ADVERTISEMENT

ವರದಾ ನದಿ, ಮಾವಿನಹೊಳೆ, ಕನ್ನೆ ಹೊಳೆ ಪ್ರವಾಹ: ಹಾನಿ ವೀಕ್ಷಿಸಿದ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 7:37 IST
Last Updated 21 ಜುಲೈ 2024, 7:37 IST
<div class="paragraphs"><p>ಸಾಗರ ತಾಲ್ಲೂಕಿನ ಹಿರೇನಲ್ಲೂರು ಬಳಿ ವರದಾ ನದಿ ಪ್ರವಾಹ ಸ್ಥಳದಲ್ಲಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಂದ ಭಾನುವಾರ ಮಾಹಿತಿ ಪಡೆದರು</p></div>

ಸಾಗರ ತಾಲ್ಲೂಕಿನ ಹಿರೇನಲ್ಲೂರು ಬಳಿ ವರದಾ ನದಿ ಪ್ರವಾಹ ಸ್ಥಳದಲ್ಲಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಂದ ಭಾನುವಾರ ಮಾಹಿತಿ ಪಡೆದರು

   

ಶಿವಮೊಗ್ಗ: ಭಾರಿ ಮಳೆಯಿಂದ ಸಾಗರ ತಾಲ್ಲೂಕಿನ ಹಿರೇನಲ್ಲೂರು ಬಳಿ ವರದಾ ನದಿ ಹಾಗೂ ಮಾವಿನಹೊಳೆ ಉಕ್ಕಿ ಹರಿಯುತ್ತಿವೆ. ಇದರಿಂದ ಸಾವಿರಾರು ಎಕರೆ ಭತ್ತದ ಗದ್ದೆ, ಅಡಿಕೆ, ಬಾಳೆ ತೋಟಗಳು ಜಲಾವೃತವಾಗಿವೆ. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಹಾನಿಯ ಪ್ರಮಾಣ ವೀಕ್ಷಣೆ ಮಾಡಿದರು.

ಕಾನಲೆ, ಬೀಸನಗದ್ದೆ, ಸೈದೂರು ಸುತ್ತಲೂ ಕನ್ನೆ ಹೊಳೆ, ವರದಾ ಅಬ್ಬರ ಸೃಷ್ಟಿಸಿರುವ ಅವಾಂತರವನ್ನು ವೀಕ್ಷಿಸಿ ಬೆಳೆಗಳಿಗೆ ಆಗಿರುವ ಹಾನಿಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು.

ADVERTISEMENT

ತಟ್ಟೆಗುಂಡಿ ಬಳಿ ಮಾವಿನ ಹೊಳೆ ನೆರೆಯಿಂದ ಜಲಾವೃತಗೊಂಡಿರುವ ಅಡಿಕೆ ಗಿಡಗಳು

ಮಾವಿನ ಹೊಳೆಯ ಎರಡು ಕಡೆ ದಂಡೆ ಒಡೆದು ಹೋಗಿದೆ. ಪ್ರತೀ ಮಳೆಗಾಲದಲ್ಲೂ ದಂಡೆ ಒಡೆದು ಹೋಗಿ ಜಮೀನುಗಳು ಜಲಾವೃತವಾಗುವುದು ಸಾಮಾನ್ಯ. ತಡೆಗೋಡೆ ಕಟ್ಟಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಸಚಿವರಿಗೆ ಮನವಿ ಮಾಡಿದರು.

ವರದಾ ನದಿಗೆ ಬ್ಯಾರೇಜ್ ನಿರ್ಮಿಸುವಂತೆ ಶುಂಠಿಕೊಪ್ಪ, ತಟ್ಟೆಗುಂಡಿ ಗ್ರಾಮಸ್ಥರು ಕೇಳಿದರು.

ನಂತರ ಸಮೀಪದ ಮಂಡಗಳಲೆಯ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಮಧು ಬಂಗಾರಪ್ಪ, ಮನೆ ಕುಸಿದುಬಿದ್ದು ಅಲ್ಲಿ ಆಶ್ರಯ ಪಡೆದಿರುವ ಅದೇ ಗ್ರಾಮದ ಎರಡು ಕುಟುಂಬಗಳ ಸದಸ್ಯರ ಅಳಲು ಆಲಿಸಿದರು. ಸರ್ಕಾರದಿಂದ ಪರಿಹಾರ ಕೊಡಿಸಿ ಮನೆ ಕಟ್ಟಿಸಿಕೊಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯ್ತಿ ಸಿಇಒ ಎನ್.ಹೇಮಂತ್ ಕುಮಾರ್ ಈ ವೇಳೆ ಸಚಿವರ ಜೊತೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.