ಆನವಟ್ಟಿ: ಬಿಜೆಪಿ ಜನಸಾಮಾನ್ಯರ ಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿಲ್ಲ. ಹಿಮಾಚಲಪ್ರದೇಶದಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್, ರಾಜ್ಯದ ಚುನಾವಣೆಯಲ್ಲೂ ಬಹುಮತ ಪಡೆದು ಅಧಿಕಾರ ನಡೆಸುವುದು ನಿಶ್ಚಿತ ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸಮೀಪದ ತಿಮ್ಮಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನಸಾಮಾನ್ಯರ ಕಷ್ಟವನ್ನು ಅರ್ಥ ಮಾಡಿಕೊಂಡು ಜನರು ಕೇಳುವ ಮೊದಲೇ ಆಶ್ರಯ ಮನೆ, ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಬಗರ್‌ಹುಕುಂ ರೈತರು ಹಾಗೂ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿರುವವರಿಗೆ ರಕ್ಷಣೆ ನೀಡಿದ್ದರು. ತಂದೆಯವರ ಕನಸು ನನಸು ಮಾಡುವ ಹಾದಿಯಲ್ಲಿ ನಾನೂ ಸಾಗುತ್ತಿದ್ದೇನೆ’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಗೋಡು ತಿಮ್ಮಪ್ಪ ಅವರು ಸ್ವೀಕರ್ ಹುದ್ದೆಯಲ್ಲಿದ್ದರೂ ಸರ್ಕಾರದ ಮೇಲೆ ಒತ್ತಡ ತಂದು ಅರಣ್ಯ ಹಾಗೂ ಕಂದಾಯ ಜಾಗ ಸೇರಿ ಹಲವರು ಭೂಮಿ ಹಕ್ಕು ಪಡೆಯಲು ಅರ್ಜಿ ಹಾಕುವ ಅವಕಾಶ ಕಲ್ಪಿಸಿದ್ದರು. ತಿಮ್ಮಾಪುರ ಗ್ರಾಮದ 26 ಎಸ್‌ಟಿ ಸಮುದಾಯದವರಿಗೆ ಹಕ್ಕುಪತ್ರ ನೀಡಲಾಗಿದೆ. ಪ್ರಸ್ತುತ ಬಿಜೆಪಿ ಸರ್ಕಾರ ಒಂದೇ ಒಂದು ಹಕ್ಕುಪತ್ರ ವಿತರಿಸಿಲ್ಲ. ಬಡವರನ್ನು ಬಡವರನ್ನಾಗಿ ಮಾಡುವುದೇ ಬಿಜೆಪಿಯ ಸಾಧನೆ’ ಎಂದು ಕುಟುಕಿದರು.
‘ಮಹಿಳೆಯರ ಕಣ್ಣೀರು ಒರೆಸುತ್ತೇನೆ ಎಂದು ನಂಬಿಸಿದ ನರೇಂದ್ರ ಮೋದಿ ಅವರು ಅಡುಗೆ ಸಿಲಿಂಡರ್ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ಯಾಗ್ಯ ಜ್ಯೋತಿ ಮೀಟರ್‌ಗೂ ಹಣ ಕಟ್ಟಿಸಿಕೊಳ್ಳುವ ಮೂಲಕ ಮಹಿಳೆಯರು ಕಣ್ಣೀರು ಹಾಕುವಂತೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜರ್ಮಲೆ ಚಂದ್ರಶೇಖರ್, ಮಧುಕೇಶ್ವರ ಪಾಟೀಲ್, ರಫೀಕ್ ಅಹಮ್ಮದ್ ಪಟೇಲ್, ಅನೀಶ್ ಗೌಡ, ಹಬೀಬುಲ್ಲಾ ಹವಾಲ್ದಾರ್, ಸಂಜೀವ ತರಕಾರಿ, ಎಂ.ಬಿ. ಕೃಷ್ಣಪ್ಪ, ಸುರೇಶ್, ನಾಗರಾಜ ಶುಂಠಿ, ದೇವರಾಜ ಬಡಗಿ, ಬಾಷಾಸಾಬ್, ರೇವಣಪ್ಪ ಟಿಜಿ ಕೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.