ಶಿವಮೊಗ್ಗ: ನಗರದ ಹಲವು ಬಡಾವಣೆಗಳಲ್ಲಿ ಮೊದಲೇ ಕಿಷ್ಕಿಂಧೆಯಂತಿರುವ ಕಿರಿದಾದ ರಸ್ತೆಗಳಲ್ಲಿ ಬೈಕ್ ಮತ್ತು ವಾಹನ ಸವಾರರು ಎದುರಿನ ವಾಹನಗಳಿಗೆ ಬಾಜೂ ಕೊಡುವಾಗ ಪರದಾಡಬೇಕಿದೆ. ಇದರ ಜತೆಗೆ ಅವೈಜ್ಞಾನಿಕ ರಸ್ತೆ ಉಬ್ಬುಗಳಂತಿರುವ ಈ ಮ್ಯಾನ್‌ಹೋಲ್‌ಗಳು ಚಾಲಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.
ಈ ಮಾನವ ಕಿಂಡಿಗಳು ಪೌರಕಾರ್ಮಿಕರ ಪಾಲಿಗಂತೂ ಸಾವಿನ ಕುಣಿಕೆ ಆಗಿವೆ. ಆಗಾಗ ಅಮಾಯಕ ಕಾರ್ಮಿಕರನ್ನು ಬಲಿತೆಗೆದುಕೊಂಡಿವೆ. ಇದು ಮ್ಯಾನ್‌ಹೋಲ್ ಒಳಗಿನ ಮರ್ಮವಾದರೆ, ಇದೇ ಮ್ಯಾನ್‌ಹೋಲ್‌ಗಳು ರಸ್ತೆ ಮೇಲೂ ಮರಣ ದಿಬ್ಬಗಳಂತೆ ಬೈಕ್ ಸವಾರರನ್ನು ಅಪಘಾತಕ್ಕೀಡು ಮಾಡಿ, ಬಲಿ ತೆಗೆದುಕೊಂಡಿರುವ ನಿದರ್ಶನಗಳಿವೆ. ಕಾರು, ಜೀಪು, ಆಟೊ ಇನ್ನಿತರ ವಾಹನಗಳು ನಿಯಂತ್ರಣ ತಪ್ಪಲು ಕಾರಣವಾಗಿ, ಅಪಘಾತಕ್ಕೀಡು ಮಾಡಿವೆ.
ನಗರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಮ್ಯಾನ್‌ಹೋಲ್‌ಗಳು ಮತ್ತು ಈ ಹಿಂದೆ ನಗರದಲ್ಲಿ ಇರುವ ಮ್ಯಾನ್‌ಹೋಲ್‌ಗಳು ಬಹುತೇಕ ಎಲ್ಲವೂ ಮುಖ್ಯ ರಸ್ತೆ, ಗಲ್ಲಿ ರಸ್ತೆಗಳ ನಡುವೆಯೇ ಹಾದುಹೋಗಿವೆ. ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ತಲೆಎತ್ತಿರುವ ಮ್ಯಾನ್‌ಹೋಲ್‌ಗಳು ರಸ್ತೆ ಮಟ್ಟಕ್ಕಿಂತ 4 ಇಂಚಿನಿಂದ ಅರ್ಧ ಅಡಿ, ಕೆಲವು ಕಡೆ ಒಂದು ಅಡಿವರೆಗೂ ಮೇಲ್ಮಟ್ಟದಲ್ಲಿವೆ. ಇನ್ನೂ ಕೆಲವು ಕಡೆ ರಸ್ತೆ ಮಟ್ಟಕ್ಕಿಂತ ಅರ್ಧ ಅಡಿ ಆಳಕ್ಕೆ ಸಾವಿನ ಗುಂಡಿಯಂತೆ ಇವೆ. ಬೇಸಿಗೆ ಮತ್ತು ಹಗಲು ವೇಳೆ ಇಂತಹ ಗುಂಡಿಗಳನ್ನು ನೋಡಿಕೊಂಡು ಎಚ್ಚರದಿಂದ ವಾಹನ ಚಲಾಯಿಸಬಹುದು. ರಾತ್ರಿ ವೇಳೆ ಮತ್ತು ಮಳೆ ಸುರಿಯುತ್ತಿದ್ದಾಗ ಮ್ಯಾನ್‌ಹೋಲ್‌ಗಳಿಂದ ಬೈಕ್ ಸವಾರರು, ವಾಹನ ಚಾಲಕರು ಹಾಗೂ ಪಾದಚಾರಿಗಳನ್ನು ದೇವರೇ ಕಾಪಾಡಬೇಕು.
