ಶಿವಮೊಗ್ಗ: ’ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಡಿ, ಉತ್ತರ ಕುಮಾರ, ಬ್ಲಾಕ್‌ಮೇಲ್ ಮಾಡುವ ರಾಜಕಾರಣಿ, ಬರೀ ಬೊಗಳೆ ಬಿಡುತ್ತಾರೆ, ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿ‘ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸವಾಲು ಹಾಕಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಈಶ್ವರಪ್ಪ ಮತ್ತು ಪುತ್ರನಿಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ ಬ್ಲಾಕ್‌ಮೇಲ್ ತಂತ್ರ ಬಿಟ್ಟು ಬಂಡಾಯವಾಗಿ ಸ್ಪರ್ಧೆ ಮಾಡಲಿ. ನನ್ನ ಒಂದು ಓಟು ಅವರಿಗೆ ಹಾಕುತ್ತೇನೆ. ಅದನ್ನು ಬಿಟ್ಟು ಗಂಡಸುತನವಲ್ಲದ ಮಾತನಾಡಬಾರದು. ಸಭೆ ಕರೆಯುತ್ತಾರಂತೆ ಆ ಸಭೆಗೆ ಜಿಲ್ಲೆಯ ಬಿಜೆಪಿ ಮುಖಂಡರು ಯಾರು ಹೋಗುತ್ತಾರೆ ನೋಡುತ್ತೇನೆ‘ ಎಂದರು.
ಈಶ್ವರಪ್ಪ ಅವರನ್ನು ಯಾರೂ ರಾಜಕಾರಣದಿಂದ ದೂರ ಮಾಡಲಿಲ್ಲ. ಅವರ ಇವತ್ತಿನ ಈ ಸ್ಥಿತಿಗೆ ಶೇ 40ರಷ್ಟರ ಭ್ರಷ್ಟಚಾರದ ಕೊಡುಗೆ ಎಂದು ಛೇಡಿಸಿದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮತ್ತಷ್ಟು ವಿಜೃಂಭಿಸುತ್ತಿದೆ. ಡಿ.ಎಸ್. ಶಂಕರಮೂರ್ತಿ, ಬಿ.ಎಸ್.ಯಡಿಯೂರಪ್ಪ, ಭಾನುಪ್ರಕಾಶ್ ಇವರೆಲ್ಲರೂ ಕುಟುಂಬ ರಾಜಕಾರಣದ ಪ್ರೇಮಿಗಳೇ. ಅದರಲ್ಲೂ ಈಶ್ವರಪ್ಪ ಅವರಂತೂ ಮಗನನ್ನು ಕಾಂಗರೂ ಪ್ರಾಣಿಯ ರೀತಿ ಮಡಿಲಲ್ಲಿ ಇಟ್ಟುಕೊಂಡಿದ್ದಾರೆ. ಕಾಂತೇಶ ಜಿಲ್ಲಾ ಪಂಚಾಯ್ತಿ ಬಿಟ್ಟು ಹೊರಗೆ ಬರುವುದಿಲ್ಲ ಎಂದರು.
ಈಶ್ವರಪ್ಪ ಅವರಿಗೆ ಯಾವುದೋ ಬೋರ್ಡ್ ಅಧ್ಯಕ್ಷ ಸ್ಥಾನ ಕೊಟ್ಟರೂ ಸಾಕಾಗಿದೆ. ಬಿಜೆಪಿಯನ್ನು ವಿರೋಧಿಸುವ ಶಕ್ತಿಯಂತೂ ಅವರಿಗೆ ಇಲ್ಲವೇ ಇಲ್ಲ. ಅವರ ದೇಶ ಪ್ರೇಮವೆಂದರೆ ಅವರ ಕುಟುಂಬವೇ ಹೊರತು ಬೇರೆ ಏನು ಅಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಏಸುದಾಸ್, ಜಿ.ಪದ್ಮನಾಬ್, ಶಿ.ಜು.ಪಾಶ, ತಿಮ್ಲಾಪುರ ಲೋಕೇಶ್, ಕೃಷ್ಣ, ಎಸ್.ಬಿ.ಪಾಟೀಲ್, ಸೈಯ್ಯದ್ ಅಡ್ಡು, ಆಯನೂರು ಸಂತೋಷ್ ಸೇರಿದಂತೆ ಮುಂತಾದವರು ಇದ್ದರು.
ಗೀತಾ ಗೆಲ್ಲುವುದು ಶತಃಸಿದ್ಧ: ಆಯನೂರು
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಚುನಾವಣಾ ಯುದ್ಧ ಆರಂಭವಾಗಿದೆ. ಗೆಲ್ಲಲು ನಾವು ರಾಜಕೀಯ ಜಾಲ ಎಳೆಯುತ್ತಿದ್ದೇವೆ. ಈಗಾಗಲೇ ಅನೇಕ ಗುಪ್ತ ಸಭೆಗಳು ನಡೆದಿವೆ ಎಂದರು.
ಗೀತಾ ಶಿವರಾಜಕುಮಾರ್ ಈಗಾಗಲೇ ಚುನಾವಣೆಗೆ ಸಿದ್ದರಾಗಿದ್ದಾರೆ. ರಂಗ ಸಜ್ಜಿಕೆಯೂ ಸಿದ್ದವಾಗಿದೆ. ಇನ್ನೇನು ಬರುತ್ತಾರೆ. ಬೈಂದೂರಿನಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲು ಸಿದ್ಧವಾಗಿದ್ದಾರೆ. ಅಲ್ಲಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರಿದ್ದಾರೆ. ಈ ಬಾರಿ ರಾಘವೇಂದ್ರರ ಗೆಲುವು ಸಾಧ್ಯವಿಲ್ಲ ಎಂದರು.
ಶೇ 3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಸ್ವಾಗತಾರ್ಹ. ರಾಜ್ಯ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 3.75ರಷ್ಟು ಮಂಜೂರು ಮಾಡಿರುವುದು ಸ್ವಾಗತಾರ್ಹ ಎಂದು ಆಯನೂರು ಮಂಜುನಾಥ್ ಹೇಳಿದರು.
ತುಟ್ಟಿಭತ್ಯೆ ಮಂಜೂರು ಮಾಡಿರುವುದರಿಂದ ರಾಜ್ಯ ಸರ್ಕಾರಕ್ಕೆ ₹1970 ಕೋಟಿ ಹೆಚ್ಚುವರಿ ಹೊರೆಯಾಗುತ್ತದೆ. ಆದರೂ ಸರ್ಕಾರ ನೌಕರರ ಹಿತ ಕಾಪಾಡಲು ಮುಂದಾಗಿದೆ. ಅದೇ ರೀತಿ ವೇತನದ ಆಯೋಗದ ವರದಿಯೂ ಕೂಡ ಜಾರಿಗೆ ಬರಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.