ಭದ್ರಾವತಿ: ನಗರದ ವಿಐಎಸ್‌ಎಲ್ ವ್ಯಾಪ್ತಿಯಲ್ಲಿ ಯುಜಿಡಿ ಮ್ಯಾನ್‌ಹೋಲ್‌ಗೆ ಇಳಿಸಿದ ವ್ಯಕ್ತಿಗಳ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನನ್ವಯ, ವಿಐಎಸ್ಎಲ್ ಟೌನ್‌ಶಿಪ್ ಅಧಿಕಾರಿ ಮೋಹನ್ ಶೆಟ್ಟಿ ಮತ್ತು ಸೂಪರ್‌ವೈಸರ್ ಓಂಕಾರಪ್ಪ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಾಲಭಾರತಿ ಹತ್ತಿರ ಮ್ಯಾನ್‌ಹೋಲ್‌ನಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಮೂವರು ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸಿದ್ದ ಘಟನೆ ಕುರಿತಂತೆ ವಿಐಎಸ್ಎಲ್ ಟೌನ್‌ಶಿಪ್ ಮ್ಯಾನೇಜರ್ ವಿರುದ್ಧ ನಗರಸಭೆ ಆಯುಕ್ತ ಪ್ರಕಾಶ್ ಚನ್ನಪ್ಪನವರ್ ದೂರು ನೀಡಿದ್ದರು. ಮೋಹನ್ ಶೆಟ್ಟಿ ಮತ್ತು ಓಂಕಾರಪ್ಪ ಸೂಚನೆ ಮೇರೆಗೆ ಯಾವುದೇ ಸುರಕ್ಷತೆ ಇಲ್ಲದೆ ಕಾರ್ಮಿಕರನ್ನು ಮ್ಯಾನ್‌ಹೋಲ್ ಸ್ವಚ್ಛಗೊಳಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ನಿಯಮಾವಳಿಗಳನ್ನು ಮೀರಿ ಕಾರ್ಯ ನಿರ್ವಹಿಸಲಾಗಿದ್ದು, ನಗರಸಭೆ ಪರಿಸರ ವಿಭಾಗದ ಎಂಜಿನಿಯರ್ ಪ್ರಭಾಕರ್ ಮತ್ತು ಸಮಾಜ ಕಲ್ಯಾಣದ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು.
ಡಿಎಸ್‌ಎಸ್ ಖಂಡನೆ:
ಸ್ವಚ್ಛತಾ ಕಾರ್ಮಿಕರನ್ನು ಕಾಯ್ದೆ ಉಲ್ಲಂಘಿಸಿ ಮ್ಯಾನ್‌ಹೋಲ್‌ಗೆ ಇಳಿಸಿದ ಘಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದ್ದು, ನಗರಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಕಾರ್ಖಾನೆಯ ನಗರಾಡಳಿತ ಕಚೇರಿಗೆ ಸ್ವಚ್ಛತಾ ಕಾರ್ಮಿಕರೊಂದಿಗೆ ಗುರುವಾರ ಆಗಮಿಸಿದ ದಲಿತ ಮುಖಂಡರು, ನಗರಾಡಳಿತಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಮ್ಯಾನ್‌ಹೋಲ್‌ಗೆ ಇಳಿದು ಕೆಲಸ ನಿರ್ವಹಿಸುವಂತೆ ಯಾರಿಗೂ ನಾನು ಸೂಚಿಸಿಲ್ಲ. ಆದರೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಇಲಾಖೆಯ ಸೂಪರ್‌ವೈಸರ್‌ಗೆ ತಿಳಿಸಿದ್ದೇನೆ. ಅವರ ಉಸ್ತುವಾರಿ ಮೇಲೆ ಕೆಲಸ ನಡೆದಿದೆ’ ಎಂದು ನಗರಾಡಳಿತಾಧಿಕಾರಿ ಮೋಹನ್ ರಾಜ್‌ಶೆಟ್ಟಿ ಸ್ಪಷ್ಟಪಡಿಸಿದರು.
ಜೂ. 21 ಹಾಗೂ ಜು.15ರಂದು ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛತಾ ಕಾರ್ಯ ಕೈಗೊಂಡಿರುವ ಎರಡು ಘಟನೆಗಳು ನಡೆದಿವೆ ಎನ್ನಲಾಗಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.
ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಸಮಿತಿ ರಾಜ್ಯ ಖಜಾಂಚಿ ಸತ್ಯ, ತಾಲ್ಲೂಕು ಘಟಕದ ಸಂಚಾಲಕ ಕೆ. ರಂಗನಾಥ್, ಅಂಗವಿಕಲರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಕಾಣಿಕ್ ರಾಜ್, ಜಿಂಕ್‌ಲೈನ್ ಮಣಿ, ಪರಮೇಶ್ವರಪ್ಪ, ಎನ್. ಗೋವಿಂದ, ಶಾಂತಿ, ಪ್ರಸನ್ನ, ಕೃಷ್ಣಪ್ಪ, ಚಂದ್ರ, ದೇವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಪ್ಪ ಮಾತನಾಡಿ, ‘ಕಾಯ್ದೆ ಪ್ರಕಾರ ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು ಅಪರಾಧವಾಗಿದ್ದು, ಅದರಲ್ಲೂ ಯಾವುದೇ ಪರಿಕರಗಳನ್ನು ನೀಡದೆ ಸ್ವಚ್ಛತಾ ಕಾರ್ಯಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳುವುದು ಮತ್ತೊಂದು ಅಪರಾಧ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.