ಶಿವಮೊಗ್ಗ: ತುರ್ತು ಸಂದರ್ಭದಲ್ಲಿ 108 ವಾಹನ ಮಾತ್ರವಲ್ಲ. ಆರೋಗ್ಯ ಇಲಾಖೆಯ ಇತರೆ ಆಂಬುಲೆನ್ಸ್‌ಗಳು ಉಚಿತ ಸೇವೆಗೆ ಲಭ್ಯ ಇವೆ. ಹೀಗಾಗಿ ಸಾರ್ವಜನಿಕರು ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗೆ ಇಲ್ಲವೇ ಸ್ಥಳೀಯ ಆಸ್ಪತ್ರೆಗೆ ಕರೆ ಮಾಡಿದರೆ ಆಂಬುಲೆನ್ಸ್ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಹೇಳುತ್ತಾರೆ.
108 ವಾಹನದ ಸೇವೆ ಮಾತ್ರ ಉಚಿತ. ಆರೋಗ್ಯ ಇಲಾಖೆಯ ಉಳಿದ ಆಂಬುಲೆನ್ಸ್‌ಗಳಿಗೆ ಹಣ ನೀಡಬೇಕು ಎಂಬ ತಪ್ಪು ಕಲ್ಪನೆ ಗ್ರಾಮೀಣರಲ್ಲಿದೆ. ಈ ಕಾರಣದಿಂದಲೇ ಅಗತ್ಯವಿರುವ ಸಂದರ್ಭದಲ್ಲಿ ಬರೀ 108 ವಾಹನಗಳಿಗೆ ಮಾತ್ರ ಕರೆ ಮಾಡುತ್ತಾರೆ. ಅದು ಸರಿಯಲ್ಲ. ಆಂಬುಲೆನ್ಸ್‌ನ ಡೀಸೆಲ್ ವೆಚ್ಚವನ್ನೂ ಇಲಾಖೆಯಿಂದಲೇ ಭರಿಸಲಾಗುತ್ತಿದೆ ಎಂದು ತಿಳಿಸಿದರು.
‘ಕೆಲವು ಆಸ್ಪತ್ರೆಗಳ ಸಮಿತಿಯವರು ಬಳಕೆದಾರರ ನಿಧಿ ಹೆಸರಲ್ಲಿ ಪ್ರತಿ ಕಿ.ಮೀ.ಗೆ ಇಂತಿಷ್ಟು ಕನಿಷ್ಠ ದರ ನಿಗದಿಪಡಿಸುತ್ತಿದ್ದಾರೆ. ಅದು ಸರಿಯಲ್ಲ. ಅದೇ ಕಾರಣಕ್ಕೆ ನಾವು ಆಸ್ಪತ್ರೆಗೆ ಭೇಟಿ ನೀಡಿದಾಗ ಲಾಗ್‌ಬುಕ್ ಕೂಡ ಪರಿಶೀಲನೆ ಮಾಡುತ್ತೇವೆ. ಅಪಘಾತ, ಹಾವು ಕಡಿದಾಗ, ವಿಷ ಸೇವನೆ ಮಾಡಿದಾಗ ಇನ್ನಿತರ ತುರ್ತು ಸಂದರ್ಭಗಳಲ್ಲಿ ಉಚಿತವಾಗಿಯೇ ಆಂಬುಲೆನ್ಸ್‌ಗಳನ್ನು ಕಳುಹಿಸಿ ಕೊಡಲಾಗುವುದು’ ಎನ್ನುತ್ತಾರೆ.
ಜೋಗ ಕಾರ್ಗಲ್, ತುಮರಿ–ಬ್ಯಾಕೋಡ್, ತಾಳಗುಪ್ಪ, ಹೊಳೆಹೊನ್ನೂರು, ಕುಂಸಿ, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು, ಕನ್ನಂಗಿ, ಮಂಡಗದ್ದೆಯಲ್ಲೂ ಆಂಬುಲೆನ್ಸ್‌ಗಳಿವೆ. ಅವು ಉಚಿತವಾಗಿ ಸೇವೆಗೆ ಲಭ್ಯ ಇವೆ. ಯಡೂರಿಗೂ ಶೀಘ್ರ ಆಂಬುಲೆನ್ಸ್ ಬರಲಿದೆ ಎಂದು ಅವರು ಹೇಳಿದರು.
