ಶಿವಮೊಗ್ಗ: ಬಿಜೆಪಿ ಇಲ್ಲಿಯವರೆಗೂ ಬ್ಯುಸಿನೆಸ್ (ವ್ಯವಹಾರ) ಜನತಾ ಪಕ್ಷವಾಗಿತ್ತು. ಈಗ ಭ್ರಷ್ಟ ಜನತಾ ಪಕ್ಷ ಎಂಬುದೂ ಸಾಬೀತಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ರಾಜ್ಯ ಘಟಕದ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಚನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಲಂಚ ಸ್ವೀಕಾರ ಪ್ರಕರಣ ಮತ್ತು ಬಿಜೆಪಿಯ ಭ್ರಷ್ಟಾಚಾರ ಖಂಡಿಸಿ ಶನಿವಾರ ಮಧು ಬಂಗಾರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಧು, ‘ನಾ ಖಾವುಂಗ, ಖಾನೇದೂಂಗ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಇಲ್ಲಿ ಶಾಸಕರ ಪುತ್ರ ಕಂತೆ ಕಂತೆ ಲಂಚದ ಹಣದೊಂದಿಗೆ ಸಿಕ್ಕಿಬೀಳುತ್ತಾರೆ. ಇದು ಬಿಜೆಪಿಯ ಮಾತಿಗೂ ಕೃತಿಗೂ ಸಂಬಂಧವಿಲ್ಲದನ್ಬು ಎತ್ತಿ ತೋರುತ್ತದೆ ಎಂದರು.
ಬಿಜೆಪಿ ಶಾಸಕರು ಚುನಾವಣೆಗೆ ಖರ್ಚು ಮಾಡಲು ಜನರ ಹಣ ಲೂಟಿ ಮಾಡುತ್ತಿದ್ದಾರೆ. ಶೇ 40 ರಷ್ಟು ಕಮಿಷನ್ ಆರೋಪಕ್ಕೆ ಬಿಜೆಪಿಯವರು ಇಷ್ಟು ದಿನ ಸಾಕ್ಷಿ ಕೇಳುತ್ತಿದ್ದರು. ಇದಕ್ಕಿಂತ ಸಾಕ್ಷ್ಯ ಬೇಕಾ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.
ಬಿಜೆಪಿಯವರಿಗೆ ನೈತಿಕತೆ ಇದ್ದರೆ ಲಂಚ ಪಡೆದು ಸಿಕ್ಕಿಬಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಶಾಸಕ ಮಾಡಾಳು ಅವರನ್ನು ಪಕ್ಷದಿಂದ ಉಚ್ಛಾಟಿಸಿ, ಅವರ ರಾಜೀನಾಮೆ ಪಡೆಯಲಿ. ಈ ವಿಚಾರದಲ್ಲಿ ಪಾರದರ್ಶಕ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಟ್ಟು, ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬರಲಿ ಎಂದು ಮಧು ಬಂಗಾರಪ್ಪ ಆಗ್ರಹಿಸಿದರು.
ಪ್ರತಿಭಟನೆಗೂ ಮುನ್ನ ಶಿವಪ್ಪನಾಯಕ ವೃತ್ತದಿಂದ ಗೋಪಿವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್, ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ, ಮುಖಂಡರಾದ ಆರ್.ಎಂ.ಮಂಜುನಾಥಗೌಡ, ಬಲದೇವ ಕೃಷ್ಣ, ಪಲ್ಲವಿ. ಎಸ್.ಪಿ.ಶೇಷಾದ್ರಿ ನೇತೃತ್ವ ವಹಿಸಿದ್ದರು.
ಬಿರು ಬಿಸಿಲಿನಲ್ಲೂ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.