ADVERTISEMENT

ಸದ್ದು ಮಾಡುತ್ತಿದೆ ‌ವಸತಿಗೃಹ ಲೀಸ್ ವಿಚಾರ

ವಿಐಎಸ್ಎಲ್ ನಿವೃತ್ತ ನೌಕರರಿಂದ ಮಾಜಿ ಪ್ರಧಾನಿ ಭೇಟಿ

ಕೆ.ಎನ್.ಶ್ರೀಹರ್ಷ
Published 5 ಏಪ್ರಿಲ್ 2022, 4:51 IST
Last Updated 5 ಏಪ್ರಿಲ್ 2022, 4:51 IST
ಭದ್ರಾವತಿ ವಿಐಎಸ್ಎಲ್ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಭದ್ರಾವತಿ ವಿಐಎಸ್ಎಲ್ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.   

ಭದ್ರಾವತಿ: ವಿಐಎಸ್ಎಲ್ ನಿವೃತ್ತ ನೌಕರರಿಗೆ ಖಾಲಿ ಇರುವ ವಸತಿಗೃಹವನ್ನು ಲೀಸ್ ನೀಡುವುದು ಹಾಗೂ ಇನ್ನಿತರೆ ಯೋಜನೆ ಆಧಾರದ ಮೇಲೆ ನೀಡುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಅಂಗಳಕ್ಕೆ ಮನವಿ ತಲುಪಿದೆ.

ಮಾಜಿ ಶಾಸಕ ದಿವಂಗತ ಎಂ.ಜೆ.ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ ಅವರ ನೇತೃತ್ವದಲ್ಲಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾದ ಬಿ.ಜಿ. ರಾಮಲಿಂಗಯ್ಯ, ಬಿ.ಆರ್.ನಾಗರಾಜ್, ನರಸಿಂಹಾಚಾರ್ ಸೇರಿ ಹಲವು ಸದಸ್ಯರು ಮಾಜಿ ಪ್ರಧಾನಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದುವಿಐಎಸ್ಎಲ್‌ ವಸತಿಗೃಹ ಲೀಸ್ ವಿಚಾರ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.

ವಿಐಎಸ್ಎಲ್ ಕಾರ್ಖಾನೆಯನ್ನು ಬಂಡವಾಳ ಹಿಂತೆಗೆತ ಪ್ರಕ್ರಿಯೆಯಿಂದ ಕೈಬಿಡುವುದು ಹಾಗೂ ಖಾಲಿ ಇರುವ ವಸತಿಗೃಹವನ್ನು ಲಾಂಗ್‌ ಲೀಸ್‌ಗೆ ಕೊಡುವುದು ಹಾಗೂ ಇತರೆ ಯೋಜನೆ ಆಧಾರದ ಮೇಲೆ ನಿವೃತ್ತ ಕಾರ್ಮಿಕರಿಗೆ ನೀಡಬೇಕು ಎಂಬ ಬೇಡಿಕೆಯ ಮನವಿಗೆ ತಕ್ಷಣ ಸ್ಪಂದಿಸಿದ್ದ ದೇವೇಗೌಡರು ಸಂಬಂಧಿಸಿದ ಉಕ್ಕು ಸಚಿವ ರಾಮಚಂದ್ರಪ್ರಸಾದ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ADVERTISEMENT

ನಿವೃತ್ತರ ಪರದಾಟ: ಮನೆ ಲೀಸ್ ಪಡೆದ ನಿವೃತ್ತ ನೌಕರರು ನಿಗದಿತ ಅವಧಿ ಮುಗಿದ ನಂತರ ನಗರಾಡಳಿತ ಇಲಾಖೆಗೆ ಹೋಗಿ ಅದನ್ನು ಮುಂದುವರಿಸಲು ಇನ್ನಿಲ್ಲದ ಕಸರತ್ತು ಮಾಡುವ ಪರಿಸ್ಥಿತಿ ಇತ್ತು. ಇದರಲ್ಲಿ ಒಂದಿಷ್ಟು ಬದಲಾವಣೆ ತರುವ ಪ್ರಯತ್ನ ನಡೆದರೂ ಸೈಲ್ ಆಡಳಿತದ ಬಿಗಿ ಧೋರಣೆ ಕಾರಣ ಈಗಲೂ ಅದೇ ಸ್ಥಿತಿ ಇದೆ ಎನ್ನುತ್ತಾರೆ ನಿವೃತ್ತ ಕಾರ್ಮಿಕ ನರಸಿಂಹಾಚಾರ್.

‘ಸಂಸದ ಬಿ.ವೈ.ರಾಘವೇಂದ್ರ ಅವರು ಈ ನಿಟ್ಟಿನಲ್ಲಿ ಭಾರೀ ಪ್ರಯತ್ನ ನಡೆಸಿದ ಪರಿಣಾಮವಾಗಿ ಒಂದಿಷ್ಟು ಸುಧಾರಣೆ ಕಂಡಿದ್ದೇವೆ. ಆದರೆ ಆಡಳಿತ ಮಂಡಳಿ ಸಮಾನ ಲೀಸ್ ವ್ಯವಸ್ಥೆ ಜಾರಿ ಮಾಡದ ಹೊರತು ಅವಧಿ ಮುಗಿದ ನಂತರದ ಪರದಾಟ ನಿಲ್ಲುವುದಿಲ್ಲ. ಈ ರೀತಿ ಮನೆ ಲೀಸ್ ನೀಡಿದರೆ ಹಾಳಾಗಿ ಬಿದ್ದು ಹೋಗುವ ವಸತಿಗೃಹಗಳ ರಕ್ಷಣೆ ಆಗುತ್ತದೆ’ ಎನ್ನುತ್ತಾರೆ ಮುಖಂಡ ಬಿ.ಜಿ. ರಾಮಲಿಂಗಯ್ಯ.