ಗ್ರಾಮೀಣರು ಅದರಲ್ಲೂ ಬಿಪಿಎಲ್ ಕಾರ್ಡ್‌ದಾರರು ಯಾವುದೇ ಕಾರಣಕ್ಕೂ ಆಂಬುಲೆನ್ಸ್‌ಗಳಿಗೆ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಜನರ ಬೇಡಿಕೆ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಆಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸುತ್ತಿದ್ದೇವೆ. ಮಂಗನ ಕಾಯಿಲೆ ವ್ಯಾಪಿಸುವ ಕಾರಣ ಸಾಗರ, ತೀರ್ಥಹಳ್ಳಿ, ಹೊಸನಗರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
108 ವಾಹನ ಬಂದ ಉದಾಹರಣೆ ಇಲ್ಲ
ಹೊಸನಗರ: ತಾಲ್ಲೂಕಿನಲ್ಲಿ ‘ಆರೋಗ್ಯ ಕವಚ 108’ ಸೇವೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಯಾವುದೇ ಅವಘಡ ನಡೆದರೂ 108 ವಾಹನ ಬಂದ ಉದಾಹರಣೆ ಇಲ್ಲ. ಅಪಘಾತ ನಡೆದಲ್ಲಿ ಗಾಯಾಳುಗಳು ನರಳಿ ನರಳಿ ಆಸ್ಪತ್ರೆ ಸೇರಬೇಕಾದ ದುಃಸ್ಥಿತಿ ಇಲ್ಲಿದೆ. ಅಪಘಾತ ನಡೆದು 108ಕ್ಕಾಗಿ ಗಂಟೆಗಟ್ಟಲೇ ಕಾಯಬೇಕಾದ ದುರವಸ್ಥೆಯೂ ಇದೆ. ಒಟ್ಟಾರೆ 108ರ ಬಗ್ಗೆ 108 ದೂರುಗಳು ಕೇಳಿಬರುತ್ತಿವೆ.
ತಾಲ್ಲೂಕಿಗೆ ನಾಲ್ಕು 108 ವಾಹನ ಮಂಜೂರಾಗಿದ್ದು, ಎರಡೇ ವಾಹನಗಳು ಲಭ್ಯವಿವೆ. ಇರುವ ಎರಡು ವಾಹನಗಳೂ ಕೆಟ್ಟು ನಿಂತಿರುವುದೇ ಹೆಚ್ಚು. ಹೊಸನಗರ ಪಟ್ಟಣ, ರಿಪ್ಪನ್‍ಪೇಟೆ, ನಗರ, ಹುಂಚಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ಕವಚ 108’ ವಾಹನ ಸೇವೆ ಇರಬೇಕಿದೆ. ಆದರೆ ಹುಂಚಾ, ನಗರದಲ್ಲಿ ವಾಹನ ವ್ಯವಸ್ಥೆ ಇಲ್ಲ.
ಈಗಿರುವ ಎರಡು ವಾಹನಗಳು ನಿರ್ವಹಣೆ ಇಲ್ಲದೆ ಕೆಟ್ಟಿರುವುದೇ ಹೆಚ್ಚು. ‘ಮಿಷನ್ ಇಲ್ಲ, ಆಕ್ಸಿಜನ್ ಇಲ್ಲ, ಔಷಧಿ ಇಲ್ಲ ಅಂತಾದರೂ, ಎಲ್ಲಾ ಇದೆ ಆದರೆ ವಾಹನದ ಟೈರ್ ಸರಿ ಇಲ್ಲ’ ಎಂಬ ಸಿದ್ಧ ಉತ್ತರ ಕೇಳಿಬರುತ್ತಿದೆ.
ಹೊಸನಗರ ತಾಲ್ಲೂಕಿನಲ್ಲಿ ಗುಡ್ಡಗಾಡು, ಮುಳುಗಡೆ ಪ್ರದೇಶವೇ ಹೆಚ್ಚು. ನಗರ ಹೋಬಳಿಯ ಕೆಲವು ಗ್ರಾಮಗಳು ನಾಗರಿಕ ವ್ಯವಸ್ಥೆಯಿಂದ ದೂರವೇ ಉಳಿದಿವೆ. ಇಲ್ಲಿ ಏನಾದರೂ ಅವಗಢ ಘಟಿಸಿದರೆ ದೇವರೇ ದಿಕ್ಕು. 108ಗೆ ಕರೆ ಮಾಡಿದರೆ ‘ಸರಿ
ಇಲ್ಲ’ ಎಂಬ ಉತ್ತರ ಬರುತ್ತೆ. ಖಾಸಗಿ ಅಂಬುಲೆನ್‌ಗಳೇ ಗತಿ ಎಂಬಂತಾಗಿದೆ. ಆದರೆ, ಕೆಲವರ ಬಳಿ ಹಣ ಇರುವುದಿಲ್ಲ ಎಂಬುದು ಸ್ಥಳೀಯರ ಅಳಲು.