ನಗರದ ಕುವೆಂಪು ರಸ್ತೆಯಲ್ಲಿ ರಸ್ತೆ ಮಟ್ಟಕ್ಕಿಂತ ಅರ್ಧ ಅಡಿ ಮೇಲ್ಮಟ್ಟದಲ್ಲಿ ಮ್ಯಾನ್‌ಹೋಲ್‌ಗಳನ್ನು ನಾಗರಿಕರ ದೂರುಗಳ ಹಿನ್ನೆಲೆಯಲ್ಲಿ ಈಚೆಗಷ್ಟೆ ಸರಿಪಡಿಸಲಾಗಿದೆ. ಆದರೆ, ಜೈಲ್ ರಸ್ತೆ, ರಾಜೇಂದ್ರ ನಗರ 100 ಅಡಿ ರಸ್ತೆ, ವಿನೋಬನಗರ 100 ಅಡಿ ರಸ್ತೆ, ಶರಾವತಿ ನಗರ ರಸ್ತೆ ಸೇರಿದಂತೆ ಇತರೆ ರಸ್ತೆಗಳಲ್ಲಿ ರಸ್ತೆಯ ಮೇಲ್ಪಟ್ಟಕ್ಕೆ ಮರಣ ದಿಬ್ಬದಂತೆ ಅಥವಾ ರಸ್ತೆಮಟ್ಟಕ್ಕಿಂತ ತಗ್ಗಿಗೆ ‘ಸಾವಿನ ಗುಂಡಿ’ಯಂತೆ ಮ್ಯಾನ್ ಹೋಲ್‌ಗಳು ನಿರ್ಮಾಣವಾಗಿವೆ.
ಯುಜಿಡಿ ಕಾಮಗಾರಿ ಆರಂಭಿಸುವ ಮೊದಲು ಎಲ್ಲೆಂದರಲ್ಲಿ ರಸ್ತೆ ಅಗೆಯುತ್ತಿದ್ದ ಕಾರಣಕ್ಕೆ ನಾಗರಿಕರಿಂದಲೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಚುನಾಯಿತ ಪ್ರತಿನಿಧಿಗಳು ಕಿಡಿಕಾರಿದ್ದರು. ರಸ್ತೆಗಳನ್ನು ಯಥಾಸ್ಥಿತಿಗೆ ತರುವ ಭರವಸೆಗಳನ್ನು ಗುತ್ತಿಗೆದಾರರು ಮತ್ತು ಕಾಮಗಾರಿ ಉಸ್ತುವಾರಿ ಹೊತ್ತಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳೂ ನೀಡಿದ್ದರು. ಒಳಚರಂಡಿಗಾಗಿ ರಸ್ತೆ ಅಗೆದ ಪರಿಣಾಮವಾಗಿ ರಸ್ತೆಗಳಲ್ಲಿ ಹೊಂಡ–ಗುಂಡಿಗಳು ಬಿದ್ದು, ಅದರಲ್ಲೂ ಮಣ್ಣು, ಜಲ್ಲಿ ರಸ್ತೆಗಳಲ್ಲಿ ವಾಹನಗಳ ಸಂಚಾರ ದುಸ್ತರವಾಗಿತ್ತು.
‘ಅಭಿವೃದ್ಧಿ ಕೆಲಸಗಳು ನಡೆಯುವಾಗ ಒಂದಿಷ್ಟು ತೊಂದರೆಯಾಗುತ್ತದೆ. ಅದನ್ನು ಸಹಿಸಿಕೊಳ್ಳಬೇಕು ಮತ್ತು ನಾಗರಿಕರು ಸಹಕರಿಸಬೇಕು ಎನ್ನುವ ಮಾತುಗಳನ್ನು ಶಾಸಕರು ಸಾಂತ್ವನದಂತೆ ನೀಡಿದ್ದರು. ಈಗ ಯುಜಿಡಿ ಕಾಮಗಾರಿ ನಡೆದ ಮೇಲೂ ರಸ್ತೆಗಳು ಈ ಮೊದಲಿನ ಸ್ಥಿತಿಯಲ್ಲೇ ಇವೆ’ ಎನ್ನುವುದು ಸಾರ್ವಜನಿಕರ ಆರೋಪ.