ಬಂಡವಾಳ ಹಿಂತೆಗೆತ ಕೈಬಿಡಿ: ‘ಪ್ರಸ್ತುತ ಸಾಲಿನ ಬಜೆಟ್ ಮೂಲಕ ಉಕ್ಕು ಉದ್ಯಮಕ್ಕೆ ಸಾಕಷ್ಟು ನೆರವಿನ ಘೋಷಣೆ ಆಗಿದೆ. ಅದರಲ್ಲಿ ಇಲ್ಲಿನ ಕಾರ್ಖಾನೆಗೂ ಅಗತ್ಯ ಇರುವ ನೆರವನ್ನು ಕೇಂದ್ರ ಸರ್ಕಾರ ನೀಡುವ ಮೂಲಕ ಖಾಸಗೀಕರಣ ಪ್ರಕ್ರಿಯೆ ಕೈಬಿಡಬೇಕು ಎಂಬ ಒತ್ತಾಯ ನಮ್ಮದು’ ಎನ್ನುತ್ತಾರೆ ಹಿರಿಯ ಕಾರ್ಮಿಕ ಮುಖಂಡ ಬಿ.ಆರ್. ನಾಗರಾಜ್.

‘ಈ ವಿಚಾರವನ್ನು ಸಹ ಮಾನ್ಯ ಮಾಜಿ ಪ್ರಧಾನಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡಿದ್ದು, ಅದನ್ನು ಅವರು ಸಂಬಂಧಿಸಿದ ಮಂತ್ರಿಗಳ ಗಮನಕ್ಕೆ ತರವು ಕೆಲಸ ಮಾಡಿದ್ದಾರೆ. ಈ ಹಿಂದೆಯೂ ಸಂಸದ ರಾಘವೇಂದ್ರ ಪ್ರಯತ್ನ ನಡೆಸಿದ್ದು, ಅದರ ಫಲವಾಗಿ ಕಾರ್ಖಾನೆ ಉತ್ಪಾದನೆ ನಿರಂತರವಾಗಿ ನಡೆದಿದೆ’ ಎಂದರು.

ಕಾರ್ಮಿಕರ ಹಿತಕ್ಕೆ ಬದ್ಧ: ‘ನನ್ನ ಪತಿ ಎಂ.ಜೆ.ಅಪ್ಪಾಜಿ ಶಾಸಕರಾಗಿದ್ದ ವೇಳೆ ವಿಐಎಸ್ಎಲ್ ಕಾರ್ಖಾನೆಯನ್ನು ಸಂಪೂರ್ಣ ಸೈಲ್ ಆಡಳಿತಕ್ಕೆ ಒಪ್ಪಿಸುವ ಕೆಲಸ ಮಾಡಿದ್ದರು. ಈಗ ಅದರ ಮುಂದುವರಿದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕರ ಹಿತಕ್ಕೆ ಬದ್ಧವಾಗಿ ಮಾಜಿ ಪ್ರಧಾನಿ ಬಳಿ ನಿಯೋಗ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದೇನೆ’ ಎನ್ನುತ್ತಾರೆ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಶಾರದ ಅಪ್ಪಾಜಿ.

‘ಹಾಳು ಬಿದ್ದಿರುವ ವಸತಿಗೃಹವನ್ನು ನಿವೃತ್ತರಿಗೆ ನೀಡಿದರೆ ಅದರ ರಕ್ಷಣೆ ಆಗುವ ಜತೆಗೆ ಅವಶ್ಯ ಇರುವ ಜನರಿಗೆ ವಸತಿ ಸೌಲಭ್ಯ ಸಿಕ್ಕಂತಾಗುತ್ತದೆ. ಜತೆಗೆ ಕಾರ್ಖಾನೆಗೆ ಬಂಡವಾಳ ಹೂಡಿದರೆ ಅಭಿವೃದ್ಧಿ ಹೆಚ್ಚಲಿದೆ’ ಎಂದರು.

ನಿವೃತ್ತ ಕಾರ್ಮಿಕರ ವಸತಿ ವಿಷಯ ಹಾಗೂ ವಿಐಎಸ್ಎಲ್ ಬಂಡವಾಳ ಹಿಂತೆಗೆತ ವಿಚಾರ ಮಾಜಿ ಪ್ರಧಾನಿಗಳ ಅಂಗಳಕ್ಕೆ ತಲುಪಿರುವ ಬೆನ್ನಲ್ಲೇ ಒಂದಿಷ್ಟು ಪರಿಹಾರ ಸಿಗಬಹುದೆಂಬ ವಿಶ್ವಾಸ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.