎಂಎಸ್ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷ ಪುರುಷೋತ್ತಮ್
ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪಚ್ಚಿಯಪ್ಪ, ಪ್ಯಾಟ್ರಿಕ್, ರಾಘವೇಂದ್ರ, ರಾಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.