ADVERTISEMENT

ವ್ಯಕ್ತಿಗತ ದಾಳಿಯ ಹಿಂದೆ ವಿಜಯೇಂದ್ರ ಬೆಂಬಲಿತ ಟ್ರೋಲ್ ಪಡೆ ಇದೆ: ಮಧು ಬಂಗಾರಪ್ಪ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 19:35 IST
Last Updated 23 ನವೆಂಬರ್ 2024, 19:35 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ: ‘ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಾಯೋಜಿತ ಟ್ರೋಲ್ ಪಡೆ ಇದರ ಹಿಂದೆ ಕೆಲಸ ಮಾಡುತ್ತಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.

‘ಹಿಂಬಾಗಿಲ ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿರುವ ವಿಜಯೇಂದ್ರ, ಹಣದ ದರ್ಪದಿಂದ ಈ ರೀತಿ ವರ್ತಿಸುತ್ತಿದ್ದಾರೆ. ಖಾಸಗಿಯಾಗಿ ಟ್ರೋಲ್ ಪಡೆ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗತವಾಗಿ ದಾಳಿ ಮಾಡಿಸುತ್ತಿದ್ದಾರೆ. ಯಾವ ವಿಳಾಸದಿಂದ ನನ್ನ ವಿರುದ್ಧ ಟ್ರೋಲ್ ಮಾಡಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಕಲೆಹಾಕಿದ್ದೇನೆ. ಅಗತ್ಯ ಬಿದ್ದಾಗ ದಾಖಲೆ ಬಹಿರಂಗಗೊಳಿಸುತ್ತೇನೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಿಇಟಿ ಪರೀಕ್ಷೆಗಾಗಿ ಇಲಾಖೆಯಿಂದ ಪ್ರಸಕ್ತ ವರ್ಷದಿಂದ 25,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯಿಂದ ತಮಗೆ ಆಗಿರುವ ಅನುಕೂಲಕ್ಕಾಗಿ ಮುಖ್ಯಮಂತ್ರಿ ಹಾಗೂ ನನಗೆ ವಿದ್ಯಾರ್ಥಿಗಳು ಕಾರ್ಯಕ್ರಮವೊಂದರಲ್ಲಿ ಧನ್ಯವಾದ ಹೇಳಿದರು. ಆ ವಿಚಾರ ಬಿಟ್ಟು ಬೇರೆ ಏನನ್ನೋ ಟ್ರೋಲ್ ಮಾಡಲಾಯಿತು’ ಎಂದು ಕಿಡಿಕಾರಿದರು.

ADVERTISEMENT

‘ಮೊಟ್ಟೆ ಬೆಲೆ ದುಬಾರಿ ಆಗಿದೆ. ಸರ್ಕಾರ ಕೊಡುತ್ತಿರುವ ಹಣ ಸಾಕಾಗುತ್ತಿಲ್ಲ. ಮೊಟ್ಟೆ ವಿತರಣೆ ಕೆಲಸದಿಂದಾಗಿ ಶಿಕ್ಷಕರ ದೈನಂದಿನ ಕರ್ತವ್ಯಕ್ಕೆ ಅಡಚಣೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಸಮಸ್ಯೆ ನಿವಾರಿಸಲು ಅಗತ್ಯವಿರುವ ಕಡೆ ಗ್ರಾಮ ಪಂಚಾಯಿತಿ ನೆರವಿನೊಂದಿಗೆ ಮೊಟ್ಟೆ ವಿತರಣೆ ಕೆಲಸವನ್ನು ಹೊರಗುತ್ತಿಗೆಗೆ ನೀಡುವ ಚಿಂತನೆಯೂ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.