ADVERTISEMENT

ಶಿವಮೊಗ್ಗ | ಕೊಲ್ಲಿಬಚ್ಚಲು, ಕರಡಿಬೆಟ್ಟ ಅರಣ್ಯಪ್ರದೇಶ ಶಾಶ್ವತ ಕೈತಪ್ಪುವ ಭೀತಿ

ಬಿ.ಎಚ್‌.ರಸ್ತೆ ಪಥ ಬದಲಿಗೆ ಸ್ಥಳೀಯರು, ಪರಿಸರಾಸಕ್ತರ ವಿರೋಧ

ವೆಂಕಟೇಶ ಜಿ.ಎಚ್.
Published 5 ಜುಲೈ 2024, 6:25 IST
Last Updated 5 ಜುಲೈ 2024, 6:25 IST
ಬಿ.ಎಚ್‌.ರಸ್ತೆ ಪಥ ಬದಲಾದರೆ ಹೊಸ ರಸ್ತೆ ಹಾಯ್ದು ಹೋಗುವ ಕೊಲ್ಲಿ ಬಚ್ಚಲು ಕೆರೆ ಪ್ರದೇಶದ ನೋಟ
ಬಿ.ಎಚ್‌.ರಸ್ತೆ ಪಥ ಬದಲಾದರೆ ಹೊಸ ರಸ್ತೆ ಹಾಯ್ದು ಹೋಗುವ ಕೊಲ್ಲಿ ಬಚ್ಚಲು ಕೆರೆ ಪ್ರದೇಶದ ನೋಟ   

ಶಿವಮೊಗ್ಗ: ಬೆಂಗಳೂರು–ಹೊನ್ನಾವರ ಸಂಪರ್ಕಿಸುವ (ಬಿ.ಎಚ್.ರಸ್ತೆ) ರಾಷ್ಟ್ರೀಯ ಹೆದ್ದಾರಿ- 206ರ ವಿಸ್ತರಣೆ ವೇಳೆ ಶಿವಮೊಗ್ಗ ತಾಲ್ಲೂಕಿನ ತುಪ್ಪೂರು ಬಳಿ ಅದರ ಪಥ ಬದಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ. ಇದು ಸ್ಥಳೀಯರು ಹಾಗೂ ಜಿಲ್ಲೆಯ ಪರಿಸರಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿಗೆ ಭೂಮಿ ಕಳೆದುಕೊಳ್ಳಲಿರುವ ರೈತರಲ್ಲೂ ಆತಂಕ ಮೂಡಿಸಿದೆ.

ಬಿ.ಎಚ್‌. ರಸ್ತೆಯನ್ನು ನಾಲ್ಕು ಪಥಕ್ಕೆ ವಿಸ್ತರಿಸಲು ಎನ್‌ಎಚ್‌ಎಐ ಕಾಮಗಾರಿ ಕೈಗೆತ್ತಿಕೊಂಡಿದೆ. ಅದರಡಿ ಸಾಗರ ತಾಲ್ಲೂಕಿನ ಗಿಳಾಲಗುಂಡಿಯಿಂದ ಶಿವಮೊಗ್ಗ ತಾಲ್ಲೂಕಿನ ಕೋಣೆ ಹೊಸೂರು ಮಧ್ಯೆ ಹಾಲಿ ಇರುವ ಹೆದ್ದಾರಿಯ ಬದಲು ಕೊಲ್ಲಿ ಬಚ್ಚಲು- ಕರಡಿ ಬೆಟ್ಟ ಅರಣ್ಯ ಪ್ರದೇಶದಲ್ಲಿ ಗುಡ್ಡ ಸೀಳಿ ಹೊಸದಾಗಿ ಹೆದ್ದಾರಿ ನಿರ್ಮಿಸಲು ಪ್ರಾಧಿಕಾರ ಯೋಜನೆ ರೂಪಿಸಿದೆ. ಹೆದ್ದಾರಿಯಲ್ಲಿ ತಿರುವು ತಪ್ಪಿಸಿ ನೇರ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಇಲ್ಲಿ ಪಥ ಬದಲಿಸುವ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ.

