ADVERTISEMENT

ಭದ್ರೆಯ ಹಾಡು–ಪಾಡು; ಕಣ್ತುಂಬಿಕೊಳ್ಳಲು ಜನಜಾತ್ರೆ

ಲಕ್ಕವಳ್ಳಿ: ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ

ವೆಂಕಟೇಶ ಜಿ.ಎಚ್.
Published 31 ಜುಲೈ 2024, 6:07 IST
Last Updated 31 ಜುಲೈ 2024, 6:07 IST
ಮುಂಗಾರಿನ ಮಿಂಚು..
ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುವುದನ್ನು ವೀಕ್ಷಿಸಲು ಬಂದಿದ್ದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಯೋ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿಯರು ಜಲಾಶಯದ ಹಾದಿಯಲ್ಲಿ ಮಳೆಯ ನಡುವೆ ಛತ್ರಿ ಹಿಡಿದು ಸೆಲ್ಫಿ ತೆಗೆದುಕೊಳ್ಳುವಾಗ ‘ಪ್ರಜಾವಾಣಿ’ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕರು..
ಚಿತ್ರ: ಶಿವಮೊಗ್ಗ ನಾಗರಾಜ್
ಮುಂಗಾರಿನ ಮಿಂಚು.. ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುವುದನ್ನು ವೀಕ್ಷಿಸಲು ಬಂದಿದ್ದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಯೋ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿಯರು ಜಲಾಶಯದ ಹಾದಿಯಲ್ಲಿ ಮಳೆಯ ನಡುವೆ ಛತ್ರಿ ಹಿಡಿದು ಸೆಲ್ಫಿ ತೆಗೆದುಕೊಳ್ಳುವಾಗ ‘ಪ್ರಜಾವಾಣಿ’ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕರು.. ಚಿತ್ರ: ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಮಲೆನಾಡಿನಲ್ಲಿ ಪುಷ್ಯ ಮಳೆ ಆರ್ಭಟಿಸುತ್ತಿದೆ. ಇದಕ್ಕೂ ಮುನ್ನ ಸುರಿದ ಪುನರ್ವಸು ಕೂಡ ಸಮೃದ್ಧಿ ತಂದಿದೆ.  ಅಂತೆಯೇ ಮಧ್ಯ ಕರ್ನಾಟಕ, ಬಯಲು ಸೀಮೆಯ ಜೀವನಾಡಿ ಭದ್ರೆಯ (ಭದ್ರಾ ನದಿ) ಒಡಲು ಭರ್ತಿಯಾಗಿದೆ.

ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಮಂಗಳವಾರದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಬೆಳಿಗ್ಗೆ 8.30ಕ್ಕೆ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ತೆರೆಯುತ್ತಿದ್ದಂತೆಯೇ ಭದ್ರೆ, ನದಿಯ ಹಾದಿಗೆ ಭೋರ್ಗರೆದು ಧುಮ್ಮಿಕ್ಕಿದಳು. ಹಾಲ್ನೊರೆ ಹೊದ್ದ ಆಕೆಗೆ ಸಮೀಪದ ಕೂಡಲಿಯಲ್ಲಿ ತುಂಗೆಯನ್ನು ಕೂಡಿಕೊಳ್ಳುವ ತವಕ.

ಈ ಸಂಭ್ರಮ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಶಿವಮೊಗ್ಗ ಮಾತ್ರವಲ್ಲ, ಅಕ್ಕಪಕ್ಕದ ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಬಂದಿದ್ದರು. ಇಡೀ ದಿನ ಭದ್ರೆಯ ಪರಿಸರದಲ್ಲಿ ಜಾತ್ರೆಯ ಸಡಗರ ಮನೆ ಮಾಡಿತ್ತು. ಬಿರು ಮಳೆಯನ್ನೂ ಲೆಕ್ಕಿಸದೇ ಜಲಾಶಯದ ಕೆಳಗೆ–ಮೇಲೆ ಏರಿಳಿದು ಸಂಭ್ರಮಿಸಿದರು. ಧುಮ್ಮಿಕ್ಕುವ ನೀರಿನ ಆರ್ಭಟವ ಮೊಬೈಲ್‌ ಫೋನ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಗೆಳೆಯರು, ನೆಂಟರು, ಆಪ್ತರೊಂದಿಗೆ ನಿಂತು ಸೆಲ್ಫಿ ತೆಗೆದುಕೊಂಡರು. ರೀಲ್ಸ್ ಮಾಡಿ ಭದ್ರೆಯ ಹಾಡು–ಪಾಡನ್ನು ಸ್ಮರಣೀಯವಾಗಿಸಿಕೊಂಡರು.

