ಸೊರಬ: ‘ನೆಲ, ಜಲ, ಭಾಷೆ ರಕ್ಷಿಸುವ ಹಾಗೂ ಎಲ್ಲ ಮತವನ್ನು ಸಮಾನತೆಯಿಂದ ನೋಡುವ ಕಾಂಗ್ರೆಸ್ ಪಕ್ಷ ಸರ್ವರ ಅಭಿವೃದ್ಧಿ ಬಯಸುತ್ತದೆ’ ಎಂದು ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಶುಕ್ರವಾರ ತಾಲ್ಲೂಕಿನ ಉಳವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯಾ ನಂತರ ಹಸಿವು, ಬಡತನ ಹೋಗಲಾಡಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಮುಂದಾದ ಕಾಂಗ್ರೆಸ್ ಇಂದಿಗೂ ಬದ್ಧತೆಯ ರಾಜಕಾರಣ ಮಾಡುತ್ತಿದೆ. ಈ ಬಾರಿ ನನಗೂ ಒಂದು ಅವಕಾಶ ಕೊಟ್ಟು ನೋಡಿ. ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಜಿಲ್ಲೆಯ ಸಮಸ್ಯೆಗಳಿಗೆ ನಿಮ್ಮಲ್ಲರ ಧ್ವನಿಯಾಗಿ ಸಂಸತ್‌ನಲ್ಲಿ ಮಾತನಾಡುವೆ’ ಎಂದು ತಿಳಿಸಿದರು.
‘ನಾನು ಗ್ರಾಮ ಪಂಚಾಯಿತಿ ಸದಸ್ಯರಾಗಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷದವರು ಆರೋಪಿಸುತ್ತಾರೆ. ನನಗೆ ಅರ್ಹತೆ ಇರುವುದರಿಂದ ನನ್ನ ತಂದೆ ಬಂಗಾರಪ್ಪ ಹಾಗೂ ಮಾವ ಡಾ.ರಾಜಕುಮಾರ್ ಅವರು ಜವಾಬ್ದಾರಿ ನೀಡಿದ್ದಾರೆ. ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಯಲ್ಲಿ ಸಂಸ್ಕಾರ ಕಲಿತು ಹೊಣೆಗಾರಿಕೆ ನಿಭಾಯಿಸುತ್ತಿದ್ದೇನೆ. ಯಾರಿಂದಲೂ ಪಾಠ ಕಲಿಯುವ ಅವಶ್ಯಕತೆ ಇಲ್ಲ’ ಎಂದರು.
‘ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ ಎಂದು ದೊಡ್ಡ ಅಪಪ್ರಚಾರ ಮಾಡುವ ವ್ಯಕ್ತಿ ಸಮಾಜದ ನಡುವೆ ಸರಳವಾಗಿ ಬದುಕುವ ಯೋಗ್ಯತೆ ಬೆಳೆಸಿಕೊಳ್ಳಬೇಕು’ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ಬಗ್ಗೆ ಪರೋಕ್ಷವಾಗಿ ನಟ ಶಿವರಾಜಕುಮಾರ್ ಟೀಕಿಸಿದರು.
‘ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಆದರ್ಶ ರಾಜಕಾರಣವನ್ನು ಜಿಲ್ಲೆಯಲ್ಲಿ ಮುಂದುವರಿಸಲು ಪಕ್ಷ ಭೇದ ಮರೆತು ಗೀತಾ ಶಿವರಾಜಕುಮಾರ್ ಅವರನ್ನು ಬೆಂಬಲಿಸಿ’ ಎಂದು ನಟ ದುನಿಯಾ ವಿಜಯ್ ಮನವಿ ಮಾಡಿದರು.
ಮುಖಂಡರಾದ ತಬಲಿ ಬಂಗಾರಪ್ಪ ಬಿಳವಾಣಿ ಸುರೇಶ್, ಎಚ್.ಗಣಪತಿ, ಎಂ.ಡಿ.ಶೇಖರ್, ಅಣ್ಣಪ್ಪ ಹಾಲಘಟ್ಟ, ಪ್ರಭಾಕರ್ ಶಿಗ್ಗಾ, ನಾಗರಾಜ್ ಚಿಕ್ಕಸವಿ, ಫಯಾಜ್ ಅಹಮದ್, ನಾಗಪ್ಪ, ಸುಮಾ, ತಾರಾ, ಜ್ಯೋತಿ, ರತ್ನಮ್ಮ, ಪ್ರಶಾಂತ್ ಕೈಸೋಡಿ, ಜಗದೀಶ್ ಕುಪ್ಪೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.