ಶಿವಮೊಗ್ಗ:ಲಂಕೇಶ್ ಪತ್ರಿಕೆಯಲ್ಲಿ ಸತತ ಎರಡು ದಶಕಗಳು ಪ್ರಕಟವಾದ ‘ಬಯಲುಸೀಮೆಯ ಕಟ್ಟೆ ಪುರಾಣ ಅಂಕಣ’ದ ಮೂಲಕ ಮನೆಮಾತಾದವರು ಬಿ.ಚಂದ್ರೇಗೌಡರು.
ಸರ್ಕಾರಿ ನೌಕರಿ ಜತೆಜತೆಗೇ ವಿರುದ್ಧ ದಿಕ್ಕಿನ ಪತ್ರಿಕಾರಂಗದಲ್ಲೂ ಛಾಪು ಮೂಡಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲರಾಗಿ ಕಾರ್ಯನಿರ್ವಹಿಸುತ್ತಲೇ ಲಂಕೇಶ್ ಪತ್ರಿಕೆ ಮೂಲಕ ಬರವಣಿಗೆಯ ಕೃಷಿ ಮಾಡಿದರು. ಹಲವು ನಾಟಕಗಳನ್ನು ಬರೆದು, ನಿರ್ದೇಶಿಸುವ ಮೂಲಕ ಅಕ್ಷರದ ರಥವನ್ನು ರಂಗಭೂಮಿಗೂ ಎಳೆದು ತಂದರು.
ಅವರ ಅಂಕಣ ಕಟ್ಟೆಪುರಾಣವನ್ನೇ ನಾಟಕವಾಗಿ ರೂಪಿಸಿದರು. 49 ಪ್ರದರ್ಶನ ಕಂಡಿರುವ ಈ ನಾಟಕ ಪ್ರಮುಖ ಪಾತ್ರಧಾರಿಗಳಾದ ಈರಣ್ಣ ಬೆಳ್ಳುಳ್ಳಿ, ಎಸ್.ಆರ್. ಗಿರೀಶ್ ಅವರ ಅಕಾಲಿಕ ನಿಧನದ ಪರಿಣಾಮ ಅರ್ಧ ಶತಕ ಬಾರಿಸಲು ಸಾಧ್ಯವಾಗಿಲ್ಲ. ಕುವೆಂಪು ಅವರ ಕಥೆ ಆಧಾರಿತ ಅವರ ‘ಧನ್ವಂತರಿ ಚಿಕಿತ್ಸೆ’ ನಾಟಕ 12 ಪ್ರದರ್ಶನ ಕಂಡಿದೆ. ಈ ನಾಟಕವನ್ನು ಸಾಣೆಹಳ್ಳಿ ಶಿವಸಂಚಾರ ತಂಡವೂ ಬಳಸಿಕೊಂಡಿದೆ.
ಬದುಕಿರುವ ವ್ಯಕ್ತಿ ಕೇಂದ್ರಿತ ಕಡಿದಾಳು ಶಾಮಣ್ಣ ನಾಟಕ 8 ಪ್ರದರ್ಶನ ಕಂಡಿದೆ. ಹೆಗ್ಗೋಡಿನ ಪ್ರಸನ್ನ ಅವರ ಸೂಚನೆಯ ಮೇಲೆ ಲಂಕೇಶ್ ಅವರ ಕಲ್ಲುಕರಗುವ ಸಮಯ ಕಥೆಗೆ ನಾಟಕ ರೂಪ ನೀಡಿದ್ದಾರೆ. ಸುಮತಿ ತಳವಾಟ ನಿರ್ದೇಶಿಸಿದ ಈ ನಾಟಕ 4 ಪ್ರದರ್ಶನ ಕಂಡಿದೆ. ಮತ್ತೊಂದು ನಾಟಕ ಚಿನ್ನದ ಚಂದಿರ. ಬಯಲುಸೀಮೆಯ ನಾಟಕಗಳಾದ ಕುರುಕ್ಷೇತ್ರ, ರಾಜಸೂಯಯಾಗ ನಾಟಕ ನಿರ್ದೇಶಿಸಿ, ಗೋಪಾಳದಲ್ಲಿ ಪ್ರದರ್ಶಿಸಿದ್ದರು. ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಎಂ.ಪಿ. ಪ್ರಕಾಶ್ ಈ ನಾಟಕದಲ್ಲಿ ಅಭಿನಯಿಸಿದ್ದರು.
