ಕಾರ್ಗಲ್: ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಇಳಿಮುಖವಾಗಿದ್ದು, ಮುಂಗಾರು ಉತ್ತಮವಾಗಿ ಸುರಿಯದಿದ್ದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗುವ ಸನ್ನಿವೇಶ ಎದುರಾಗಿದೆ.
ರಾಜ್ಯದ ಜಲ ವಿದ್ಯುದಾಗರಗಳಾದ ಶರಾವತಿ, ಮಹಾತ್ಮ ಗಾಂಧಿ, ಲಿಂಗನಮಕ್ಕಿ, ಅಂಬುತೀರ್ಥ ಮತ್ತು ಶರಾವತಿ ಟೇಲ್ ರೇಸ್ ಯೋಜನೆಗೆ ನೀರು ಪೂರೈಸುವ ಕೆಲಸವನ್ನು ಲಿಂಗನಮಕ್ಕಿ ಜಲಾಶಯ ಮಾಡುತ್ತಾ ಬಂದಿದೆ. 156 ಟಿಎಂಸಿ ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಸದ್ಯ 47.23 ಟಿಎಂಸಿ ಅಡಿ ನೀರು ಮಾತ್ರ ಇದೆ. ಇದು ಜಲಾಶಯದಲ್ಲಿ ಸಂಗ್ರಹವಾಗುವ ಒಟ್ಟು ಸಾಮರ್ಥ್ಯದ ಶೇ 31.15 ಮಾತ್ರ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಒಟ್ಟು 1775.40 ಅಡಿ ನೀರು ಸಂಗ್ರಹವಾಗಿತ್ತು. ಆದರೆ ಭಾನುವಾರ 1751.25 ಅಡಿಗೆ ತಲುಪಿದ್ದು, ಒಳಹರಿವು ಪ್ರಮಾಣ ಸಂಪೂರ್ಣ ನಿಂತಿದೆ. 4426 ಕ್ಯುಸೆಕ್ ನೀರಿನ ಹೊರ ಹರಿವು ಇದೆ. ಹೀಗಾಗಿ ಮುಂಗಾರು ಉತ್ತಮವಾಗಿ ಸುರಿಯದಿದ್ದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗುವ ಸಂಭವ ಇದೆ.
‘ಜಲಾನಯನದ ಪ್ರದೇಶಗಳಾದ ಅಂಬುತೀರ್ಥ, ಹೊಸನಗರ, ತುಮರಿ, ಬ್ಯಾಕೋಡು, ಹೊಳೆಬಾಗಿಲು, ಸಾವೇಹಕ್ಲು ಪ್ರದೇಶಗಳಲ್ಲಿ ಉತ್ತಮ ಮಳೆ ಆದಲ್ಲಿ ಜಲಾಶಯಕ್ಕೆ ಒಳಹರಿವು ಆರಂಭವಾಗುತ್ತದೆ’ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದರು.
ವಿದ್ಯುದಾಗರದ ಭದ್ರತೆಗೆ ಕೈಗಾರಿಕಾ ಭದ್ರತೆ ಪಡೆ ನೇಮಕ: ಶರಾವತಿ ಕೊಳ್ಳದ ಕೆಪಿಸಿ ಒಡೆತನದ ಎಲ್ಲ ಸ್ಥಾವರಗಳಿಗೂ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ನೇಮಿಸಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಆ ಕೂಗು ಈಗ ಸಾಕಾರಗೊಂಡಿದೆ.
ಲಿಂಗನಮಕ್ಕಿ ಜಲಾಶಯ, ಶರಾವತಿ ಕಣಿವೆ ಪ್ರದೇಶದ ಜಲವಿದ್ಯುದಾಗರಗಳಿಗೆ 1964ರಿಂದ ಕೆಪಿಸಿ ಭದ್ರತಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮೀಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಭದ್ರತಾ ಸಿಬ್ಬಂದಿಯನ್ನು ಖಾಸಗಿ ಏಜೆನ್ಸಿ ಮೂಲಕ ನೇಮಿಸಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.