ನೋಟಿಸ್ ನೀಡಿಕೆ: ಬದಲಾದ ಪಥದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಳ್ಳಲು ಗಿಳಾಲುಗುಂಡಿ ಗ್ರಾಮಸ್ಥರಿಗೆ ವಿಶೇಷ ಭೂಸ್ವಾಧೀನಾಧಿಕಾರಿಯೂ ಆದ ಸಾಗರ ಉಪವಿಭಾಗಾಧಿಕಾರಿ ಈಚೆಗೆ ನೋಟಿಸ್ ಕೊಟ್ಟಿದ್ದಾರೆ. ಭೂಮಿ ಸ್ವಾಧೀನದ ವಿಚಾರದಲ್ಲಿ ಪರಿಹಾರ ನಿರ್ಧರಿಸಲು ಸೂಕ್ತ ದಾಖಲೆಗಳೊಂದಿಗೆ ಜುಲೈ 6ರಂದು ಸಾಗರದ ತಮ್ಮ ಕಚೇರಿಗೆ ಬರುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಇದರ ನಡುವೆ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವಂತೆ ಹೆದ್ದಾರಿ ಪ್ರಾಧಿಕಾರ ಅರಣ್ಯ ಇಲಾಖೆಗೂ ಪ್ರಸ್ತಾವ ಸಲ್ಲಿಸಿದೆ.

ADVERTISEMENT

ಅರಣ್ಯ ನಾಶದ ಭೀತಿ: ‘ಹೊಸ ರಸ್ತೆ ನಿರ್ಮಾಣದಿಂದ ತುಪ್ಪೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಲ್ಲಿ ಬಚ್ಚಲು ಕಣಿವೆ ಪ್ರದೇಶದ 500 ಎಕರೆಯಷ್ಟು ಅರಣ್ಯ ಸಂಪೂರ್ಣ ನಾಶವಾಗಲಿದೆ. ಇದರಿಂದ ಸಾವಿರಾರು ಮರಗಳ ಮಾರಣ ಹೋಮವಾಗಲಿದೆ’ ಎಂದು ಪರಿಸರಾಸಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಕೊಲ್ಲಿಬಚ್ಚಲು ಕಣಿವೆ ಪ್ರದೇಶದ ಕರಡಿ ಬೆಟ್ಟ ಆನೆ, ಹುಲಿ, ಕರಡಿ, ಚಿರತೆ, ಕಾಡೆಮ್ಮೆ ಸೇರಿದಂತೆ ಅಳಿವಿನಂಚಿನಿಲ್ಲಿರುವ ವನ್ಯ ಜೀವಿಗಳ ಆವಾಸ ಸ್ಥಾನ. ಇಲ್ಲಿ ಕಾಡು ನಾಶ ಮಾಡಿ ಹೊಸದಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದರೆ ಅವುಗಳ ನೈಸರ್ಗಿಕ ನೆಲೆಗೆ ಧಕ್ಕೆಯಾಗಲಿದೆ’ ಎಂದು ವೃಕ್ಷ ಲಕ್ಷ ಆಂದೋಲನದ ಮುಖ್ಯಸ್ಥ, ಶಿರಸಿಯ ಅನಂತ ಹೆಗಡೆ ಆಶೀಸರ ಹೇಳುತ್ತಾರೆ.

ರಸ್ತೆ ನಿರ್ಮಾಣಕ್ಕೆ ಕಣಿವೆಯ ಎತ್ತರದ ಗುಡ್ಡಗಳನ್ನು ಕತ್ತರಿಸುವ ದುಸ್ಸಾಹಸಬೇಡ. ಅಲ್ಲಿನ ಹಳ್ಳಿಗಳು ಹಾಗೂ ಅರಣ್ಯ ಪ್ರದೇಶ ಭೂ ಕುಸಿತದಿಂದ ನಿರ್ನಾಮವಾಗಲಿವೆ ಎಂದು ಆಶೀಸರ ಆತಂಕ ವ್ಯಕ್ತಪಡಿಸುತ್ತಾರೆ.

ಜಲಮೂಲಕ್ಕೆ ಹಾನಿ: ‘ಗಿಳಾಲಗುಂಡಿಯ ಅಮ್ಮನಕೆರೆ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಕೊಲ್ಲಿ ಬಚ್ಚಲು ಕಣಿವೆಯೇ ಅದಕ್ಕೆ ಜಲಮೂಲ. ಕೆರೆಯನ್ನು ವಿಭಜಿಸಿ ಹೆದ್ದಾರಿ ನಿರ್ಮಿಸಿದರೆ ಜಲಮೂಲಕ್ಕೆ ಹಾನಿಯಾಗುತ್ತದೆ’ ಎಂದು ಮಾಜಿ ಶಾಸಕ ಧರ್ಮಪ್ಪ ಅವರ ಪುತ್ರಿ ಗಿಳಾಲಗುಂಡಿಯ ರೂಪಾ ಹೇಳುತ್ತಾರೆ.

