ರಿಪ್ಪನ್‌ಪೇಟೆ: ಪಟ್ಟಣದ ದೊಡ್ಡಿನ ಕೊಪ್ಪ ಎಸ್‌ಸಿ ಕಾಲೊನಿಯ ಮಿನಿ ಅಂಗನವಾಡಿ ಕಟ್ಟಡ ಎರಡು ವರ್ಷ ಕಳೆದರೂ ಉದ್ಘಾಟನೆ
ಭಾಗ್ಯ ಕಂಡಿಲ್ಲ.
50ಕ್ಕೂ ಹೆಚ್ಚು ಮನೆಗಳಿರುವ ಈ ಕಾಲೊನಿಯಲ್ಲಿ ಮಿನಿ ಅಂಗನವಾಡಿ ಕೇಂದ್ರ ತೆರೆದು 8 ವರ್ಷವಾಯಿತು. 3 ವರ್ಷ ಬಾಡಿಗೆ ಮನೆಯಲ್ಲಿ ನಡೆಸಿ ನಂತರ ಐಟಿಐ ಕಾಲೇಜು ನಡೆಯುತ್ತಿರುವ ವಸತಿ ಶಾಲಾ ಕಟ್ಟಡದಲ್ಲಿಯೇ ಕಿಷ್ಕಿಂಧೆಯಂತಹ ಕೊಠಡಿವೊಂದಕ್ಕೆ ಸ್ಥಳಾಂತರಿಸಲಾಗಿತ್ತು.
ಒಬ್ಬರೇ ಕಾರ್ಯಕರ್ತೆ ಎಲ್ಲವನ್ನೂ ನಿಭಾಯಿಸಬೇಕು. ಒಂದೇ ಕೊಠಡಿಯಲ್ಲಿ ದಿನಸಿ ಸಾಮಗ್ರಿಗಳ ಶೇಖರಣೆ, ಅಡುಗೆಮನೆ, ಸರ್ಕಾರಿ ಕಡತ, ಮಕ್ಕಳ ಓದು, ಆಟ, ಪಾಠ ಎಲ್ಲವೂ ನಡೆಯುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಚಿತ.
ಈಗಿರುವ ಕೇಂದ್ರದ ಹಿಂಭಾಗದಲ್ಲಿ 2016–17ನೇ ಸಾಲಿನ ಅವಧಿಯಲ್ಲಿ ಮಿನಿ ಅಂಗನವಾಡಿ ಕಟ್ಟಡವನ್ನು ನಿರ್ಮಿತಿ ಕೇಂದ್ರದಿಂದ ₹ 9.17 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ವರ್ಷದ ಹಿಂದೆಯೇ ಹಸ್ತಾಂತರಿಸಲಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂದು ಬರುವೆ ಗ್ರಾಮ ಪಂಚಾಯಿತಿ ಸದಸ್ಯ ಆರ್.ಎಚ್. ಶ್ರೀನಿವಾಸ್ ಆಚಾರ್‌ದೂರುತ್ತಾರೆ.
ಕಟ್ಟಡದ ಸುತ್ತ ಗಿಡ, ಗಂಟಿ ಬೆಳೆದು ಹುಳ ಹುಪ್ಪಟೆಗಳ, ವಿಷ ಜಂತುಗಳ ವಾಸಸ್ಥಾನವಾಗಿದೆ. ಹಿಂಭಾಗದ ಸರ್ಕಾರಿ ವಿದ್ಯಾರ್ಥಿನಿಯರ ವಸತಿ ಗೃಹದ ತ್ಯಾಜ್ಯದ ನೀರು ಸಹ ಹೊಸ ಅಂಗನವಾಡಿ ಅಂಗಳಕ್ಕೆ ಹರಿಯುತ್ತದೆ. ಇದರಿಂದ ದುರ್ವಾಸನೆ ಬೀರುತ್ತಿದೆ ಎಂದು ದೂರುತ್ತಾರೆ ಅವರು.
3 ತಿಂಗಳಿಂದ ವೇತನವಿಲ್ಲ:‘ಸರ್ಕಾರ ಕೆ.2 ಮೂಲಕ ವೇತನ ಪಾವತಿಗೆ ಅಣಿಯಾಗಿದ್ದು, ಅಂಗನವಾಡಿ ಕಾರ್ಯಕರ್ತರ ವೇತನ 3 ತಿಂಗಳಿಂದ ಬಾಕಿ ಇದೆ.
ಮಕ್ಕಳಿಗೆ ಬೆಳಿಗ್ಗೆ ಮೊಳಕೆ ಕಾಳು, ಮಧ್ಯಾಹ್ನ ಊಟ, ಸಂಜೆ ಹಾಲು ಹಾಗೂ ವಾರಕ್ಕೆ 2 ದಿನ ಮೊಟ್ಟೆ ವಿತರಿಸುತ್ತಿದ್ದೇವೆ. ಗರ್ಭಿಣಿಯರಿಗೂ ಇಲ್ಲಿ ಅಡುಗೆ ಮಾಡಬೇಕು. ಸರ್ಕಾರ ಪ್ರತಿ ಮಗುವಿಗೆ ಕಾಯಿಪಲ್ಯ ಬಳಕೆಗೆ 50 ಪೈಸೆ, ಗರ್ಭಿಣಿಯರು–ಬಾಣಂತಿಯರಿಗೆ ₹ 2 ನೀಡುತ್ತಿದೆ. ಸದ್ಯಕ್ಕೆ ಯಾವ ಅನುದಾನವೂ ಬಂದಿಲ್ಲ. ಎಲ್ಲವನ್ನು ಸ್ವಂತ ಖರ್ಚಿನಿಂದ ಮಾಡುತ್ತಿದ್ದೇನೆ’ ಎಂದು ಅಂಗನವಾಡಿ ಕಾರ್ಯಕರ್ತೆ ಧನಲಕ್ಷ್ಮಿ ಸಮಸ್ಯೆ ಬಿಚ್ಚಿಟ್ಟರು. ಸಮೀಪದ ಆಕಾಶ ಮಕ್ಕಿಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ ಮಗು ಸಾವನ್ನಪ್ಪಿ ವರ್ಷ ಕಳೆದಿಲ್ಲ. ಈ ಅಂಗನವಾಡಿ ಕಟ್ಟಡವೂ ಇಂತಹ ಜಾಗದಲ್ಲಿರುವ ಕಾರಣ ಇನ್ನೊಂದು ಅವಘಡ ಸಂಭವಿಸುವ ಮುನ್ನ ಜನಪ್ರತಿನಿಧಿಗಳು ಹೊಸ ಕಟ್ಟಡ ಉದ್ಘಾಟಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.