ADVERTISEMENT

ಜಲಾಶಯದಿಂದ ನದಿಗೆ ಧುಮ್ಮಿಕ್ಕುವಾಗಿನ ನೀರಿನ ಸಿಂಚನ, ಬಿಟ್ಟೂ ಬಿಡದೇ ಸುರಿಯುತ್ತಿದ್ದ ಮಳೆ, ಕುಳಿರ್ಗಾಳಿ ಇಡೀ ಪರಿಸರವನ್ನು ಸುದೀರ್ಘ ಮಜ್ಜನಕ್ಕೆ ಸಜ್ಜುಗೊಳಿಸಿದಂತಿತ್ತು. ಸುತ್ತಲಿನ ಮರ, ಗಿಡ, ಕಾನು, ಬೆಟ್ಟ, ಬಂಡೆ, ಸಿಂಗನಮನೆ ಸೇತುವೆ ಭದ್ರೆಯ ಅಬ್ಬರಕ್ಕೆ ಕಿವಿಗೊಟ್ಟು ಮೌನ ಹೊದ್ದಿದ್ದವು. ಅಣೆಕಟ್ಟೆಯ ಮೇಲೆ ನಿಂತರೆ ಕಾಡು–ಗುಡ್ಡಗಳ ಎಲ್ಲೆಲ್ಲೂ ಜಲರಾಶಿ.

ಎರಡು ಬೆಳೆಗೆ ನೀರ ನೆಮ್ಮದಿ:

ದಾವಣಗೆರೆಯಿಂದ ಭದ್ರೆಗೆ ಬಾಗಿನ ಬಿಡಲು ಬಂದಿದ್ದವರ ತಂಡದಲ್ಲಿದ್ದ ಮಲೆಬೆನ್ನೂರಿನ ರೈತ ಕುಮಾರಪ್ಪ, ಮಳೆಯಿಂದ ರಕ್ಷಣೆಗೆ ಹಸಿರು ಶಾಲನ್ನೇ ತಲೆಗೆ ಆಸರೆ ಮಾಡಿಕೊಂಡು ಜಲಾಶಯದತ್ತ ಕಣ್ಣು ನೆಟ್ಟಿದ್ದರು. ಈ ವರ್ಷ ಎರಡು ಹಂಗಾಮಿಗೂ ಭರಪೂರ ಭತ್ತದ ಫಸಲಿನ ಕನಸು ಅಲ್ಲಿ ಪ್ರತಿಫಲಿಸುತ್ತಿತ್ತು. ನೀರು ನೋಡಲು ಬಂದವರಿಗೆ ಹಸಿ–ಬಿಸಿಯ ಸ್ವೀಟ್‌ ಕಾರ್ನ್‌ಗೆ ಹುಳಿ–ಖಾರ ಹಚ್ಚಿಕೊಡುತ್ತಿದ್ದರು ಸಿಂಗನಮನೆಯ ವಿಶಾಲಾಕ್ಷಮ್ಮ. ರಾಮಣ್ಣ ಹುರಿದ ಶೇಂಗಾ ಪೊಟ್ಟಣ ಕಟ್ಟಿಕೊಡುತ್ತಿದ್ದರು. ಈ ಜನಜಾತ್ರೆ ಇನ್ನೂ 15 ದಿನ ಮುಂದುವರೆಯಲಿದೆ ಎಂದು ಪ್ಲಾಸ್ಟಿಕ್ ಹೊದ್ದ ಛಾವಣಿಯ ಕೆಳಗೆ ನಿಂತು ಪಾಪ್‌ಕಾರ್ನ್ ಸುಡುತ್ತಿದ್ದ ಲಕ್ಕವಳ್ಳಿಯ ರವಿಕುಮಾರ್ ಸಂತಸ ಹಂಚಿಕೊಂಡರು.

‘ಡ್ಯಾಂ ತುಂಬಿದೆ. ನಮ್ಮೂರಲ್ಲಿ ಭತ್ತ ಬೆಳೆಯಲು ಅನುಕೂಲವಾಗಲಿದೆ’ ಎನ್ನುತ್ತಲೇ ಕುವೆಂಪು ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿ, ದಾವಣಗೆರೆ ಜಿಲ್ಲೆಯ ರುಚಿತಾ ಗೆಳೆತಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಉಮೇದಿಯಲ್ಲಿದ್ದರು.