ಕರಡಿ ಬೆಟ್ಟದ ಮೂಲಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂದು ಸಾಗರ ಡಿಸಿಎಫ್‌ಗೆ ಮನವಿ ಸಲ್ಲಿಸಿದ್ದೇವೆ ಎಂದು ವೃಕ್ಷ ಲಕ್ಷ ಆಂದೋಲನದ ಸಂಚಾಲಕ ಕೆ.ವೆಂಕಟೇಶ ತಿಳಿಸಿದರು.

ಬಿ.ಎಚ್‌.ರಸ್ತೆಯ ಪಥ ಬದಲಿಗೆ ವಿರೋಧ ವ್ಯಕ್ತಪಡಿಸಿ ಮಂಗಳವಾರ ಕೊಲ್ಲಿ ಬಚ್ಚಲು ಪ್ರದೇಶದಲ್ಲಿ ನಡೆದ ಸಭೆಯ ನೋಟ

ಹೆದ್ದಾರಿಯ ಪಥ ಬದಲಿ ವಿರೋಧಿಸಿ ನಿರ್ಣಯ

ರಾಷ್ಟ್ರೀಯ ಹೆದ್ದಾರಿಯ ಬದಲಿ ಪಥ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ಅನಂತ ಹೆಗಡೆ ಅಶೀಸರ ಹಾಗೂ ಗಿಳಾಲಗುಂಡಿ ಗ್ರಾಮದ ಮುಖಂಡ ಚಂದ್ರಪ್ಪ ನೇತೃತ್ವ ಜುಲೈ 2ರಂದು ಕೊಲ್ಲಿಬಚ್ಚಲಿನಲ್ಲಿ ಸಭೆ ನಡೆಸಿದರು. ಕರಡಿ ಬೆಟ್ಟದ ಮೂಲಕ ಹೊಸ ರಸ್ತೆ ನಿರ್ಮಾಣ ಮಾಡುವ ಯೋಜನೆ ಕೈಬಿಟ್ಟು ಈಗಾಗಲೇ ಇರುವ ಗಿಳಾಲಗುಂಡಿ-ಕೋಣೆ ಹೊಸೂರು ರಸ್ತೆಯನ್ನೇ ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲು ಸಭೆ ನಿರ್ಣಯ ಕೈಗೊಂಡಿತು.

ನಾವು ಅಭಿವೃದ್ಧಿ ವಿರೋಧಿಗಳು ಅಲ್ಲ. ಕಾಡು ಕಡಿದು ಹೊಸ ರಾಷ್ಟ್ರೀಯ ಹೆದ್ದಾರಿ ಮಾಡುವ ಬದಲು ಈಗಿರುವ ಹೆದ್ದಾರಿಯನ್ನೇ ಅಭಿವೃದ್ಧಿ ಪಡಿಸಲಿ
-ಶಶಿಗೌಡ, ಗ್ರಾಮ ಅರಣ್ಯ ಸಮಿತಿ ಮುಖಂಡ, ತುಪ್ಪೂರು
ಕರಡಿ ಬೆಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಅಪರೂಪದ ಗಿಡಮೂಲಿಕೆಗಳು ಕರಡಿ ಬೆಟ್ಟದಲ್ಲಿ ಇವೆ. ಹೆದ್ದಾರಿ ನಿರ್ಮಿಸಿದರೆ ಅವುಗಳ ನಾಶ ಆಗಲಿದೆ. ಅದು ಸಲ್ಲದು
-ಹಾರೋಗೊಪ್ಪ ಅನಂತರಾಮ, ಜನಪದ ವೈದ್ಯ
ಹೊಸ ರಸ್ತೆಗೆ ವಿರೋಧ ವ್ಯಕ್ತಪಡಿಸಿ ಹಳ್ಳಿಯವರು ಸಭೆ ನಡೆಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಬಂದರೆ ಅವರ ಬೇಡಿಕೆಯ ತಾಂತ್ರಿಕ ಸಾಧ್ಯಾಸಾಧ್ಯತೆಯ ಪರಿಶಿಲನೆಗೆ ಎನ್‌ಎಚ್‌ಎಐಗೆ ಕಳಿಸಿಕೊಡುವೆ
-ಗುರುದತ್ತ ಹೆಗಡೆ, ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.