108 ಅಂಕೆಗೂ ಸಿಗುತ್ತಿಲ್ಲ: ಟಿಎಚ್‌ಒ
‘ಹೊಸನಗರ ತಾಲ್ಲೂಕಿನಲ್ಲಿ ನಾಲ್ಕು 108 ವಾಹನ ಬೇಕಿದೆ. ಆದರೆ ನಗರ ಮತ್ತು ಹುಂಚಾದಲ್ಲಿ ವಾಹನ ವ್ಯವಸ್ಥೆ ಇಲ್ಲ. ಇರುವ ಎರಡು ವಾಹನಗಳಲ್ಲೂ ಸಮಸ್ಯೆಗಳಿವೆ. ಖಾಸಗಿ ಸಂಸ್ಥೆಯು ವಾಹನ ನಿರ್ವಹಣೆ ಮಾಡುತ್ತಿದ್ದು, ಯಾವ ಅಂಕೆಗೂ ಸಿಗುತ್ತಿಲ್ಲ. ಹೊಸನಗರದಂತಹ ಹಿಂದುಳಿದ ತಾಲ್ಲೂಕಿಗೆ 108 ವಾಹನ ಅತೀ ಅವಶ್ಯಕವಾಗಿದ್ದು, ಮುಂದಿನ ದಿನಗಳಲ್ಲಿ ಇದರ ನಿರ್ವಹಣೆ ಸುಧಾರಣೆ ಕಾಣಬೇಕಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ್ ಹೇಳುತ್ತಾರೆ.
***
ಆಂಬುಲೆನ್ಸ್ ಎಫ್.ಸಿ ಪಡೆಯಲು ಹೋಗಿದ್ದವು
‘ಹೊಸನಗರ ತಾಲ್ಲೂಕಿನ ಎರಡು 108 ಆಂಬುಲೆನ್ಸ್‌ಗಳನ್ನು ಎಫ್‌ಸಿ (Fitness certificate) ಪಡೆಯಲು ಒಯ್ದಿದ್ದ ಕಾರಣ ಮಾಸ್ತಿಕಟ್ಟೆ– ನಗರದ ನಡುವೆ ನಡೆದ ಅಪಘಾತದ ವೇಳೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಲು ಆಗಿಲ್ಲ. ಆದರೂ 9.30ಕ್ಕೆ ಅಪಘಾತ ಆಗಿದೆ. 11.30ಕ್ಕೆ ಗಾಯಾಳುವನ್ನು 108ನಲ್ಲಿ ಒಯ್ದು ಶಿವಮೊಗ್ಗದ ಮೆಗ್ಗಾನ್‌ಗೆ ದಾಖಲಿಸಲಾಗಿದೆ. ಇನ್ನು ಮುಂದೆ ಒಂದು ಪ್ರದೇಶದಲ್ಲಿ ಎಲ್ಲ ಆಂಬುಲೆನ್ಸ್‌ಗಳನ್ನು ಒಟ್ಟಿಗೆ ಎಫ್‌ಸಿ ಮಾಡಿಸಲು ಕಳುಹಿಸಬೇಡಿ ಎಂದು ಸಂಬಂಧಿಸಿದವರಿಗೆ ಸೂಚಿಸಿದ್ದೇನೆ’ ಎಂದು ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು. ಅಕಸ್ಮಾತ್ ಅಲ್ಲಿ ಲೋಪವಾಗಿದ್ದರೆ ಪರಿಶೀಲನೆಗೆ ಟಿಎಚ್‌ಒಗೆ ಆದೇಶಿಸುತ್ತೇನೆ ಎಂದರು.
ಉಚಿತ ಸೇವೆ ತೆಗೆದು ಹಣ ಮಾಡಲು ಅವಕಾಶ ಕೊಟ್ಟರು
ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತದ ಸಮೀಪ, ಪಟ್ಟಣ ಪಂಚಾಯಿತಿಯ ಕೇಂದ್ರ ಸ್ಥಾನ ಎಂಬ ಹೆಗ್ಗಳಿಕೆಯಿರುವ ಕಾರ್ಗಲ್ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ 108 ಆಂಬ್ಯುಲೆನ್ಸ್ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ.
