ಶಿವಮೊಗ್ಗ: ಬಿ.ಎಚ್.ರಸ್ತೆ ವಿದ್ಯಾನಗರ ಕರಲಹಟ್ಟಿನಾಗರಿಕರುಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
23 ವರ್ಷಗಳ ಹಿಂದೆ ಹಕ್ಕುಪತ್ರ ನೀಡಿದ್ದರೂ ಖಾತೆ ಮಾಡಿಕೊಟ್ಟಿಲ್ಲ. ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಹಿರಿಯರು ಜೀತಮಾಡಿಕೊಂಡು ಬಂದಿದ್ದರು. ಹಲವು ದಶಕ ಅಸ್ಪೃಶ್ಯತೆ ಅನುಭವಿಸಿದ್ದವರಿಗೆ ಈಗಲೂ ಸಾಮಾಜಿಕ ನ್ಯಾಯ ದೊರಕಿಲ್ಲ. ಅದಕ್ಕಾಗಿ 300 ಮತದಾರರು ಈ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಕಾರಣ ನೀಡಿದರು.
ಈ ಪ್ರದೇಶವನ್ನು ಹಿಂದೆ ಇಸ್ಲಾಪುರ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಈಗಲೂ ಕೂಲಿ, ಗಾರೆ, ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೇವೆ. 1988ರಲ್ಲಿ ನಗರಸಭೆಯಿಂದ ಹಕ್ಕುಪತ್ರ ನೀಡಲಾಗಿದೆ. 20 ವರ್ಷಗಳಿಂದ ಹೋರಾಟ ನಡೆಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿದರು.
ಸ್ಥಳಕ್ಕೆ ಬಂದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಕರಲಹಟ್ಟಿ ಮುಖಂಡರಾದ ರತ್ನಮ್ಮ, ಲಕ್ಷ್ಮಮ್ಮ, ರೇಣುಕಾ, ಜಯಲಕ್ಷ್ಮಮ್ಮ, ದೇವೇಂದ್ರ, ಗೋಪಾಲ್, ಈಶ್ವರಪ್ಪ, ದೀಪಕ್, ಕುಮಾರ್, ಮಂಜಯ್ಯ ಅವರ ಮನವೊಲಿಸಲು ಪ್ರಯತ್ನಿಸಿದರು. ಮತದಾನ ಬಹಿಷ್ಕಾರ ಮಾಡಬೇಡಿ. ಚುನಾವಣೆ ಬಳಿಕ ನಿಮ್ಮ ಕೆಲಸ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮನವಿಗೆಸ್ಪಂದಿಸದ ನಾಗರಿಕರು, ತಕ್ಷಣ ಬೇಡಿಕೆ ಈಡೇರಿಸುವಂತೆಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.