ADVERTISEMENT

ಮಂತ್ರಿಸ್ಥಾನ ಹೋದರೆ ಗೂಟ ಹೋಗುತ್ತದೆ ಅಷ್ಟೆ: ಸಚಿವ ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 11:17 IST
Last Updated 19 ಜುಲೈ 2021, 11:17 IST
ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ    

ಶಿವಮೊಗ್ಗ: ಮಂತ್ರಿ ಸ್ಥಾನ ಹೋದರೆ ಗೂಟ ಹೋಗುತ್ತದೆ ಅಷ್ಟೆ. ರಾಜಕಾರಣದಲ್ಲಿ ಯಾರೂ ನಿರಂತರವಾಗಿ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರ ಬದಲಾವಣೆ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರದು ಎನ್ನಲಾದ ಆಡಿಯೊ ವಿಚಾರ ಕುರಿತು ಸೋಮವಾರ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು.

‘ನಾನೊಬ್ಬ ಬಿಜೆಪಿ ಸಾಮಾನ್ಯ ಕಾರ್ಯಕರ್ತ. ಹಿಂದೂ ಸಮಾಜ, ದೇಶದ ಅಭಿವೃದ್ಧಿಯ ಚಿಂತಕ. ಮೊದಲ ಬಾರಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸಚಿವ ಸ್ಥಾನ ಸಿಕ್ಕಿತ್ತು. ರಾಜೀನಾಮೆ ಕೇಳಿದ್ದರು. ಮರುಮಾತನಾಡದೇ ಕೊಟ್ಟು ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೆ. ಕನಕಪುರದಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದೆ. ಶಾಸಕ, ಮಂತ್ರಿ, ಮುಖ್ಯಮಂತ್ರಿ ಸ್ಥಾನ ಯಾವುದೇ ಇರಲಿ ಗೂಟ ಹೊಡೆದುಕೊಂಡಿರಲು ಆಗದು. ಆಡಳಿತದಲ್ಲೂ ಯುವಕರಿಗೆ ಆದ್ಯತೆ ನೀಡಲು ಹೈಕಮಾಂಡ್‌ ಇಚ್ಚಿಸಿದರೆ ಸ್ವಾಗತಿಸುವೆ. ಪಕ್ಷದ ನಿರ್ಧಾರಕ್ಕೆ ಬದ್ಧ’ ಎಂದು ನಿಷ್ಠೆ ಪ್ರದರ್ಶಿಸಿದರು.

ADVERTISEMENT

ಆಡಿಯೊ ಸಂಭಾಷಣೆ ತಮ್ಮದಲ್ಲ ಎಂದು ಕಟೀಲ್ ಹೇಳಿದ್ದಾರೆ. ಸಿನಿಮಾ ನಟರ ಧ್ವನಿ ಎಷ್ಟುಜನ ಅನುಕರಣೆ ಮಾಡಿಲ್ಲ. ಇದು ಹಾಗೆ ಇರಬಹುದು. ಈ ಕುರಿತು ತನಿಖೆ ನಡೆಸುವಂತೆ ಈಗಾಗಲೇ ಕಟೀಲ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ನನ್ನ ಪ್ರಕಾರ ತನಿಖೆ ನಡೆಸಬೇಕಿರುವುದು ಆಡಿಯೊ ವೈರಲ್‌ ಮಾಡಿದ ಕಾಣದ ಕೈಗಳ ವಿರುದ್ಧ. ಈ ವಿಷಯದಲ್ಲಿ ಪಕ್ಷದ ಅಧ್ಯಕ್ಷರನ್ನು ಬಲಿಪಶು ಮಾಡಲಾಗದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.