ADVERTISEMENT

ಶಿವಮೊಗ್ಗ | ಜಾತಿ, ಜನಾಂಗ,ಧರ್ಮದ ಹೆಸರಲ್ಲಿ ಪ್ರಚಾರ ಸಲ್ಲ: ಚುನಾವಣಾಧಿಕಾರಿ ಸೂಚನೆ

ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:51 IST
Last Updated 23 ಏಪ್ರಿಲ್ 2024, 14:51 IST
ಶಿವಮೊಗ್ಗದಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾ ಚುನಾವಣಾ ಅಧಿಕಾರಿ ಗುರುದತ್ತ ಹೆಗಡೆ ಸಭೆ ನಡೆಸಿದರು
ಶಿವಮೊಗ್ಗದಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾ ಚುನಾವಣಾ ಅಧಿಕಾರಿ ಗುರುದತ್ತ ಹೆಗಡೆ ಸಭೆ ನಡೆಸಿದರು   

ಶಿವಮೊಗ್ಗ: ‘ಲೋಕಸಭಾ ಚುನಾವಣೆಯಲ್ಲಿ ಜಾತಿ, ಜನಾಂಗ, ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ. ದ್ವೇಷ ಭಾಷಣ, ಯಾವುದೇ ವ್ಯಕ್ತಿಯ ಕುರಿತು ಅವಹೇಳನಕಾರಿ ಮಾತು ಆಡುವಂತಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಶಿವಮೊಗ್ಗದಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಅಭ್ಯರ್ಥಿಗಳು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾದ ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆಯಲ್ಲಿ ಪ್ರಚಾರ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬಹುದು. ಕಾರ್ಯಕ್ರಮ ನಡೆಯುವ 48 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕು. ಒಂದು ದಿನದ ಒಳಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ಟಿವಿ, ಎಲೆಕ್ಟ್ರಾನಿಕ್, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ನೀಡುವ ಮುನ್ನ ಎಂಸಿಸಿ ಸಮಿತಿಯಿಂದ ದೃಢೀಕರಣ ಪಡೆಯಬೇಕು. ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಲು ಮತದಾನ ಮುಕ್ತಾಯಕ್ಕೆ ನಿಗದಿತ ಸಮಯಕ್ಕಿಂತ 48 ಗಂಟೆ ಮುಂಚಿತವಾಗಿ ದೃಢೀಕರಣ ಪಡೆಯುವುದು ಕಡ್ಡಾಯ. ಕರಪತ್ರಗಳನ್ನು ಪ್ರಕಟಿಸುವ ಅಭ್ಯರ್ಥಿಗಳು ಮುದ್ರಕರ ಹೆಸರು, ಮುದ್ರಿಸುವ ಪ್ರತಿಗಳ ಸಂಖ್ಯೆ ಘೋಷಿಸಿ ವಿತರಣೆಗೆ ಅನುಮತಿ ಪಡೆಯಬೇಕು ಎಂದರು. 

