ADVERTISEMENT

ಎಂಎಡಿಬಿ: ನಬಾರ್ಡ್‌ನಿಂದ ₹ 200 ಕೋಟಿ ಸಾಲ

ರಾಜ್ಯ ಸರ್ಕಾರದ ಗ್ಯಾರಂಟಿ; 20 ವರ್ಷಗಳ ಅವಧಿಗೆ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 15:40 IST
Last Updated 21 ಸೆಪ್ಟೆಂಬರ್ 2024, 15:40 IST

ಶಿವಮೊಗ್ಗ: ಇಲ್ಲಿನ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ (ಎಂಎಡಿಬಿ) ನಬಾರ್ಡ್‌ನಿಂದ 20 ವರ್ಷಗಳ ದೀರ್ಘಾವಧಿಗೆ ₹ 200 ಕೋಟಿ ಸಾಲ ಪಡೆಯಲು ನಿರ್ಧರಿಸಿದೆ. ಸಾಲಕ್ಕೆ ಗ್ಯಾರಂಟಿ ಕೊಡಲು ರಾಜ್ಯ ಸರ್ಕಾರ ಒಪ್ಪಿದೆ. ಅದಕ್ಕೆ ಶೀಘ್ರ ಪ್ರಸ್ತಾವ ಸಲ್ಲಿಸಲು ಶನಿವಾರ ಇಲ್ಲಿ ನಡೆದ ಮಂಡಳಿಯ ಸಾಮಾನ್ಯ ಸಭೆ ಅನುಮೋದನೆ ನೀಡಿತು.

ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಲದ ಮೊತ್ತವನ್ನು ಸರ್ಕಾರವೇ ನಬಾರ್ಡ್‌ಗೆ ಮರುಪಾವತಿ ಮಾಡಲಿದೆ ಎಂದು ಸದಸ್ಯರಿಗೆ ತಿಳಿಸಲಾಯಿತು.

ಮಂಡಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಪ್ರತಿ ವರ್ಷ ಬಜೆಟ್‌ನಲ್ಲಿ ಶಾಸಕರಿಗಾಗಿ ₹ 1 ಕೋಟಿ ಮೀಸಲಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ADVERTISEMENT

2022-23ನೇ ಸಾಲಿನಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವಗಳಿಗೆ ಆರ್ಥಿಕ ನೆರವು ಪಡೆದು ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಯೋಜನೆ ರೂಪಿಸಲು ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಹಂಚಿಕೆ ಮಾಡಲು ಸರ್ಕಾರಕ್ಕೆ ಕೋರಲಾಗಿತ್ತು. ಇದೀಗ ಅದನ್ನು ₹ 200 ಕೋಟಿಗೆ ಹೆಚ್ಚಿಸಲು ಮಂಡಳಿ ಅನುಮೋದಿಸಿತು.

ಸರ್ಕಾರದಿಂದ ಕಳೆದ ಆಯವ್ಯಯದಲ್ಲಿ ನಬಾರ್ಡ್ ಯೋಜನೆಯಡಿ ಅನುದಾನ ಹಂಚಿಕೆ ಮಾಡದೇ ಇರುವುದರಿಂದ 2024-25ನೇ ಸಾಲಿಗೆ ಬೃಹತ್ ತೂಗುಸೇತುವೆಗಳಿಗೆ ₹ 115.73 ಕೋಟಿ, ತೂಗು ಸೇತುವೆ ಹಾಗೂ ಕಾಲು ಸಂಕಗಳನ್ನು ನಿರ್ಮಿಸಲು ₹ 40 ಕೋಟಿ ಆರ್ಥಿಕ ನೆರವು ಪಡೆಯಲು ಪರಿಷ್ಕೃತ ಪ್ರಸ್ತಾವ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಮಂಡಳಿಯ ಪ್ರಭಾರ ಕಾರ್ಯದರ್ಶಿ ಸಿ.ಎಸ್. ಗಾಯತ್ರಿ ಅವರು ಸಭೆಗೆ ಮಂಡಿಸಿದರು. ಇದನ್ನು ಸಭೆಯಲ್ಲಿದ್ದ ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು.

ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಮಂಜುನಾಥಗೌಡ, ‘ನಬಾರ್ಡ್ ಪರಿಷ್ಕೃತ ಪ್ರಸ್ತಾವನೆಯಂತೆ ಹಣ ಕೊಡಲು ಸಿದ್ಧವಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ‘ಬೃಹತ್ ತೂಗುಸೇತುವೆಗಳು ಎಂದಷ್ಟೇ ಹೇಳಲಾಗಿದೆ. ಅವುಗಳ ಸ್ವರೂಪ, ಉದ್ದ, ಅಗಲ ಎಷ್ಟಿರಬೇಕು? ಒಂದೊಂದಕ್ಕೂ ಎಷ್ಟು ಬಜೆಟ್ ಬೇಕು? ಎಂಬ ನಿಖರ ಮಾಹಿತಿ ಇಲ್ಲ. ಮೀಸಲಿರುವ ಅನುದಾನ ಬೃಹತ್ ತೂಗು ಸೇತುವೆಗಳಿಗೆ ಸಾಕಾಗಲಿದೆಯೇ ಎಂಬ ಅನುಮಾನಗಳೂ ಇವೆ’ ಎಂದರು. ಅದಕ್ಕೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಧ್ವನಿಗೂಡಿಸಿದರು.

ಬೆಂಗಳೂರಲ್ಲಿ ಸಿಎಂ ಸಮ್ಮುಖದಲ್ಲಿ ಸಭೆ
‘2025ರ ಮಾರ್ಚ್‌ನೊಳಗೆ ಪ್ರಸಕ್ತ ಸಾಲಿನ ಎಲ್ಲ ಯೋಜನೆಗಳನ್ನು ಮುಕ್ತಾಯಗೊಳಿಸಬೇಕಿದೆ. ಅದಕ್ಕೆ ಎಲ್ಲ ಶಾಸಕರು, ಎಂಎಲ್‌ಸಿಗಳ ಸಹಕಾರ ಅತ್ಯಗತ್ಯವಾಗಿದೆ’ ಎಂದು ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.