ADVERTISEMENT

ಸಾಗರ: ಬೆಳೆಗಾರರಿಗೆ ಕಾಟ ಕೊಡುತ್ತಿರುವ ಮಂಗಗಳ ಸ್ಥಳಾಂತರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 14:28 IST
Last Updated 21 ಜುಲೈ 2023, 14:28 IST
ಸಾಗರದಲ್ಲಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪ್ರಮುಖರು ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಶುಕ್ರವಾರ ಭೇಟಿಯಾಗಿ ಮಂಗಗಳನ್ನು ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದರು
ಸಾಗರದಲ್ಲಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪ್ರಮುಖರು ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಶುಕ್ರವಾರ ಭೇಟಿಯಾಗಿ ಮಂಗಗಳನ್ನು ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದರು   

ಸಾಗರ: ಇಲ್ಲಿನ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪ್ರಮುಖರು ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಶುಕ್ರವಾರ ಭೇಟಿಯಾಗಿ ಬೆಳೆಗಾರರಿಗೆ ಕಾಟ ಕೊಡುತ್ತಿರುವ ಮಂಗಗಳನ್ನು ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದರು.

ಸಾಗರ, ಸೊರಬ, ಹೊಸನಗರ ತಾಲ್ಲೂಕುಗಳಲ್ಲಿ ಮಂಗಗಳ ಹಾವಳಿ ವಿಪರೀತವಾಗಿದ್ದು ಬೆಳೆಗಾರರು ತಮ್ಮ ಬೆಳೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಮಂಗಗಳನ್ನು ಹಿಡಿದು ಸ್ಥಳಾಂತರಿಸಲು ಆಯಾ ಪಂಚಾಯಿತಿಗಳಿಗೆ ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

‘ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಸ್ತಾವನೆ ಸಲ್ಲಿಸಿದರೆ ಸಂಬಂಧಪಟ್ಟ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ಮಂಗಗಳನ್ನು ಹಿಡಿದು ಸ್ಥಳಾಂತರಿಸುವುದಕ್ಕೆ ಅನುಮತಿ ನೀಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನವರ್ ಹೇಳಿದರು. 

ADVERTISEMENT

ಕಾಡು ಪ್ರಾಣಿಗಳಿಂದ ಬೆಳೆಗಳಿಗೆ ನಷ್ಟ ಉಂಟಾದರೆ ಇಲಾಖೆಯ ಮಾನದಂಡಗಳ ಪ್ರಕಾರ ಬೆಳೆಗಾರರಿಗೆ ಪರಿಹಾರ ವಿತರಿಸಲಾಗುವುದು. ಕಾಡು ಉಳಿಸಲು ಬೆಳೆಗಾರರು ಸಹಕಾರ ನೀಡಬೇಕು. ಕಾಡು ಪ್ರಾಣಿಗಳಿಂದ ತೊಂದರೆಯಾಗದಂತೆ ಅರಣ್ಯ ಇಲಾಖೆ ನಿಗಾ ವಹಿಸಲಿದೆ ಎಂದು ಅವರು ಭರವಸೆ ನೀಡಿದರು.

ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರಭಟ್, ಉಪಾಧ್ಯಕ್ಷ ರವಿಕುಮಾರ್ ಎಚ್.ಎಂ. ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕೆ.ಎಸ್. ಪ್ರಮುಖರಾದ ಯು.ಎಚ್.ರಾಮಪ್ಪ, ಎಚ್.ಎಂ.ಬಸವರಾಜ್, ಡಿ.ವಿ.ವೆಂಕಟೇಶ್, ನಾಗಾನಂದ, ದಿನೇಶ್ ಬರದವಳ್ಳಿ, ಬಿ.ಎಸ್.ಅವಿನಾಶ್, ಬಿ.ಎಸ್.ಗಣೇಶ್, ಚೇತನ್ ರಾಜ್ ಕಣ್ಣೂರು, ತಿರುಮಲ ಮಾವಿನಕುಳಿ, ಅರುಣಾ ಎ.ಎಸ್. ನಿಟ್ಟೂರು, ಆರ್.ಎಸ್.ಗಿರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.