ADVERTISEMENT

ತಮ್ಮ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣ ಇದ್ದಲ್ಲಿ ಅಭ್ಯರ್ಥಿಗಳು 3 ಬಾರಿ ಮುದ್ರಣ ಮತ್ತು ಟಿವಿ ಮಾಧ್ಯಮಗಳಲ್ಲಿ ಘೋಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಲೋಕಸಭಾ ಕ್ಷೇತ್ರದ ವೀಕ್ಷಕರಾದ ಪೂನಂ ಮಾತನಾಡಿ, ’ಅಭ್ಯರ್ಥಿಗಳು ಪೋಲಿಂಗ್ ಏಜೆಂಟ್ ಮತ್ತು ಎಲೆಕ್ಷನ್ ಏಜೆಂಟರನ್ನು ನೇಮಿಸಬೇಕು. ಮತದಾನದ ನಂತರ ಸ್ಟ್ರಾಂಗ್ ರೂಂ ಹೊರಗಡೆ ಶೆಡ್ ನಿರ್ಮಿಸಲಾಗುವುದು. ಅಲ್ಲಿ ಅಭ್ಯರ್ಥಿಗಳು ತಮ್ಮ ಕಡೆಯಿಂದ ಒಬ್ಬರನ್ನು ಸ್ಟ್ರಾಂಗ್ ರೂಂ ವೀಕ್ಷಿಸಲು ನೇಮಿಸಬಹುದು. ಚುನಾವಣಾ ಅಕ್ರಮ ಕಂಡುಬಂದಲ್ಲಿ ಸಿ–ವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ಅಭ್ಯರ್ಥಿಗಳು ಸುವಿಧಾ ತಂತ್ರಾಂಶಕ್ಕೆ ನೋಂದಣಿ ಮಾಡಿಕೊಂಡು ಅನುಮತಿ ಪಡೆಯಬಹುದು ಎಂದರು. 

ವೆಚ್ಚ ವೀಕ್ಷಕ ಸರೋಜ್ ಕುಮಾರ್ ಬೆಹೆರ, ನೋಡಲ್ ಅಧಿಕಾರಿ ಪ್ರಶಾಂತ್ ನಾಯಕ್ ಮಾತನಾಡಿ, ಚುನಾವಣಾ ವೆಚ್ಚವನ್ನು ಪ್ರತ್ಯೇಕವಾಗಿ ಬ್ಯಾಂಕ್ ಖಾತೆ ತೆರೆದು ಅಲ್ಲಿಯೇ ನಿರ್ವಹಿಸಬೇಕು ಎಂದು ಸೂಚಿಸಿದರು. 

ಸಭೆಯಲ್ಲಿ ವೆಚ್ಚ ವೀಕ್ಷಕರಾದ ಮೀನಾಕ್ಷಿ ಸಿಂಗ್, ಲೋಕಸಭಾ ಚುನಾವಣಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಜರಿದ್ದರು.

ಸಾಮಾನ್ಯ ವೆಚ್ಚ ವೀಕ್ಷಕರ ಸಂಪರ್ಕ 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಪೂನಂ ನೇಮಕಗೊಂಡಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ಅವರ ಮೊಬೈಲ್ ಸಂಖ್ಯೆ 8147695215 ಸಂಪರ್ಕಿಸಬಹುದು.  ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ವೆಚ್ಚದ ಮಿತಿ ₹95 ಲಕ್ಷ ಆಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಣೆಗೆ ವೀಕ್ಷಕರಾಗಿ ಮೀನಾಕ್ಷಿ ಸಿಂಗ್‌ ನೇಮಕಗೊಂಡಿದ್ದಾರೆ. ಮೊಬೈಲ್ ಸಂಖ್ಯೆ: 7760692479 8904703613 ಸಂ‍ಪರ್ಕಿಸಬಹುದು.

‘ದೂರು ನೀಡಿದವರ ಮಾಹಿತಿ ಗೌಪ್ಯ’ 

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1950 ಮೂಲಕ ಚುನಾವಣಾಧಿಕಾರಿ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಬಹುದು. ಅಭ್ಯರ್ಥಿಗಳು ಸಾರ್ವಜನಿಕರು ತಮ್ಮ ಮೊಬೈಲ್‍ ಫೋನ್‌ನಲ್ಲಿ ಸಿ-ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ಅಕ್ರಮಗಳ ಕುರಿತಾದ ಫೋಟೋ ಆಡಿಯೊ ವಿಡಿಯೊ ಅಪ್‍ಲೋಡ್ ಮಾಡಿ ದೂರು ನೀಡಬಹುದು. ದೂರು ನೀಡಿದವರ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ದೂರು ದಾಖಲಾದ ನಂತರ ಎಫ್‍ಎಸ್‍ಟಿ ತಂಡದವರು ಕ್ರಮ ಕೈಗೊಳ್ಳುವರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.