ಕೊರೊನಾ ಕಾಲಘಟ್ಟದಲ್ಲಿ ಸಾಗರ ಕೇಂದ್ರ ಸ್ಥಾನಕ್ಕೆ ಕಾರ್ಗಲ್ ಆಸ್ಪತ್ರೆಯ 108 ಆಂಬುಲೆನ್ಸ್ ಸೇವೆ ವರ್ಗಾವಣೆಗೊಂಡಿತ್ತು. ತುರ್ತು ಸೇವೆಗೆ ತಾತ್ಕಾಲಿಕವಾಗಿ ಸಾಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿಕೆ ನೀಡುತ್ತಾ ಬಂದ ಆರೋಗ್ಯ ಇಲಾಖೆಯ ಅಧಿಕಾರಿಗಳು, ನಂತರ ಸದ್ದಿಲ್ಲದೇ ಕಾರ್ಗಲ್ ಸರ್ಕಾರಿ ಆಸ್ಪತ್ರೆಯ 108 ಸೇವೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದಾರೆ. ಈಗ 6 ತಿಂಗಳಿನಿಂದ ಹಂಗಾಮಿಯಾಗಿ ಮಿನಿ ಆಂಬುಲೆನ್ಸ್ ಕಾರ್ಗಲ್ ಸರ್ಕಾರಿ ಆಸ್ಪತ್ರೆಗೆ ನಿಯೋಜಿಸಲಾಗಿದ್ದು, ಇದರ ಸೇವೆಯನ್ನು ಜನಸಾಮಾನ್ಯರು, ಬಡವರು ಪಡೆಯಲು ಹಣ ತೆರಬೇಕಾಗಿದೆ.
ಸಾಗರ ಆಸ್ಪತ್ರೆಗೆ ಸೇವೆ ಪಡೆಯಲು ₹ 900, ಶಿವಮೊಗ್ಗ ಆಸ್ಪತ್ರೆಗೆ ಸೇವೆ ಬಳಸಲು ₹ 2,500 ತೆರಬೇಕಾಗಿದೆ. ಜನ ಸಾಮಾನ್ಯರಿಗೆ ಕಾಯಿಲೆ ಬಂದಲ್ಲಿ ಆಂಬುಲೆನ್ಸ್ ಸೇವೆ ಪಡೆಯಲು ಹಿಂದೆಮುಂದೆ ನೋಡುವ ಪ್ರಸಂಗ ಬಂದೊದಗಿದೆ. ಸದ್ಯಕ್ಕೆ ಮೂವರು ವೈದ್ಯರ ಸೇವೆ ಆಸ್ಪತ್ರೆಯಲ್ಲಿ ಲಭ್ಯವಿದ್ದರೂ, ತುರ್ತು ಸಂದರ್ಭದಲ್ಲಿ ಅಮೂಲ್ಯ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ತುರ್ತು ‘108’ ಸೇವೆಯನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
‘ಕಾರ್ಗಲ್ ಕೇಂದ್ರ ಪ್ರದೇಶದಲ್ಲಿ ನಿತ್ಯ ಸಾವಿರಾರು ಪ್ರವಾಸಿ ವಾಹನಗಳು, ಸ್ಥಳೀಯ ವಾಹನಗಳು ಓಡಾಡುತ್ತಿರುತ್ತವೆ. ಅನೇಕ ಅಪಘಾತಗಳಲ್ಲಿ 108 ವಾಹನಗಳ ಅಗತ್ಯತೆ ಎದ್ದು ಕಾಣುತ್ತಿದೆ. ಆರೋಗ್ಯ ಇಲಾಖೆ ಕೂಡಲೇ 108 ಉಚಿತ ವಾಹನ ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ’ ಸ್ಥಳೀಯ ಕಾಂಗ್ರೆಸ್ ನಾಯಕ ಬಿ. ಉಮೇಶ್ ತಿಳಿಸಿದ್ದಾರೆ.
ಆಂಬುಲೆನ್ಸ್ ಸೇವೆ ಇನ್ನಷ್ಟು ಚುರುಕಾಗಲಿ..
ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ತಿರುವು ಮುರುವು ರಸ್ತೆಗಳು ನೇರವಾಗುತ್ತಿದ್ದಂತೆಯೇ ವಾಹನಗಳ ವೇಗ ಹೆಚ್ಚಾಗಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ವೇಳೆ ತುರ್ತು ಸೇವೆ ಒದಗಿಸುವ ಆಂಬುಲೆನ್ಸ್ ಸೇವೆ ಕೂಡ ಕೆಲವು ಸಂದರ್ಭ ತಡವಾಗುವುದರಿಂದ ಪ್ರಾಣಾಪಾಯ ತಡೆಯುವುದು ಸವಾಲಾಗಿದೆ.
‘ತೀರ್ಥಹಳ್ಳಿಯಲ್ಲಿ ಆಂಬುಲೆನ್ಸ್ ಸೇವೆಗೆ ಕೊರತೆ ಇಲ್ಲ. ತಾಲ್ಲೂಕು ಕೇಂದ್ರದಲ್ಲಿ ಒಂದು 108 ವಾಹನ, ಆಂಬುಲೆನ್ಸ್, ನಗು–ಮಗು ವಾಹನ ಇದೆ. ಮಂಡಗದ್ದೆಯಲ್ಲಿ ಒಂದು 108 ವಾಹನ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ತಾಲ್ಲೂಕಿನ ಮಾಳೂರು, ಕೋಣಂದೂರು, ಮೇಗರವಳ್ಳಿ, ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ ಒಂದರಂತೆ ಆಸ್ಪತ್ರೆಯ ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ನಟರಾಜ್ ತಿಳಿಸಿದ್ದಾರೆ.
‘ಕಳೆದ ಜುಲೈ 4ರಂದು ಪಿಗ್ಮಿ ಸಂಗ್ರಾಹಕ ಸುನೀಲ್ ಗುಡ್ಡೇಕೇರಿಯಲ್ಲಿ ಅಪಘಾತವಾಗಿ ಮೃತಪಟ್ಟಿದ್ದರು. ಅವರಿಗೆ ತುರ್ತು ಆರೋಗ್ಯ ಸೇವೆ ಸಿಕ್ಕಿದ್ದರೆ ಬದುಕುತ್ತಿದ್ದರು. ಮೇಗರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಜೆ 6 ಗಂಟೆಯ ನಂತರ ಕಾರ್ಯ ನಿರ್ವಹಿಸಿದರೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು’ ಎನ್ನುತ್ತಾರೆ ಸ್ನೇಹಿತರು.
ಈ ಘಟನೆಯ ನಂತರ ಒಂದಿಷ್ಟು ಆಡಳಿತಾತ್ಮಕ ಮಾರ್ಪಾಡುಗಳು ನಡೆದಿವೆ. ತುರ್ತು ಸೇವೆಯ ಸಂದರ್ಭ ಸಿಬ್ಬಂದಿ ಎಚ್ಚರ ವಹಿಸಬೇಕು ಎಂದು ಜಿಲ್ಲಾಡಳಿತ ನಿರ್ದೇಶನ ನೀಡಿದೆ.
108 ವಾಹನಗಳು ಕರೆಗೆ ಸ್ಪಂದಿಸದಿದ್ದರೆ, ತುರ್ತು ಸಂದರ್ಭದಲ್ಲಿ ಉಚಿತ ಆಂಬುಲೆನ್ಸ್ ಬೇಕಾದರೆ ಗ್ರಾಮೀಣರು ಈ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಿ ಎಂದು ಡಿಎಚ್‌ಒ ಮನವಿ ಮಾಡಿದ್ದಾರೆ.
ಶಿವಮೊಗ್ಗ (ಡಾ.ಚಂದ್ರಶೇಖರ್); 9448183379
ಭದ್ರಾವತಿ (ಡಾ.ಅಶೋಕ್); 9448681734
ತೀರ್ಥಹಳ್ಳಿ (ಡಾ.ನಟರಾಜ್) ;7975660620
ಹೊಸನಗರ (ಡಾ.ಸುರೇಶ್); 8970198887
ಸಾಗರ (ಡಾ.ಮೋಹನ್) ; 9480038414
ಸೊರಬ (ಡಾ.ಪ್ರಭು ಸಾಹುಕಾರ); 9686498767
ಶಿಕಾರಿಪುರ (ಡಾ.ನವೀದ್ ಖಾನ್); 9731435030
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.