ADVERTISEMENT

ಕ್ಷೇತ್ರದ ಅಭಿವೃದ್ಧಿಗಾಗಿ ಗ್ರಾಮಗಳಲ್ಲಿ ಪ್ರವಾಸ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 14:08 IST
Last Updated 24 ನವೆಂಬರ್ 2024, 14:08 IST
ಸೊರಬದಲ್ಲಿ ಭಾನುವಾರ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು
ಸೊರಬದಲ್ಲಿ ಭಾನುವಾರ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು   

ಸೊರಬ: ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾ‌ಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

 ₹ 25 ಕೋಟಿ ವೆಚ್ಚದ ಕುಮಟಾ– ಕಾಡಮಡಗಿ ರಾಷ್ಟ್ರೀಯ ಹೆದ್ದಾರಿ– 48ರ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮಗಳಿಗೆ 92 ಯೋಜನೆಗಳ ಅಡಿಯಲ್ಲಿ ₹ 250 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ 44 ಗ್ರಾಮಗಳ 3 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ಕಲ್ಪಿಸಲು ₹ 53 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ADVERTISEMENT

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆದಿರುವುದಕ್ಕೆ ಸಾಕ್ಷಿ. ಅರ್ಹತೆವುಳ್ಳ ಬಿಪಿಎಲ್ ಕಾರ್ಡ್‌ದಾರರಿಗೆ ಗ್ಯಾರಂಟಿ ಯೋಜನೆ ತಡೆ ಹಿಡಿಯುವುದಿಲ್ಲ ಎಂದರು.

₹ 650 ಕೋಟಿ ವೆಚ್ಚದಲ್ಲಿ 355 ಗ್ರಾಮಗಳಿಗೆ ಶರಾವತಿ ನದಿಯಿಂದ ನೀರು ಪೂರೈಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ದಂಡಾವತಿ ಯೋಜನೆಗೆ ಬದಲು ಅಲ್ಲಲ್ಲಿ ಬ್ಯಾರೇಜ್‌ ನಿರ್ಮಿಸಲು ಯೋಜಿಸಲಾಗಿದ್ದು, ಅದಕ್ಕೆ ₹ 190 ಕೋಟಿ ಮೀಸಲಾಗಿದೆ ಎಂದು ತಿಳಿಸಿದರು.

ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ ರಾಜ್ಯದಲ್ಲಿ 500 ಪಬ್ಲಿಕ್ ಶಾಲೆ ಸ್ಥಾಪಿಸಲು ₹ 2,500 ಕೋಟಿ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಜೈಶೀಲಗೌಡ, ಮುಖಂಡರಾದ ತಬಲಿ ಬಂಗಾರಪ್ಪ, ಡಿ.ಬಿ. ಅಣ್ಣಪ್ಪ, ಎಚ್. ಗಣಪತಿ, ಡಿ.ಎಂ. ಶೇಖರ್, ಸದಾನಂದಗೌಡ, ಕೆ.ಪಿ. ಗೌಡ, ಪ್ರಸನ್ನಕುಮಾರ್, ಅತಿಕ್, ಕಲ್ಲಂಬಿ ಹಿರಿಯಣ್ಣ, ನೆಹರೂ ಕೊಡಕಣಿ, ಶ್ರೀರಂಜನಿ, ಮಂಜುನಾಥ್ ತಲಗಡ್ಡೆ, ಎಂಜಿನಿಯರ್‌ಗಳಾದ ಯಶೋಧರ, ಶಿವಮೂರ್ತಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.