ಶಿವಮೊಗ್ಗ: ಇಲ್ಲಿನ ಶರಾವತಿ ಕಣಿವೆಯಲ್ಲಿ ಈಗ ಮುಂಗಾರಿನ ವೈಭವ ಕಳೆಗಟ್ಟಿದೆ. ಇಳೆ-ಮಳೆಯ ನಡುವೆ ಪ್ರೇಮ ರಾಗದ ಉತ್ಕಟತೆಯ ನವಿರು ಭಾವ ಚಾಲ್ತಿಯಲ್ಲಿದೆ.
ಕಾರ್ಗಲ್ ಪಟ್ಟಣ, ಜೋಗ ಜಲಪಾತದ ಪರಿಸರ, ಸೈನಾ ಗೇಟ್, ಬ್ರಿಟಿಷ್ ಬಂಗ್ಲೊ, ರಾಜಾಕಲ್ಲು, ಮಾವಿನಗುಂಡಿ, ಸೀತಾಕಟ್ಟೆ, ಬಿದರೂರು, ಮಳಲಿ, ಶಿರೂರು ಕೆರೆ, ಲಿಂಗನಮಕ್ಕಿ, ತಳಕಳಲೆ ಹೀಗೆ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ವ್ಯಾಪ್ತಿಯ ಶರಾವತಿ ಕೊಳ್ಳದಲ್ಲಿ ದಿನವಿಡಿ ಮೋಡ-ಮಳೆ, ಮಂಜು, ಸುಳಿರ್ಗಾಳಿಯದ್ದೇ ದಿಬ್ಬಣ..
ಸುತ್ತಲಿನ ಗಿರಿ ಶ್ರೇಣಿಯಿಂದ ಗಾಂಭೀರ್ಯ, ವೈಯ್ಯಾರ, ಗರ್ವ, ಶರವೇಗದಿಂದ ರಾಜಾ, ರಾಣಿ, ರೋರರ್, ರಾಕೆಟ್ ಧುಮ್ಮಿಕ್ಕುತ್ತಿವೆ. ಆದರೆ ಈ ಹಬ್ಬವ ಕಣ್ತುಂಬಿಕೊಳ್ಳುವುದೇ ದೊಡ್ಡ ಸವಾಲು. ಜಲಪಾತದ ದೃಶ್ಯ ಕಾವ್ಯಕ್ಕೆ ದೃಷ್ಟಿ ತೆಗೆಯುವಂತೆ ಆಗಾಗ ನೆಲ-ಮುಗಿಲಿನುದ್ದಕ್ಕೂ ಮಂಜಿನ ಪರದೆ ಹರಡಿ ನಿಲ್ಲುತ್ತದೆ. ಇಳೆ-ಮಳೆಯ ನಡುವಿನ ಪಿಸುಮಾತಿಗೆ, ಕನವರಿಕೆಗೆ, ಅಪ್ಪುಗೆಗೆ, ಕಚಗುಳಿಗೆ ಸಾಕ್ಷಿಯಾಗುತ್ತಿದೆ.
ಆಗಾಗ ಸರಿದು, ಮತ್ತೆ ಹರಡುವ ದಟ್ಟ ಮಂಜಿನ ಪರದೆಯ ನಡುವೆ ಜಲಪಾತದ ನೋಟ ಕಣ್ತುಂಬಿಕೊಳ್ಳಲು ನಿಂತವರದ್ದು ನಿರೀಕ್ಷೆಯ ಧ್ಯಾನಸ್ಥ ಭಾವ.. ಜೊತೆಗೆ ನಿರಾಸೆಯ ಖಾಲಿತನ. ಸ್ಪಷ್ಟ, ಅಸ್ಪಷ್ಟತೆ ನಡುವೆ ನೀರ ಹಾದಿ ಕಾಣಸಿಕ್ಕರೆ ಮಾತ್ರ ಅದು ದೇವರು ರುಜು ಮಾಡಿದ ಹೊತ್ತು.. ಜಲಪಾತದ ನೆತ್ತಿಯತ್ತ ಕಣ್ಣು, ಕ್ಯಾಮೆರಾ ನೆಟ್ಟು ನಿಂತವರಿಗೆ ಮಳೆಯ ಮಜ್ಜನದ ಅನುಭೂತಿ.
