ADVERTISEMENT

ಲಿಂಗನಮಕ್ಕಿ ಜಲಾಶಯ: 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಜೋಗ ಜಲಪಾತದಲ್ಲಿ ಮೈದಳೆಯಲಿದೆ ವೈಭವ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 8:07 IST
Last Updated 1 ಆಗಸ್ಟ್ 2024, 8:07 IST
   

ಶಿವಮೊಗ್ಗ: ಸಾಗರ ತಾಲ್ಲೂಕಿನ ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯ ಭರ್ತಿಯ ಹಂತಕ್ಕೆ ತಲುಪಿದೆ. ಗುರುವಾರ ನದಿಗೆ 10 ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು.

ಜಲಾಶಯದ 11 ಕ್ರಸ್ಟ್‌ ಗೇಟ್‌ಗಳ ಪೈಕಿ ಮೂರು ಗೇಟ್ ತೆಗೆದು ನೀರು ಹರಿಸಲಾಯಿತು. ಅದಕ್ಕೂ ಮುನ್ನ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಶರಾವತಿಗೆ ಪೂಜೆ ಸಲ್ಲಿಸಿದರು.

1,819 ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ ಗುರುವಾರ ಬೆಳಿಗ್ಗೆ 1,814 ಅಡಿ ನೀರಿನ ಸಂಗ್ರಹ ಇದೆ. ಜಲಾಶಯ ಭರ್ತಿ ಆಗಲು ಇನ್ನು ಐದು ಅಡಿಯಷ್ಟು ಮಾತ್ರ ಬಾಕಿ ಇದೆ.

ADVERTISEMENT

ಜಲಾಶಯಕ್ಕೆ 53,061 ಕ್ಯುಸೆಕ್ ಒಳಹರಿವು ಇದೆ. ವಿದ್ಯುದಾಗಾರಕ್ಕೆ 5236 ಕ್ಯುಸೆಕ್ ಸೇರಿದಂತೆ ಜಲಾಶಯದಿಂದ ಸದ್ಯ 15,236 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಿರುವುದರಿಂದ ಮಧ್ಯಾಹ್ನದ ನಂತರ ಜೋಗ ಜಲಪಾತದ ವೈಭವ ಮೈದಳೆಯಲಿದೆ. ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಜೋಗದತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ.

ಕಳೆದ ವರ್ಷ ಮಳೆ ಕೊರತೆಯಿಂದ ಲಿಂಗನಮಕ್ಕಿ ಜಲಾಶಯದಿಂದ ನದಿಗೆ ಕ್ರಸ್ಟ್ ಗೇಟ್ ಮೂಲಕ ನೀರು ಹರಿಸಿರಲಿಲ್ಲ. ಸಂಗ್ರಹಗೊಂಡ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗಿತ್ತು. ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 1,787.9 ಅಡಿ ನೀರಿನ ಸಂಗ್ರಹ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.