ADVERTISEMENT

ಡಿಸಿಸಿ ಬ್ಯಾಂಕ್‌ | ಲಂಚಕ್ಕಾಗಿ ಸಾಲ ಮಂಜೂರು: ಆಯನೂರು ಮಂಜುನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:06 IST
Last Updated 27 ಜೂನ್ 2024, 16:06 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ‘ನೇಮಕ ಮಾಡಿಕೊಂಡವರಿಗೆ ಲಂಚ ಕೊಡಲು ಇಲ್ಲಿನ ಡಿಸಿಸಿ ಬ್ಯಾಂಕಿನ 98 ಉದ್ಯೋಗಿಗಳಿಗೆ ಪ್ರೊಬೇಷನರಿ ಅವಧಿ ಮುಗಿಯುವ ಮುನ್ನವೇ ಸರಾಸರಿ ತಲಾ ₹7ರಿಂದ 8 ಲಕ್ಷ ಸಾಲ ಮಂಜೂರು ಮಾಡಲಾಗಿದೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ವಿಚಿತ್ರ ಎಂದರೆ ಈ ಸಾಲದ ಮೊತ್ತ ಒಂದೇ ಅವಧಿಯಲ್ಲಿ ಬಿಡುಗಡೆಯಾಗಿ ಏಕಕಾಲದಲ್ಲೇ ಡ್ರಾ ಕೂಡ ಆಗಿದೆ.  ಪೂರ್ವ ನಿಗದಿಯಂತೆ ಲಂಚ ಕೊಡಲು ಸಾಲ ನೀಡಲಾಗಿದೆ. ಬ್ಯಾಂಕಿನ ಇತಿಹಾಸದಲ್ಲಿ ಲಂಚಕ್ಕಾಗಿ ಸಾಲ ಮಂಜೂರು ಮಾಡಿದ್ದು ಇದೇ ಮೊದಲು. ತನಿಖೆ ಮಾಡಿದರೆ ಹಗರಣದ ಸಂಪೂರ್ಣ ಹೂರಣ ಹೊರಗೆ ಬರುತ್ತದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಆ ಪಕ್ಷದ ಮುಖಂಡರ ಕೈಯಲ್ಲಿತ್ತು. ಆ ವೇಳೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ಈ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಒಂದೊಂದು ಹುದ್ದೆಗೂ ₹45-50 ಲಕ್ಷ  ಪಡೆಯಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಿಕೊಳ್ಳಲಾಗಿದೆ. ಅರ್ಹತೆ ಇಲ್ಲದವರಿಗೂ ಕೂಡ ಹುದ್ದೆ ನೀಡಲಾಗಿದೆ. ಕೆಲವು ನಿರ್ದೇಶಕರನ್ನು ಹೊರತುಪಡಿಸಿದರೆ ಇಡೀ ಆಡಳಿತ ಮಂಡಳಿ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು.

ADVERTISEMENT

ಅಕ್ರಮಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕಲೆ ಹಾಕಿದ್ದೇವೆ. ಉನ್ನತಮಟ್ಟದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇಡೀ ಪ್ರಕ್ರಿಯೆಯ ಉನ್ನತ ಮಟ್ಟದ ತನಿಖೆಯಾಗಲೇಬೇಕು ಆಗ್ರಹಿಸಿದರು. 

ಪರೀಕ್ಷಾ ಪದ್ಧತಿಯೇ ಸರಿ ಇರಲಿಲ್ಲ. ಲಿಖಿತ ಪರೀಕ್ಷೆಯನ್ನು ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಯಾವುದಾದರೂ ಶಿಕ್ಷಣ ಸಂಸ್ಥೆಗೆ ನೀಡಬೇಕಿತ್ತು. ಯಾರ ಒಪ್ಪಿಗೆಯೂ ಇಲ್ಲದೇ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸೇರಿಕೊಂಡು ಅಕ್ಕಮಹಾದೇವಿ ವಿವಿಗೆ ನೀಡಿದ್ದರು. ಅವರು ಯೋಜನಾ ವರದಿ ನೀಡುವ ಮುನ್ನವೇ ಆ ವಿವಿಗೆ ₹40 ಲಕ್ಷ ಪಾವತಿಸಲಾಗಿದೆ ಎಂದು ದೂರಿದರು.

ಇಡೀ ನೇಮಕ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಿಸಲಾಗಿದೆ. ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಗಳನ್ನು ಕೂಡ ವಾಪಸ್ ಪಡೆಯಲಾಗಿದೆ. ಪರೀಕ್ಷೆಯಲ್ಲಿ ಪಡೆದಿರುವ ಮೆರಿಟ್ ಅಂಕಗಳನ್ನು ಆಡಳಿತ ಮಂಡಳಿಗೆ ಮಂಡಿಸಿರುವುದಿಲ್ಲ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನಕ್ಕೆ ಮಾಹಿತಿ ಕೂಡ ನೀಡಿಲ್ಲ. ಸಂದರ್ಶನದ ಕರೆ ಪತ್ರ ನೀಡದೇ ದೂರವಾಣಿ ಮೂಲಕ ಕರೆಸಿಕೊಂಡು ಸಂದರ್ಶನ ಮಾಡಲಾಗಿದೆ. ಆದೇಶವನ್ನೂ ಕೂಡ ಅಂಚೆ ಮೂಲಕ ಕಳಿಸದೆ ಖುದ್ದಾಗಿ ಕರೆಸಿಕೊಂಡು ಮಾಡಲಾಗಿದೆ. ಇವೆಲ್ಲವೂ ನಿಯಮಕ್ಕೆ ವಿರುದ್ಧವಾಗಿವೆ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬ್ಯಾಂಕಿನ ಅಂದಿನ ಅಧ್ಯಕ್ಷ ಚನ್ನವೀರಪ್ಪ ಅವರಿಗೆ ’ಪ್ರಜಾವಾಣಿ’ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ  ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ, ಎಸ್.ಟಿ. ಹಾಲಪ್ಪ, ಸಿ.ಎಸ್. ಚಂದ್ರಭೂಪಾಲ್, ಯು. ಶಿವಾನಂದ್, ಶಿ.ಜು. ಪಾಶಾ, ಮಂಜುನಾಥ್ ಡಿ. ಅರಗವಳ್ಳಿ ಇದ್ದರು

ಖಾತೆಯಿಂದ ಹಣ ವಾಪಸ್..
ಬ್ಯಾಂಕಿನ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಿಸಿದ್ದು ಬಾಕಿ ಮೊತ್ತ ₹714 ಕೋಟಿಯನ್ನು ನೌಕರರ ಉಳಿತಾಯ ಖಾತೆಗೆ ಜಮಾ ಮಾಡಿ ಅದೇ ದಿನ ಖಾತೆಯಿಂದ ಹಣ ವಾಪಸ್ ಪಡೆದು ಒಕ್ಕೂಟದ ಪದಾಧಿಕಾರಿಗಳ ಮೂಲಕ ಅಂದಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರ್ದೇಶಕರಿಗೆ ಹಂಚಲಾಗಿದೆ ಎಂದು ಆಯನೂರು ಮಂಜುನಾಥ್ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.