ಮುಗಿಲ ಹಾದಿಯಿಂದ ಹಾಲ್ನೊರೆಯೇ ನೆಲಕ್ಕೆ ಹರಡಿದಂತೆ ತೋರುತ್ತಿದ್ದ ಜೋಗ ಜಲಪಾತ ಈಗ ಲಿಂಗನಮಕ್ಕಿ ಅಣೇಕಟ್ಟೆಯಿಂದ ಹೊರಬಿದ್ದ ಶರಾವತಿಯ ಧಾರೆ ಜೊತೆಗೂಡಿ ಮೈದುಂಬಿದೆ. ನಾಚಿದ ನೀರೆಯಂತೆ ಕೆಂಬಣ್ಣ ಹೊದ್ದಿದೆ.
ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಹರಿಸಿರುವ ವಿಚಾರ ತಿಳಿದು ಜೋಗ ಜಲಪಾತ ನೋಡಲು ಮಧ್ಯಾಹ್ನದಿಂದಲೇ ಸಾವಿರಾರು ಮಂದಿ ಪ್ರವಾಸಿಗರು ಬಂದಿದ್ದರು. ಸಂಜೆಯಾಗುತ್ತಿದ್ದಂತೆಯೇ ಅವರ ಸಂಖ್ಯೆ ಹೆಚ್ಚುತ್ತಲೇ ಇತ್ತು.
ಜಲಪಾತದ ಪರಿಸರದಲ್ಲಿ ಜೋಗ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಕಾಮಗಾರಿಯ ಸ್ಥಳ ನಿರ್ಮಾಣ ಸಾಮಗ್ರಿ, ಯಂತ್ರಗಳ ನಡುವೆ ಯುದ್ಧ ಭೂಮಿಯಂತೆ ಕಂಡರೂ ಅದರ ಎದುರಿನ ಕಣಿವೆಯಲ್ಲಿನ ನೀರ ಹಾದಿಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಛತ್ರಿ ಹಿಡಿದು ಸಾಲುಗಟ್ಟಿದ್ದು ಕಂಡು ಬಂತು.
ಶಿವಮೊಗ್ಗದಿಂದ ಬಂದಿದ್ದ ಕಲಾ, ರಶ್ಮಿ ಹಾಗೂ ಗೆಳತಿಯರ ಬಳಗ ಛತ್ರಿ ಹಿಡಿದು ಗುಂಪಾಗಿ ನಿಂತು ಜೋಗದ ಸಿರಿ ಬೆಳಕಿನಲ್ಲಿ ಹಾಡಿಗೆ ದನಿಗೂಡಿಸಿತ್ತು. ನಾಲ್ಕು ಜಲಧಾರೆಗಳ ಪಕ್ಕದ ಮಾವಿನಗುಂಡಿ ಜಲಪಾತವೂ ತಾನೇನೂ ಕಮ್ಮಿಯೇ ಎಂಬಂತೆ ಬಿಗುಮಾನ ಬೆರೆತ ವೈಯ್ಯಾರ ತೋರುತ್ತಿತ್ತು.
ಸ್ವಂತ ವಾಹನ, ಬಸ್ ಹಿಡಿದು, ಸಮೀಪದ ತಾಳಗುಪ್ಪಕ್ಕೆ ರೈಲಿನಲ್ಲಿ ಬಂದು ಅಲ್ಲಿಂದ ಜೋಗದತ್ತ ಪ್ರವಾಸಿಗರು ಬರುತ್ತಿದ್ದರು. ಜಲಪಾತ ಮೈದುಂಬುತ್ತಿದ್ದಂತೆಯೇ ಸುತ್ತಲಿನ ಹೋಟೆಲ್, ರೆಸಾರ್ಟ್, ಹೋಂ ಸ್ಟೇ, ಪ್ರವಾಸಿ ಮಂದಿರ, ತಂಗು ಕುಟೀರ ಜೀವ ಪಡೆದಿವೆ. ಶಿವಮೊಗ್ಗ-ಸಾಗರ-ಜೋಗ ನಡುವಿನ ಬಸ್‌ಗಳಲ್ಲೂ ಜನದಟ್ಟಣೆ ಕಾಣಸಿಕ್ಕಿತು.
