ಶಿವಮೊಗ್ಗ: ಕೋವಿಡ್ ಮಾರ್ಗಸೂಚಿ ಅಡಿಯಲ್ಲೇ ಉದ್ಯೋಗ ಖಾತ್ರಿ ಕೆಲಸಗಳು ಆರಂಭಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದರು.
ಕೋವಿಡ್ ಸಂಕಷ್ಟದಿಂದ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದ ಅನ್ವಯ ಒಂದು ಸ್ಥಳದಲ್ಲಿ ಕನಿಷ್ಠ 40 ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನರೇಗಾ ಕೆಲಸ ಕೈಗೊಳ್ಳಲು ಅನುಮತಿ ನೀಡಿದೆ. 2020-21ನೇ ಸಾಲಿನಲ್ಲಿ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿತ್ತು. ಈಗಾಗಲೇ 14.87 ಕೋಟಿ ಮಾನವದಿನಗಳನ್ನು ಸೃಜಿಸಿ ಶೇ 114ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರಗತಿ ಸಾಧನೆಗಾಗಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ₹ 800 ಕೋಟಿ ನೀಡಿದೆ ಎಂದರು.
ಪ್ರಸಕ್ತ ಸಾಲಿಗೆ 13 ಕೋಟಿ ಮಾನವ ದಿನಗಳ ಗುರಿ ನಿಗದಿಯಾಗಿದೆ. ಪ್ರತಿದಿನಕ್ಕೆ ಸರಾಸರಿ 9 ಲಕ್ಷ ಮಾನವ ದಿನಗಳಂತೆ ಈಗಾಗಲೇ 1.98 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 2021ರ ಏಪ್ರಿಲ್‌ನಿಂದ ಕೂಲಿ ಮೊತ್ತ ಹೆಚ್ಚಳವಾಗಿದೆ. ಪ್ರತಿದಿನ ₹ 289 ಹಾಗೂ ಸಲಕರಣಾ ವೆಚ್ಚ ₹ 10 ನೀಡಲಾಗುತ್ತಿದೆ. 100 ದಿನಗಳು ಕೆಲಸ ಮಾಡಿದರೆ ಪ್ರತಿ ಕಾರ್ಮಿಕ ₹ 29,900 ಆದಾಯ ಗಳಿಸಬಹುದಾಗಿದೆ ಎಂದು ವಿವರ ನೀಡಿದರು.
ಪ್ರಸಕ್ತ ಸಾಲಿನಲ್ಲಿ 87,453 ಕುಟುಂಬಗಳಿಗೆ ಹೊಸ ಜಾಬ್ ಕಾರ್ಡ್ ನೀಡಲಾಗಿದೆ. 2,29,089 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕೋವಿಡ್‌ನಿಂದ ಸಾಕಷ್ಟು ಜನರು ನಗರ ತೊರೆದು ಗ್ರಾಮೀಣ ಪ್ರದೇಶಕ್ಕೆ ಹಿಂದಿರುಗಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.