ಒಂದು ವರ್ಷದ ಬರಗಾಲದ ನಂತರ ಭದ್ರೆ ಭರ್ತಿ ಆಗಿದ್ದಾಳೆ. ಹಿಂದಿನ ವರ್ಷ ಮಳೆ ಕೊರತೆಯಿಂದ ಜಲಾಶಯ ತುಂಬಿರಲಿಲ್ಲ. ಬೇಸಿಗೆಯಲ್ಲಿ ಭತ್ತಕ್ಕೆ ನೀರು ಕೊಟ್ಟಿರಲಿಲ್ಲ. ಈ ಬಾರಿ ಜಲಾಶಯ ಭರ್ತಿ ಆಗಿದೆ. ಭದ್ರಾ ಅಚ್ಚುಕಟ್ಟು ‌ಪ್ರದೇಶದ ಶಿವಮೊಗ್ಗ, ದಾವಣಗೆರೆ, ವಿಜಯನಗರ, ಚಿಕ್ಕಮಗಳೂರು ಜಿಲ್ಲೆಗಳ ರೈತಾಪಿ ವರ್ಗದಲ್ಲಿ ಸಂತಸ ಮನೆಮಾಡಿದೆ.

ಆರು ವರ್ಷಗಳ ನಂತರ ಜುಲೈನಲ್ಲಿ ಭರ್ತಿ..

ಭದ್ರಾ ಜಲಾಶಯ ಸಾಮಾನ್ಯವಾಗಿ ಆಗಸ್ಟ್ ತಿಂಗಳ ಮಧ್ಯ ಭಾಗ ಇಲ್ಲವೇ ಕೊನೆಯಲ್ಲಿ ಭರ್ತಿಯಾಗುತ್ತದೆ. ಆದರೆ ಈ ಬಾರಿ ಆರು ವರ್ಷಗಳ ನಂತರ ಜುಲೈ ತಿಂಗಳಲ್ಲಿಯೇ ಭರ್ತಿ ಆಗಿದೆ. 2018ರ ಜುಲೈನಲ್ಲಿ ಕಡೆಯ ಬಾರಿಗೆ ಜಲಾಶಯ ಬೇಗನೇ ಭರ್ತಿಯಾಗಿತ್ತು ಎಂದು ಜಲಾಶಯದ ಮೂಲಗಳು ತಿಳಿಸಿವೆ. ಭದ್ರಾ ಜಲಾಶಯದಲ್ಲಿ ಮಂಗಳವಾರ ಬೆಳಿಗ್ಗೆ 6 ಗಂಟೆಗೆ 183.2 ಅಡಿ ನೀರಿನ ಸಂಗ್ರಹ ಇದ್ದು  ಜಲಾಶಯದ ಗರಿಷ್ಠಮಟ್ಟ 186 ಅಡಿ. ಆದರೆ ಸುರಕ್ಷತೆಯ ದೃಷ್ಟಿಯಿಂದ ಪ್ರತೀ ಬಾರಿ 184 ಅಡಿಯವರೆಗೆ ಮಾತ್ರ ನಿಲ್ಲಿಸಲಾಗುತ್ತದೆ. ಸದ್ಯ ಜಲಾಶಯದಿಂದ ನದಿಗೆ 40000 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 161.6 ಅಡಿ ನೀರಿನ ಸಂಗ್ರಹ ಇತ್ತು.

ಭದ್ರಾ ಮೇಲ್ದಂಡೆ; ಕಾಲುವೆಗೆ ನೀರು

ಇಂದಿನಿಂದ ಭದ್ರಾ ಮೇಲ್ದಂಡೆ ಯೋಜನೆಯಡಿ ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಒಂದು ಪಂಪ್ ಆನ್ ಮಾಡಿ ಸದ್ಯ 700 ಕ್ಯುಸೆಕ್‌ ನೀರು ಕಾಲುವೆಗೆ ಬಿಡಲಾಗುತ್ತಿದೆ. ಶಾಂತಿಪುರ ಬೆಟ್ಟದ ತಾವರಕೆರೆ ವೈ ಜಂಕ್ಷನ್ ಹೆಬ್ಬೂರು ಮೂಲಕ ಅಜ್ಜಂಪುರ ತಾಲ್ಲೂಕಿನ ಎಚ್.ತಿಮ್ಮಾಪುರ ಬಳಿ ವೇದಾವತಿ ನದಿಗೆ ಈ ನೀರು ಸೇರಲಿದೆ. ‘ಈ ಬಾರಿ ಕಾಲುವೆ ಮೂಲಕ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ 2 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ. ಜೊತೆಗೆ ತರೀಕೆರೆ ಏತ ನೀರಾವರಿ ಯೋಜನೆಯಡಿ ಇದೇ ಮೊದಲ ಬಾರಿಗೆ ತರೀಕೆರೆ ಹಾಗೂ ಅಜ್ಜಂಪುರ ತಾಲ್ಲೂಕಿಗಳ 79 ಕೆರೆಗಳನ್ನು ತುಂಬಿಸಲಾಗುತ್ತಿದೆ’ ಎಂದು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ ಸೂಪರಿಟೆಂಡೆಂಟ್ ಎಂಜಿನಿಯರ್ ವಿ.ಕವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.