ಡ್ಯಾಂನಿಂದ ನೀರು ಬಿಡುವ ಮಾಹಿತಿ ಇತ್ತು. ಹೀಗಾಗಿ ಜೋಗಕ್ಕೆ ಬಂದಿದ್ದೇವೆ. 2 ಗಂಟೆಯಿಂದ ಕಾದು ನಿಂತು ಜಲಪಾತ ವೀಕ್ಷಣೆ ಮಾಡಿದ್ದೇನೆ. ಈ ಪ್ರಕೃತಿಯ ಸಿರಿ ಅದ್ಭುತ..-ಚಂದನ ವಿದ್ಯಾರ್ಥಿನಿ, ರಿಪ್ಪನ್‌ಪೇಟೆ
ನೋಡಲು ತುಂಬಾ ಖುಷಿ ಆಗುತ್ತಿದೆ. ಜೋಗದಲ್ಲಿ ನಾಲ್ಕು ವರ್ಷಗಳ ನಂತರ ಈ ಸಮೃದ್ಧಿ ಕಳೆಗಟ್ಟಿದೆ.-ಅಶ್ವಿನಿ, ಸ್ಥಳೀಯರು
ನಾಲ್ಕು ವರ್ಷಗಳ ನಂತರ ಭರ್ತಿಯತ್ತ ಜಲಾಶಯ
1819 ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ ಗುರುವಾರ ಬೆಳಿಗ್ಗೆ 1814 ಅಡಿ ನೀರಿನ ಸಂಗ್ರಹ ಇದೆ. ಜಲಾಶಯ ಭರ್ತಿ ಆಗಲು ಇನ್ನು ಐದು ಅಡಿಯಷ್ಟು ಮಾತ್ರ ಬಾಕಿ ಇದೆ. ಜಲಾಶಯಕ್ಕೆ 53061 ಕ್ಯುಸೆಕ್ ಒಳಹರಿವು ಇದೆ. ವಿದ್ಯುದಾಗಾರಕ್ಕೆ 5236 ಕ್ಯುಸೆಕ್ ಸೇರಿದಂತೆ ಜಲಾಶಯದಿಂದ ಸದ್ಯ 15236 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಕಳೆದ ವರ್ಷ ಮಳೆ ಕೊರತೆಯಿಂದ ಲಿಂಗನಮಕ್ಕಿ ಜಲಾಶಯದಿಂದ ನದಿಗೆ ಕ್ರಸ್ಟ್ ಗೇಟ್ ಮೂಲಕ ನೀರು ಹರಿಸಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಜಲಾಶಯ ಭರ್ತಿ ಆಗಿರಲಿಲ್ಲ. ಜಲಾಶಯದಲ್ಲಿ ಸಂಗ್ರಹಗೊಂಡ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗಿತ್ತು. ಲಿಂಗನಮಕ್ಕಿಯಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 1787.9 ಅಡಿ ನೀರಿನ ಸಂಗ್ರಹ ಇತ್ತು.
