ಸಾಗರ: ಬೆಳೆ ಹಾನಿ ಮಾಡುವ ಮಂಗಗಳನ್ನು ಹಿಡಿಯಲು ಮುಂದಾದರೆ ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧ. ಅದೇ ಆದ ನಷ್ಟಕ್ಕೆ ಕಾಯ್ದೆ ಪ್ರಕಾರವೇ ಬೆಳೆ ಪರಿಹಾರ ಕಲ್ಪಿಸಿ ಅಂದರೆ ಮಾತ್ರ ಅಧಿಕಾರಿಗಳಿಂದ ತೀವ್ರ ಮೌನ..
ಅರಣ್ಯ ಇಲಾಖೆಯ ಈ ಇಬ್ಬಂದಿತನ ಮಲೆನಾಡಿನ ರೈತರನ್ನು ಹೈರಾಣಾಗಿಸಿದೆ.
ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಂಗ ಹಾಗೂ ಮುಸಿಯಾಗಳ ಹಾವಳಿ ವಿಪರೀತವಾಗಿದೆ. ಬೆಳೆ ಹಾನಿ ಮಾಡಿ ರೈತ ಸಮೂಹಕ್ಕೆ ತೊಂದರೆ ಕೊಡುವ ಜೊತೆಗೆ ನಗರ ಪ್ರದೇಶಕ್ಕೂ ಲಗ್ಗೆ ಇಟ್ಟು ಜನರಿಗೆ ಕಾಟ ಕೊಡುತ್ತಿವೆ.
ಅಡಿಕೆ ಮರ ಏರುವ ಮಂಗಗಳು ಎಳೆಯ ಅಡಿಕೆ ಚೀಪುವುದರಿಂದ ಅವು ಒಣಗಿದ ನಂತರ ಮರದಿಂದ ಉದುರಿ ಬೀಳುತ್ತಿವೆ. ಮಂಗಗಳ ಕಾಟದಿಂದ ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆಗಳಾದ ಕಾಫಿ, ಕಾಳುಮೆಣಸು ಕೂಡ ಬೆಳೆಯಲು ಸಾಧ್ಯವಾಗುತ್ತಿಲ್ಲ.
‘ಹಿಂದೆಲ್ಲಾ ತೋಟಕ್ಕೆ 7 ರಿಂದ 8 ಮಂಗಗಳ ಹಿಂಡು ಬರುತ್ತಿದ್ದವು. ಈಗ ಒಂದು ತಂಡದಲ್ಲಿ 30 ರಿಂದ 40 ಮಂಗಗಳು ದಾಳಿ ಇಡುತ್ತಿವೆ’ ಎನ್ನುತ್ತಾರೆ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್.
ಕಳೆದ ತಿಂಗಳು ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಮಂಗನ ಹಿಡಿಯಲು ಮುಂದಾದವರ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿತ್ತು. ಆಗ ಅಡಿಕೆ ಬೆಳೆಗಾರರ ಸಂಘದಿಂದ ಪ್ರತಿಭಟನೆ ಕೂಡ ನಡೆದಿತ್ತು.
ಈಚೆಗೆ ಇಕ್ಕೇರಿ ಗ್ರಾಮದಲ್ಲಿ ಮಂಗನ ಹಿಡಿಯಲು ಮುಂದಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ತೆರಳಿ ಗ್ರಾಮಸ್ಥರೊಂದಿಗೆ ಕಟುವಾಗಿ ವರ್ತಿಸಿದ್ದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಬೆಳೆಗಾರರ ಸಂಘದ ಪ್ರಮುಖರು ಇಲಾಖೆ ಕಚೇರಿಗೆ ಭೇಟಿ ನೀಡಿ ‘ಒಂದೊ ಮಂಗಗಳನ್ನು ಇಲಾಖೆ ಹಿಡಿದು ಕಾಡಿಗೆ ಬಿಡಬೇಕು. ಇಲ್ಲದಿದ್ದರೆ ನಮಗೆ ಹಿಡಿಯಲು ಅನುಮತಿ ನೀಡಬೇಕು’ ಎಂದು ಆಗ್ರಹಿಸಿದೆ.
