ADVERTISEMENT

ಹೃದಯ ಬಗೆದರೆ ಮೋದಿ ಕಾಣ್ತಾರೆ: ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 0:01 IST
Last Updated 16 ಮಾರ್ಚ್ 2024, 0:01 IST
   

ಶಿವಮೊಗ್ಗ: ’ನನ್ನ ಹೃದಯ ಬಗೆದರೆ ಅಲ್ಲಿ ಶ್ರೀರಾಮ ಹಾಗೂ ನರೇಂದ್ರ ಮೋದಿ ಕಾಣಸಿಗುತ್ತಾರೆ. ಯಡಿಯೂರಪ್ಪ ಅವರ ಎದೆ ಬಗೆದರೆ ಅಲ್ಲಿ ಅವರ ಮಕ್ಕಳು ಹಾಗೂ ಶೋಭಾ ಕರಂದ್ಲಾಜೆ ಕಾಣಿಸುತ್ತಾರೆ ಎಂದು ಕಾರ್ಯಕರ್ತರು ಮಾತಾಡಿಕೊಳ್ಳುತ್ತಾರೆ‘ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶುಕ್ರವಾರ ಇಲ್ಲಿ  ಛೇಡಿಸಿದರು.

ಪುತ್ರ ಕಾಂತೇಶ ಅವರಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಗದಿರುವ ಕಾರಣಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದ ಈಶ್ವರಪ್ಪ, ತಾವು ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಬೆಂಬಲಿಗರು, ಅಭಿಮಾನಿಗಳಿಂದ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಿದ ಬಳಿಕ  ಪ್ರಕಟಿಸಿದರು. 

‘ಪಕ್ಷೇತರರಾಗಿ ಸ್ಪರ್ಧಿಸಿದರೆ ಬಿಜೆಪಿಯಿಂದ ನೋಟಿಸ್ ಕೊಡಬಹುದು. ಇಲ್ಲವೇ ಉಚ್ಚಾಟನೆ ಮಾಡಬಹುದು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಎರಡು ತಿಂಗಳಲ್ಲಿಯೇ ಮತ್ತೆ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಭಾಷಣದ ಉದ್ದಕ್ಕೂ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

‘ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂತ ರೀತಿ ಆಗಲಿದೆ. ಹೀಗಾಗಿ ಕಾಂತೇಶ ಅವರಿಗೇ ಹಾವೇರಿ ಕ್ಷೇತ್ರದಿಂದ ಮತ್ತೆ ಟಿಕೆಟ್‌ಗೆ ಪ್ರಯತ್ನಿಸೋಣ’ ಎಂದು ಕೆಲವು ಬೆಂಬಲಿಗರು ಸಲಹೆ ನೀಡಿದರು.

‘ಗೆಲ್ಲದಿದ್ದರೂ ಪರವಾಗಿಲ್ಲ. ಅನ್ಯಾಯ ಎಸಗಿದವರನ್ನು ಸೋಲಿಸುವ ಶಕ್ತಿ ನಿಮಗೆ ಇದೆ. ಚುನಾವಣೆಗೆ ನಿಂತುಕೊಳ್ಳಿ ಬೆಂಬಲಿಸುತ್ತೇವೆ’ ಎಂದು ಇನ್ನೂ ಕೆಲವರು ಹುರಿದುಂಬಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.