ಸರ್ವ ಋತು ಪ್ರವಾಸಿ ತಾಣವಾಗಿ ಜೋಗ ಅಭಿವೃದ್ಧಿ: ಬೇಳೂರು
ಶಿವಮೊಗ್ಗ: ಸರ್ವ ಋತು ಪ್ರವಾಸಿ ತಾಣವಾಗಿ ಜೋಗ ಜಲಾಶಯದ ಪರಿಸರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಲಿಂಗನಮಕ್ಕಿ ಜಲಾಶಯಕ್ಕೆ ಗುರುವಾರ ಪೂಜೆ ಸಲ್ಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೋಗ ಜಲಪಾತವನ್ನು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ₹183 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ಜೋಗದ ಅಭಿವೃದ್ಧಿಗೆ ಬಿಜೆಪಿಯವರು ಅನುದಾನ ಘೋಷಿಸಿದ್ದರು. ಆದರೆ ನಯಾ ಪೈಸೆ ಕೊಟ್ಟಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದರಲ್ಲಿ ₹90 ಕೋಟಿ ಅನುದಾನ ನಾನು ತಂದಿದ್ದೇನೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಹಾಗೂ ಮುಂಬೈನ ಪ್ರವಾಸಿ ತಾಣಗಳ ಮಾದರಿಯಲ್ಲಿ ಜೋಗವನ್ನು ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಪ್ರವಾಸಿಗರಿಗೆ ರೇನ್ ಡ್ಯಾನ್ಸ್‌ಗೂ ಅವಕಾಶ ಕಲ್ಪಿಸಲಾಗುವುದು ಎಂದರು.
ಸಾಗರ ತಾಲೂಕಿನಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. 100ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಮಳೆಯಿಂದ ಸಂಪೂರ್ಣ ಹಾನಿಯಾದ ಮನೆಗಳಿಗೆ ₹1.20 ಲಕ್ಷ ಪರಿಹಾರ ನೀಡಲಾಗುತ್ತಿದೆ. ಅದನ್ನು ₹5 ಲಕ್ಷಕ್ಕೆ ಹೆಚ್ಚಿಸಲು ಶೀಘ್ರ ಸಂಪುಟ ಸಭೆಯಲ್ಲಿ ಸಿಎಂ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಒತ್ತಡಕ್ಕೆ ಮಣಿದು ನೀರು ಬಿಡುಗಡೆ?
ಕಳೆದ ನಾಲ್ಕು ವರ್ಷಗಳಿಂದ ಲಿಂಗನಮಕ್ಕಿ ಜಲಾಶಯ ಭರ್ತಿ ಆಗಿಲ್ಲ. ಶರಾವತಿ ನದಿ ಪಾತ್ರವನ್ನು ಒತ್ತುವರಿ ಮಾಡಿ ಹಲವರು ಕಟ್ಟಡ ಕೃಷಿ ರೆಸಾರ್ಟ್ ಮಾಡಿಕೊಂಡಿದ್ದಾರೆ. ಜಲಾಶಯದಿಂದ ಒಮ್ಮೆಲೆ ಹೆಚ್ಚು ಬಿಟ್ಟರೆ ಒತ್ತುವರಿ ಜಾಗಕ್ಕೆ ನೀರು ನುಗ್ಗಲಿದೆ ಎಂಬ ಕಾರಣಕ್ಕೆ ಒತ್ತಡ ಹಾಕಿ ಜಲಾಶಯ ಭರ್ತಿ ಆಗುವ ಮುನ್ನವೇ ನದಿಗೆ ನೀರು ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮೂರು ದಿನಗಳ ಹಿಂದೆ ಕಾರ್ಗಲ್‌ಗೆ ಭೇಟಿ ಕೊಟ್ಟಿದ್ದು ಕೆಪಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 1819 ಅಡಿ. ಸಾಮಾನ್ಯವಾಗಿ ಜಲಾಶಯದಲ್ಲಿ 1817 ಅಡಿ ನೀರು ಸಂಗ್ರಹಗೊಂಡ ನಂತರ ನದಿಗೆ ನೀರು ಹರಿಸಲಾಗುತ್ತಿತ್ತು. ಆದರೆ ಈಗ ಇನ್ನೂ ಐದು ಅಡಿ ಇರುವಾಗಲೇ ನದಿಗೆ ನೀರು ಹರಿಸಲಾಗಿದೆ.
ಆ ಐದು ಅಡಿ ನೀರಿನಲ್ಲಿ ಕನಿಷ್ಟ 3 ತಿಂಗಳು ಕಾಲ ವಿದ್ಯುತ್ ಉತ್ಪಾದನೆ ಮಾಡಬಹುದಿತ್ತು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.