ಭದ್ರಾವತಿ: ನಗರದ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ತಡರಾತ್ರಿ ರೈಲ್ವೆ ಅಂಡರ್ ಪಾಸ್ ಮೂಲಕ ಸಂಚರಿಸುತ್ತಿದ್ದ ಲಾರಿಯೊಂದು ರೈಲ್ವೆ ಹಳಿ ಹಾಗೂ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಹಳಿಗಳು ಏರುಪೇರಾಗಿದ್ದು, ಗುರುವಾರ ಬೆಳಿಗ್ಗೆ ಸಂಚರಿಸುವ ಎರಡು ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು. ಎರಡು ರೈಲುಗಳು ಸುಮಾರು ಎರಡು ಗಂಟೆ ತಡವಾಗಿ ಸಂಚರಿಸಿದವು.
ನಗರದ ರೈಲ್ವೆ ಅಂಡರ್‌ಪಾಸ್‌ನಲ್ಲಿ ನಿಗದಿಗಿಂತಲೂ ಎತ್ತರದ ವಾಹನಗಳು ಸಂಚರಿಸದಂತೆ ತಡೆಯಲು ಕಬ್ಬಿಣದ ಬ್ಯಾರಿಕೇಡ್ ಹಾಕಲಾಗಿದೆ. ಬುಧವಾರ ತಡರಾತ್ರಿ ಈ ಬ್ಯಾರಿಕೇಡ್‌ಗೆ ಲಾರಿ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಬ್ಯಾರಿಕೇಡ್ ಮುರಿದು, ಅದು ರೈಲ್ವೆ ಹಳಿಗೆ ಹೊಡೆದಿದ್ದರಿಂದ ಹಳಿಗಳು ಅಸ್ತವ್ಯಸ್ತಗೊಂಡವು. ಕೂಡಲೇ ರೈಲ್ವೆ ಸಿಬ್ಬಂದಿ ಹಳಿ ರಿಪೇರಿ ಕಾಮಗಾರಿ ನಡೆಸಿದರು.
ಹಳಿ ರಿಪೇರಿ ಕಾರ್ಯದ ಹಿನ್ನೆಲೆಯಲ್ಲಿ ಎರಡು ರೈಲುಗಳು ಸಂಚಾರದಲ್ಲಿ ವಿಳಂಬವಾಯಿತು. ಬೆಳಿಗ್ಗೆ 4.45ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 6.45ಕ್ಕೆ ತಲುಪಿತು. ಅಲ್ಲಿಯವರೆಗೂ ಈ ರೈಲು ನಗರ ನಿಲ್ದಾಣದಲ್ಲಿ ನಿಂತಿತ್ತು.
ಇನ್ನು, ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ಬೆಂಗಳೂರು ಜನಶತಾಬ್ದಿ ರೈಲು ಬೆಳಗ್ಗೆ 6.35ಕ್ಕೆ ಅಲ್ಲಿಂದು ಹೊರಟಬೇಕಾಯಿತು. ವಿಳಂಬಕ್ಕೆ ಕಾರಣ ಗೊತ್ತಾಗದೆ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.