ADVERTISEMENT

ಮಧು, ಕುಮಾರ ತಾಲ್ಲೂಕಿನ ಎರಡು ಕಣ್ಣುಗಳು: ಸಚಿವ ತಮ್ಮಣ್ಣ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 13:13 IST
Last Updated 30 ಸೆಪ್ಟೆಂಬರ್ 2018, 13:13 IST
ಆನವಟ್ಟಿಯ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ  ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಉದ್ಘಾಟಿಸಿದರು
ಆನವಟ್ಟಿಯ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ  ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಉದ್ಘಾಟಿಸಿದರು   

ಆನವಟ್ಟಿ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ರಾಜ್ಯದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಹಿಂದುಳಿದವರಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.

ಭಾನುವಾರ ತತ್ತೂರು (ವಡ್ಡಿಗೆರೆ) ಹಾಗೂ ಆನವಟ್ಟಿಯ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ಬಂಗಾರಪ್ಪ ಜಾತಿ, ಧರ್ಮದ ಹೆಸರಲ್ಲಿ ಎಂದೂ ರಾಜಕೀಯ ಮಾಡಿಲ್ಲ. ಅವರ ಮಕ್ಕಳಾದ ಮಧು ಬಂಗಾರಪ್ಪ ಹಾಗೂ ಕುಮಾರ ಬಂಗಾರಪ್ಪ ಕೂಡ ಎಲ್ಲಾ ವರ್ಗದ ಜನರನ್ನು ಸಮರ್ಥವಾಗಿ ಒಗ್ಗೂಡಿಸಿ ಜನರ ವಿಶ್ವಾಸ ಗಳಿಸುವಲ್ಲಿ ಇವರಿಬ್ಬರು ತಾಲ್ಲೂಕಿನ ಎರಡು ಕಣ್ಣುಗಳು’ ಎಂದರು.

ADVERTISEMENT

ಆನವಟ್ಟಿ ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣ, ಮೂಲ ಸೌಕರ್ಯದಿಂದ ವಂಚಿತವಾಗಿದೆ ಮುಂದಿನ ದಿನಗಳಲ್ಲಿ ಮೂಲ ಸೌಕರ್ಯ ಕಲ್ಪಸುವುದಾಗಿ ಭರವಸೆ ನೀಡಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 1,700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು. ಈ ಶಾಲೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾನ್ಯತೆ ಪಡೆದಿರುವುದು ಶ್ಲಾಘನೀಯ. ಈ ಶಾಲೆಯ ಸಮಗ್ರ ಅಭಿವೃಧಿಗೆ ಒತ್ತು ನೀಡುವುದಾಗಿ ತಿಳಿಸಿದರು.

ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ‘ಶಾಲೆಯಲ್ಲಿರುವ ಬಹುಪಾಲು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಅದರಲ್ಲೂ ಹಿಂದುಳಿದ ವರ್ಗದ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ ಹಿಂದುಳಿದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

‘ಈ ಭಾಗದ ರೈತ ಹಾಗೂ ತಂದೆಯವರು ಮಂಜೂರು ಮಾಡಿಸಿದ್ದ ಮೂಡಿ–ಕುಣ್ಣೆತೇಪ್ಪ ಏತ ನೀರಾವರಿ ಬಗ್ಗೆ ಸಂಬಂಧಿಸಿದ ಸಚಿವರನ್ನು ಕಂಡು ಮನವಿ ಮಾಡಲಾಗಿದೆ. ಅವರು ಭರವಸೆ ನೀಡಿರುವ ಕಾರಣ ಮುಂದಿನ ಬೇಸಿಗೆಯೊಳಗೆ ಯೋಜನೆ ಪೂರ್ಣಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು‘ ಎಂದರು.

ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಯನ, ಉಪಾಧ್ಯಕ್ಷ ಸುರೇಶ ಹಾವಣ್ಣನವರ್, ಸದಸ್ಯರಾದ ಪಿ. ಹನುಮಂತಪ್ಪ, ನರೇಂದ್ರ ಒಡೆಯರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ವೀರೇಶ್ ಕೊಟಗಿ, ಸತೀಶ್ ಅರ್ಜುನಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.