ಶಿವಮೊಗ್ಗ: ಶಾಲಾ ಮಕ್ಕಳಿಗೆ ಫೆ.22ರಿಂದ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ವಿತರಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಂಗಳೂರಿನಲ್ಲಿ ಈ ಕಾರ್ಯಕ್ರಮಕ್ಜೆ ಚಾಲನೆ ನೀಡಲಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಿತ್ಯ 60 ಲಕ್ಷದಂತೆ ವಾರಕ್ಕೆ 1.80 ಕೋಟಿ ಮಕ್ಕಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎಂಬ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಶಾಲೆಗಳಲ್ಲಿ ನಿತ್ಯ ಸಂವಿಧಾನ ಪೀಠಿಕೆ ಓದುವ ಮಾದರಿಯಲ್ಲೇ ನಾಡಗೀತೆ ಹಾಡುವುದು ಕಡ್ಡಾಯ. ನಾಡು-ನುಡಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.
'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ' ಘೋಷ ವಾಕ್ಯವನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿಲ್ಲ. ಬದಲಿಗೆ ವಾಟ್ಸ್ಆ್ಯಪ್‌ನಲ್ಲಿ ಬಂದ ಯಾವುದೋ ಸಂದೇಶ ಈ ಗೊಂದಲ ಸೃಷ್ಟಿಸಿದೆ. ಬಿಜೆಪಿಯವರಿಗೆ ಯಾವುದೇ ಕೆಲಸವಿಲ್ಲ. ಸತ್ಯಾಸತ್ಯತೆ ಅರಿಯದೇ ಸುಮ್ಮನೆ ವಿವಾದ ಮಾಡಿದ್ದಾರೆ‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.