ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಈಗ ಅನಾಥ ಕರಡಿ ಮರಿಗಳಿಗೆ ಆಶ್ರಯ ತಾಣವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಜೋಗಿಮಟ್ಟಿ ಸಮೀಪ ಈಚೆಗೆ 15 ದಿನಗಳ ಎರಡು ಮರಿಗಳು ನಿರಂತರವಾಗಿ ಕಿರುಚುತ್ತಿದ್ದವು. ಸಾರ್ವಜನಿಕರ ನೀಡಿದ ಮಾಹಿತಿ ಮೇಲೆ ಅರಣ್ಯ ಇಲಾಖೆ ಅವುಗಳನ್ನು ಸಂರಕ್ಷಿಸಿತ್ತು. ನಂತರ ಹೆಚ್ಚಿನ ಚಿಕಿತ್ಸೆ ಹಾಗೂ ಸೂಕ್ತ ಆರೈಕೆಗಾಗಿ ಇಲ್ಲಿಗೆ ಕಳುಹಿಸಿದ್ದರು.
ಎರಡೂ ಮರಿಗಳನ್ನು ಸುರಕ್ಷಿತ ವಲಯದಲ್ಲಿ ಇಡಲಾಗಿದೆ. ಹಾಲು, ಹಣ್ಣು ನೀಡಲಾಗುತ್ತಿದೆ. ವನ್ಯಜೀವಿ ವಿಭಾಗದ ವೈದ್ಯ ಡಾ.ಸುಜಯ್ ಅವರ ತಂಡ ಆರೈಕೆ ಮಾಡುತ್ತಿದೆ. ಮರಿಗಳು ಚೇತರಿಸಿಕೊಳ್ಳುತ್ತಿವೆ. ಸದ್ಯ ಧಾಮದಲ್ಲಿ ಎರಡು ಕರಡಿಗಳು ಇವೆ. ಈ ಮರಿಗಳನ್ನು ಕೆಲವು ತಿಂಗಳ ನಂತರ ಸಾರ್ವಜನಿಕ ಪ್ರದರ್ಶನಕ್ಕೆ ಬಿಡಲಾಗುವುದು ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ನೀಲ್‌ಗಾಯ್ ಆಕರ್ಷಣೆ: ಇದೇ ಮೊದಲ ಬಾರಿ ಸಿಂಹಧಾಮಕ್ಕೆ 6 ನೀಲ್‌ಗಾಯ್ ಪ್ರಾಣಿಗಳನ್ನು ತರಲಾಗಿದೆ. ಮೈಸೂರಿನಿಂದ ಬಂದಿರುವ ಈ ಪ್ರಾಣಿಗಳು ಮಕ್ಕಳಿಗೆ ವಿಶೇಷ ಆಕರ್ಷಣೆ ನೀಡುತ್ತಿವೆ.
ಧಾಮದ ನವೀಕರಣಕ್ಕೆ ಈಗಾಗಲೇ ಅನುಮೋದನೆ ದೊರಕಿದೆ. ಹಳೆಯ ಸುರಕ್ಷಿತ ಪಂಜರ ತೆರವುಗೊಳಿಸಿ, ಎತ್ತರ ಹಾಗೂ ವಿಶಾಲವಾಗಿ 32 ಹೊಸ ಪಂಚರಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ನೆಲೆಸುವ ಪ್ರಾಣಿಗಳಿಗೆ ಅರಣ್ಯದಲ್ಲಿ ಜೀವಿಸುವ ಅನುಭವ ದೊರಕಲಿದೆ. ಮೊಸಳೆ ಪಾರ್ಕ್ ಸಹ ಮತ್ತಷ್ಟು ವಿಸ್ತಾರವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.