ಕಟ್ಟೆಪುರಾಣ ಬರಹದ ಎರಡು ಸಂಕಲನಗಳು ಹೊರಬಂದಿವೆ. ಹೊಸಹೆಜ್ಜೆಗಳು, ಹೊಸಳ್ಳಿ ವೃತ್ತಾಂತ, ಲೈಬ್ರರಿಯಲ್ಲಿ ಕಂಡ ಮುಖ ಅವರ ಕಾದಂಬರಿಗಳು. ಹಳ್ಳಿಕಾರನ ಅವಸಾನ (ಕಥಾ ಸಂಕಲನ), ಜಬೀವುಲ್ಲ ಕೊಟ್ಟ ಕೋಳ, ಬಾಹುಬಲಿ ಬುಡದಲ್ಲಿ ಜನಸಾಗರ, ನಾವೂ ನಾಟಕ ಆಡಿದ್ದು (ಹಾಸ್ಯ ಸಂಕಲನ), ಪುಣ್ಯಕೋಟಿ ಎಂಬ ಕೃಷ್ಣಪ್ಪ, ನಮ್ಮ ಶಾಮಣ್ಣ, ಗಾಂಧಿವಾದಿ ಸುಬ್ರಹ್ಮಣ್ಯ ಶೆಟ್ಟರು (ಸಂಪಾದಿತ) ಅವರ ಕೃತಿಗಳು.
ಮಂಡ್ಯ ಜಿಲ್ಲೆ ಬಿದರಕೆರೆಯ ಬಸವೇಗೌಡ, ದೊಡ್ಡಮ್ಮ ದಂಪತಿ ಪುತ್ರ. 1988ರಲ್ಲಿ ಗ್ರಂಥಪಾಲಕರಾಗಿ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಇಂದು ಗೋಪಾಲಗೌಡ ಬಡಾವಣೆಯಲ್ಲಿ ನೆಲೆಸಿದ್ದಾರೆ. ಜ.13ರಂದು ಅವರ ‘ಬಚ್ಚಿಟ್ಟ ಸತ್ಯಗಳು’ ಕೃತಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ‘ಪ್ರಜಾವಾಣಿ’ ಜತೆ ಮನದಾಳತೆರೆದಿಟ್ಟಿದ್ದಾರೆ.
* ಗ್ರಂಥಪಾಲಕರಾದ ಕಾರಣಕ್ಕೆ ಬರವಣಿಗೆಯ ಅಭಿರುಚಿ ಮೂಡಿತೇ?
–ಹೌದು. ಕೂಲಿ ಕಾರ್ಮಿಕರ ಮಗನಾದ ನಾನು ಕೂಲಿ ಮಾಡಿಕೊಳ್ಳುತ್ತಲೇ ಬದುಕು ಕಟ್ಟಿಕೊಂಡೆ. ಗ್ರಾಂಥಾಲಯದಲ್ಲಿ ನೌಕರಿ ಸಿಕ್ಕ ತಕ್ಷಣ 6 ವರ್ಷ ಬರೀ ಓದುವುದನ್ನೇ ಮಾಡಿದೆ. ಅದು ಬರೆಯುವ ಹುಚ್ಚಿಗೆ ಪ್ರೇರೇಪಣೆಯಾಯಿತು. ಚಿಕ್ಕಮಗಳೂರಿನಲ್ಲಿ ಕೆಲಸಕ್ಕೆ ಸೇರಿದಾಗ ಗಿಡಕ್ಕೆ ನೀರೆರೆಯಲು, ಕಸ ಹೊಡೆಯಲು ಬಳಸಿಕೊಂಡರು. ಮುಂದೆ ಅಲ್ಲಿಗೆ ಮುಖ್ಯ ಗ್ರಂಥಪಾಲಕನಾಗಿ ಹೋದೆ. ನೌಕರಿ ಸಿಕ್ಕರೂ ಬರೆವಣಿಗೆಯ ಪ್ರವೃತ್ತಿ ಬಿಡಲಿಲ್ಲ.
