ಶಿವಮೊಗ್ಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣ ಮುಚ್ಚಿಹಾಕಲು ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಸರ್ಕಾರ ಮರುಜೀವ ನೀಡಿದೆ’ ಎಂದು ಶಿವಮೊಗ್ಗ ಸಂಸದ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಆರೋಪಿಸಿದರು.
‘ಪೋಕ್ಸೊ ಪ್ರಕರಣದಲ್ಲಿ ಹುರುಳಿಲ್ಲ. ಬಿ ರಿಪೋರ್ಟ್ ಹಾಕಬೇಕಾದ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ. ಈ ವಿಚಾರದಲ್ಲಿ ಸಿಐಡಿ ತನಿಖೆಯೂ ಮುಗಿದಿತ್ತು. ಆದರೆ, ಈಚೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಹೋದ ಮೇಲೆ ಈ ಬೆಳವಣಿಗೆ ನಡೆದಿದೆ’ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ಪ್ರಕರಣದಲ್ಲಿ ಹುರುಳಿಲ್ಲ ಎಂದು ಸ್ವತಃ ಗೃಹ ಸಚಿವರೇ ಈ ಹಿಂದೆ ಹೇಳಿದ್ದರು. ಆದರೆ, ಈಗ ಯಡಿಯೂರಪ್ಪ ಅವರನ್ನು ಬಂಧಿಸಲು ಹೊರಟಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಹಿಂದೆಯೂ ನಮ್ಮ ಕುಟುಂಬಕ್ಕೆ ತೊಂದರೆ ಕೊಡುವ ಪ್ರಯತ್ನ ನಡೆದಿದೆ. ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೊ ಅಡಿ ದೂರು ಕೊಟ್ಟಿದ್ದ ಮಹಿಳೆ ಈ ಹಿಂದೆ ಹಲವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬುದನ್ನು ಗಮನಿಸಬೇಕು. ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರಕಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.