ADVERTISEMENT

ಸಿಂಗಾರಕ್ಕೆ ಔಷಧ: ಸಾವಿನ ಮನೆಯತ್ತ ಜೇನುನೊಣ

ಮಲೆನಾಡಿನಲ್ಲಿ ಅಡಿಕೆ ಸಿಂಗಾರಕ್ಕೆ ಔಷಧ ಸಿಂಪಡಣೆ ಆರಂಭ * ಅಪಾಯದಲ್ಲಿ ಜೇನುನೊಣಗಳ ಸಂತತಿ

ಶಿವಾನಂದ ಕರ್ಕಿ
Published 5 ಮಾರ್ಚ್ 2021, 2:12 IST
Last Updated 5 ಮಾರ್ಚ್ 2021, 2:12 IST
ಕಡಿದಾಳು ದಯಾನಂದ
ಕಡಿದಾಳು ದಯಾನಂದ   

ತೀರ್ಥಹಳ್ಳಿ: ಅಡಿಕೆ ಮೆಳೆ ಉದುರುವುದನ್ನು ತಡೆಗಟ್ಟಲು ಅಡಿಕೆ ಸಿಂಗಾರಕ್ಕೆ ರಾಸಾಯನಿಕ ಕೀಟನಾಶಕ ಸಿಂಪಡಣೆಯಿಂದ ಮಲೆನಾಡಿನಲ್ಲಿ ಜೇನು ನೊಣಗಳು ಸಾಯುವ ಆತಂಕ ಎದುರಾಗಿದ್ದು, ಜೇನು ಸಂತತಿಗೆ ಕೀಟನಾಶಕ ಶಾಪವಾಗಿ ಪರಿಣಮಿಸಿದೆ.

ಅಡಿಕೆ ಕೊಯ್ಲು ಮುಗಿದಿದ್ದು, ತೋಟಗಳಲ್ಲಿ ಸಿಂಗಾರ ಗರಿ ಬಿಚ್ಚಿ ಕಾಳು ಕಟ್ಟುತ್ತಿವೆ. ಮೋಡಕವಿದ ವಾತಾವರಣ, ಆಗಾಗ್ಗೆ ಸುರಿಯುವ ಅಕಾಲಿಕ ಮಳೆ, ತಾಪಮಾನದಲ್ಲಿನ ಏರುಪೇರಿನಿಂದಾಗಿ ಕಾಳುಕಟ್ಟಿ ಗಟ್ಟಿಯಾಗಬೇಕಿದ್ದ ಅಡಿಕೆ ಮೆಳೆಗಳು ಉದುರುತ್ತಿರುವುದು ರೈತರ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಬೆಳೆ ಉಳಿಸಿಕೊಳ್ಳಲು ರೈತರು ರಾಸಾಯನಿಕ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.

ಕಳೆದ ಬಾರಿ ಸಿಂಗಾರಕ್ಕೆ ಔಷಧ ಸಿಂಪಡಣೆ ಮಾಡಿದ ಸಂದರ್ಭದಲ್ಲಿ ಗರಿಬಿಚ್ಚಿದ ಸಿಂಗಾರದ ಮಕರಂದ ಹೀರಲು ಮುತ್ತಿದ್ದ ಲೆಕ್ಕವಿಲ್ಲದಷ್ಟು ಜೇನು ನೊಣಗಳು ಬಲಿಯಾಗಿದ್ದವು. ಮೆಳೆ ಉದುರದಂತೆ ಸಿಂಪಡಣೆ ಕಾರ್ಯಕ್ಕೆ ರೈತರು ಚಾಲನೆ ನೀಡುವ ಮುನ್ನ ಜೇನುನೊಣಗಳ ಸಂತತಿಗೆ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕಾಗಿದೆ.

ADVERTISEMENT

ಸಿಂಗಾರ ಒಡೆಯುತ್ತಿದ್ದಂತೆ ಘಮ ಘಮಿಸುವ ಹೂವಿನ ಮಕರಂದ ಹೀರಲು ಜೇನುನೊಣಗಳು ದಂಡು ದಂಡಾಗಿ ಅಡಿಕೆ ತೋಟಗಳಿಗೆ ಮುತ್ತುತ್ತವೆ. ಬೆಳೆ ವೃದ್ಧಿಸುವ ಪರಾಗಸ್ಪರ್ಶದ ಮಹತ್ವದ ಕೆಲಸ ಮಾಡುವ ಜೇನುನೊಣಗಳ ಸಾವಿನ ಭೀತಿ ಆತಂಕ ಮೂಡಿಸಿದೆ.

‘ಜನವರಿಯಿಂದ ಹಿಂಗಾರಗಳು ಬಿಚ್ಚುವುದರಿಂದ ಜೇನುನೊಣಗಳು ಹೆಚ್ಚಾಗಿ ಅಡಿಕೆ ತೋಟವನ್ನು ಆಶ್ರಯಿಸುತ್ತವೆ. ಸರ್ವಋತು ಹೂವುಗಳು ಈಗ ಪಶ್ಚಿಮಘಟ್ಟ ಸಾಲಿನ ತಪ್ಪಲಿನಲ್ಲಿ ಕ್ಷೀಣಿಸಿರುವುದರಿಂದ ಅಡಿಕೆ ತೋಟ ಜೇನುನೊಣಗಳಿಗೆ ಸುಲಭವಾಗಿ ಸಿಗುತ್ತವೆ. ಮಲೆನಾಡಿನ ಕಾಡನ್ನು ನಾಶಪಡಿಸಿ ಏಕ ಜಾತಿಯ ಅಕೇಶಿಯಾ ನೆಡುತೋಪು ನಿರ್ಮಾಣವಾದ ನಂತರ ಜೇನು ತಳಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ’ ಎನ್ನುವರು ಹಿರಿಯರು.

ಸಕಾರಣವಿಲ್ಲದೆ ರಾಸಾಯನಿಕ ಬಳಕೆ ಸಲ್ಲ
ಸಮಗ್ರ ಸುಸ್ಥಿರ ತೋಟಗಾರಿಕೆಯಲ್ಲಿ ತೊಡಗಿರುವ ರೈತರು ಸಕಾರಣವಿಲ್ಲದೆ ರಾಸಾಯನಿಕ ಬಳಸುವುದು ಸರಿಯಲ್ಲ. ಅಲ್ಪ ಪ್ರಮಾಣದ ಕೀಟಬಾಧೆ ಸಹಜವಾಗಿರುತ್ತದೆ. ಜೇನು ಸಂತತಿ ಕೃಷಿಗೆ ಪೂರಕ. ಅದರ ಉಳಿವಿನ ಕಡೆಗೆ ರೈತರು ಹೆಚ್ಚಿನ ಗಮನ ನೀಡಬೇಕು. ಈಗ ಔಷಧ ಸಿಂಪಡಣೆಯ ಅನಿವಾರ್ಯ ಅಲ್ಲ.
- ಟಿ.ಸಿದ್ದಲಿಂಗೇಶ್ವರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಕುಶಾವತಿ, ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.