*ನೌಕರಿಯಲ್ಲಿದ್ದೂ ಸರ್ಕಾರ ಟೀಕಿಸಲು ಹೇಗೆ ಸಾಧ್ಯವಾಯಿತು?
– ನಂಜುಂಡಸ್ವಾಮಿ ರೈತರಿಗೆ ಆಡಳಿತಶಾಹಿ ವಿರುದ್ಧ ಧ್ವನಿಎತ್ತುವ ಶಕ್ತಿ ತುಂಬಿದರು. ಲಂಕೇಶ್ ಅವರು ಪತ್ರಕರ್ತರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು. ತಪ್ಪು ಯಾರೇ ಮಾಡಿದರೂ ಖಂಡಿಸುವ ಮನೋಭಾವ ಬೆಳೆಸಿದರು. ಅಷ್ಟಕ್ಕೂ ಆಗ ಕೆಸಿಎಸ್‌ಆರ್ ನಿಯಮಗಳ ಅರಿವಿರಲಿಲ್ಲ. ಹುಂಬುಧೈರ್ಯ ಇತ್ತು.
* ಪತ್ರಿಕೆಗೆ ಬರೆಯುತ್ತಿದ್ದ ಪರಿಣಾಮ ಸವಾಲು ಎದುರಾಗಲಿಲ್ಲವೇ?
–ಸಾಕಷ್ಟು ಸವಾಲುಗಳು ಎದುರಾಗಿವೆ. ಚಿಕ್ಕಮಗಳೂರಿನಲ್ಲಿ ಇದ್ದಾಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ದೂರು ನೀಡಿದ್ದರು. ತಕ್ಷಣ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಹಲವು ಬಾರಿ ಇಲಾಖಾ ವಿಚಾರಣೆ ಎದುರಿಸಿದ್ದೇನೆ. ಎಷ್ಟೋ ಬಾರಿ ವಿವಾದ ಹುಟ್ಟುಹಾಕುವ ಬರಹಗಳಿಗೆ ಹೆಸರು ಹಾಕಿಕೊಳ್ಳುತ್ತಿರಲಿಲ್ಲ. ಇಲಾಖೆಯ ಮೇಲಧಿಕಾರಿಗಳು ಸಾಕಷ್ಟು ಬಾರಿ ರಕ್ಷಿಸಿದ್ದಾರೆ. ಪ್ರೋತ್ಸಾಹ ನೀಡಿದ್ದಾರೆ.
* ಅಂದಿನ ಪತ್ರಿಕೋದ್ಯಮಕ್ಕೂ ಇಂದಿಗೂ ವ್ಯತ್ಯಾಸ ಇದೆಯೇ?
–ಸಾಕಷ್ಟು ಬದಲಾಗಿದೆ. ಲಂಕೇಶ್ ಅಂದು ಟ್ಯಾಬ್ಲೈಡ್ ಪತ್ರಿಕೋದ್ಯಮಕ್ಕೆ ಹೊಸ ರೂಪ ನೀಡಿದ್ದರು. ಇಂದು ಆ ಪ್ರಕಾರ ಅವನತಿಯತ್ತ ಸಾಗಿದೆ. ಅವು ನೀಡುವ ಸುದ್ದಿಗಳನ್ನು ದಿನಪತ್ರಿಕೆಗಳೇ ನೀಡುತ್ತಿವೆ. ಪತ್ರಕರ್ತರಲ್ಲೂ ನೈತಿಕತೆ ಕಡಿಮೆಯಾಗಿದೆ. ನಿರ್ಭೀತಿಯ ಬರಹಗಳ ಸಂಖ್ಯೆ ಕ್ಷೀಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.