‘ಈ ಹಿಂದೆ ಕಾಡಿನಲ್ಲಿ ಆಹಾರದ ಕೊರತೆ ಇರಲಿಲ್ಲ. ರಾತ್ರಿ ಹೊತ್ತು ಮರವೇರಿ ಮಂಗಗಳ ಭೇಟೆಯಾಡುತ್ತಿದ್ದ ಚಿರತೆಗಳೂ ಈಗಿಲ್ಲ. ಮಂಗನ ಮರಿ ಹಿಡಿದು ತಿನ್ನುವ ಗಿಡುಗ, ಹೆಬ್ಬಾವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಈ ಕಾರಣದಿಂದ ಮಂಗಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಪರಿಸರವಾದಿ ಅಖಿಲೇಶ್ ಚಿಪ್ಪಳಿ.
‘ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಅನಿಯಮಿತ ವಿಸ್ತರಣೆ ಮಂಗಗಳ ಆವಾಸ ಸ್ಥಾನ ಕಿತ್ತುಕೊಂಡಿದೆ. ಹಣ್ಣು, ಕಾಯಿ, ಎಲೆ, ಚಿಗುರು, ತೊಗಟೆ ಇತ್ಯಾದಿ ಪ್ರಬೇಧಗಳ ಸಸ್ಯ ವೈವಿಧ್ಯ ಇಲ್ಲದೆ ಕೇವಲ ಅಕೇಶಿಯಾ, ನೀಲಗಿರಿ ನೆಡುತೋಪು ಹೆಚ್ಚುತ್ತಿವೆ. ಮಂಗಗಳು ತೋಟಗಳಿಗೆ ನುಗ್ಗಲು ಇದೂ ಕಾರಣ’ ಎಂಬುದು ಅಖಿಲೇಶ್ ಅಭಿಪ್ರಾಯ.
ಕೆಲವು ವರ್ಷಗಳ ಹಿಂದೆ ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪ ಮಂಕಿ ಪಾರ್ಕ್ ನಿರ್ಮಿಸಲು ರಾಜ್ಯ ಸರ್ಕಾರ ಸ್ಥಳ ಗುರುತಿಸಿತ್ತು. ಅದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಜೋಗದ ಬಳಿ ಜಾಗ ಗುರುತಿಸಿದ್ದು, ಅದಕ್ಕೂ ವಿರೋಧ ಬಂದ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ.
ವನ್ಯಜೀವಿಗಳ ಹಾವಳಿಯಿಂದ ಬೆಳೆ ನಷ್ಟವಾದರೆ ರೈತರಿಗೆ ಪರಿಹಾರ ವಿತರಿಸಬೇಕು. ಬೇರೆ ವಿಷಯದಲ್ಲಿ ಮಂಗಗಳನ್ನು ವನ್ಯಜೀವಿ ಎಂದು ಪರಿಗಣಿಸುವ ಅರಣ್ಯ ಇಲಾಖೆ ಪರಿಹಾರ ನೀಡಿಕೆ ವಿಷಯದಲ್ಲಿ ಮಾತ್ರ ಮೌನವಾಗುವುದೇಕೆ ಎಂಬುದು ರೈತರ ಪ್ರಶ್ನೆ.
ಮಂಗಗಳ ಉಪಟಳದಿಂದ ಬೆಳೆ ನಷ್ಟ ಅನುಭವಿಸಿರುವ ತಾಲ್ಲೂಕಿನ 700ಕ್ಕೂ ಹೆಚ್ಚು ರೈತರು ಪರಿಹಾರ ಕೋರಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರ ಇತ್ಯರ್ಥಪಡಿಸಿ ಪರಿಹಾರ ವಿತರಿಸಬೇಕುವ.ಶಂ.ರಾಮಚಂದ್ರ ಭಟ್ , ಅಧ್ಯಕ್ಷರು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಸಾಗರ
ಇತರೆ ವನ್ಯಜೀವಿಗಳಿಂದ ಬೆಳೆಗಳಿಗೆ ಹಾನಿ ಉಂಟಾದಾಗ ಪರಿಹಾರ ನೀಡಲು ಅವಕಾಶವಿದೆ. ಮಂಗಗಳಿಂದ ಹಾನಿ ಉಂಟಾದರೆ ಈವರೆಗೆ ಪರಿಹಾರ ನೀಡಿಲ್ಲ. ಸರ್ಕಾರ ನಿಯಮಾವಳಿ ರೂಪಿಸಿದರೆ ಪರಿಹಾರ ನೀಡಲಾಗುವುದುಮೋಹನ್ ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.