‘ಒಳಚರಂಡಿ ಕಾಮಗಾರಿ
ಯನ್ನು ಯೋಜನೆ ಮಂಜೂರಾತಿಯ ಕಾರ್ಯ ಆದೇಶದ ಪ್ರಕಾರ ನಿರ್ವಹಿಸಿಲ್ಲ. ಮ್ಯಾನ್‌ಹೋಲ್ ನಿರ್ಮಾಣಕ್ಕೆ ಗುಣಮಟ್ಟದ ಇಟ್ಟಿಗೆ, ಪೈಪ್ ಬಳಸಲಿಲ್ಲ. ರಿಸಿವಿಂಗ್ ಟ್ಯಾಂಕ್‌ಗಳನ್ನು ನಿರ್ಮಿಸಿಲ್ಲ. ಯುಜಿಡಿಗಾಗಿ ರಸ್ತೆ ಅಗೆದ ಮೇಲೆ ಸರಿಯಾದ ರೀತಿಯಲ್ಲಿ ರಸ್ತೆ ಸಮತಟ್ಟುಗೊಳಿಸಲು ಮೆಟ್ಲಿಂಗ್ ಮಾಡಿಲ್ಲ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ’ ಎಂದು ದೂರುತ್ತಾರೆ ಮಹಾನಗರ ಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ.
‘ಯುಜಿಡಿ ಕಾಮಗಾರಿಯ ಉಸ್ತುವಾರಿ ಮತ್ತು ನಿರ್ವಹಣೆ ನಮ್ಮದಲ್ಲ. ಮಣ್ಣು, ಜಲ್ಲಿಕಲ್ಲಿನ ಕಚ್ಚಾ ರಸ್ತೆಯಲ್ಲಿ ಮಾತ್ರ ಡಾಂಬರ್ ಅಥವಾ ಕಾಂಕ್ರೀಟ್ ಹಾಕಿ ರಸ್ತೆ ಮಟ್ಟ ಎತ್ತರಿಸಲು ಅನುಕೂಲವಾಗುವಂತೆ ಮ್ಯಾನ್‌ಹೋಲ್ ಮಟ್ಟ ಹೆಚ್ಚಿಸಲಾಗಿರುತ್ತದೆ’ ಎನ್ನುತ್ತಾರೆ ಒಳಚರಂಡಿ ಮಂಡಳಿಯ ಅಧಿಕಾರಿಗಳು.
ಮ್ಯಾನ್‌ಹೋಲ್ ಕಿರಿಕಿರಿ ತಪ್ಪಿಸಿ
ನಗರದ ಜೈಲು ರಸ್ತೆಯಲ್ಲಿ ಈಚೆಗೆ ಒಳ ಚರಂಡಿ ಕಾಮಗಾರಿ ಮಾಡಲಾಗಿದ್ದು, ರಸ್ತೆಯ ಮಧ್ಯೆ ಇರುವ ಮ್ಯಾನ್‌ಹೋಲ್‌ಗಳನ್ನು ರಸ್ತೆಯ ಮಟ್ಟಕ್ಕಿಂತ ಎತ್ತರವಾಗಿ ನಿರ್ಮಾಣ ಮಾಡಿದ್ದಾರೆ. ಪರಿಣಾಮ ದ್ವಿಚಕ್ರ ಹಾಗೂ ಕಾರುಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ರಾತ್ರಿಯ ಹೊತ್ತು ಸಾರ್ವಜನಿಕರ ಸಂಚಾರಕ್ಕೂ ಅಡ್ಡಿಯಾಗಿದೆ. ತಿರುವಿನಲ್ಲಿರುವ ಮ್ಯಾನ್‌ಹೋಲ್‌ಗಳು ಕಾಣದೇ ಹಲವರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಸಮನಾಗಿ ಮ್ಯಾನ್‌ಹೋಲ್‌ಗಳು ಇಲ್ಲವಾಗಿದ್ದು, ಕಾರುಗಳು ಓಡಾಡುವಾಗ ಚಾಸಿಸ್‌ಗೆ ಪೆಟ್ಟು ಬೀಳುತ್ತಿದೆ. ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸಬೇಕು ಎಂಬುದು ಸ್ಥಳೀಯ ನಿವಾಸಿ ರಾಘವೇಂದ್ರ ಅವರ ಒತ್ತಾಯ.
ಕೇವಲ ಮ್ಯಾನ್‌ಹೋಲ್‌ಗಳಷ್ಟೇ ಅಲ್ಲ, ಇಡೀ ಯುಜಿಡಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಜನರು ಈಗ ತೊಂದರೆಪಡುವುದಕ್ಕಿಂತ ಮುಂದಿನ ದಿನಗಳಲ್ಲಿ ಪಡುವ ತೊಂದರೆ ಹೆಚ್ಚಿರುತ್ತದೆ. ಇದರ ಬಗ್ಗೆ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ ಇಲ್ಲ.
-ಕೆ.ವಿ. ವಸಂತ್‌ಕುಮಾರ್, ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.