ತೀರ್ಥಹಳ್ಳಿ: ಮಲೆನಾಡಿನ ರೈತರು ಮಂಗಗಳ ಕಾಟದಿಂದ ಹೈರಾಣಾಗಿದ್ದಾರೆ. ಅಡಿಕೆ, ತರಕಾರಿ ಒಳಗೊಂಡಂತೆ ಯಾವುದೇ ಬೆಳೆ ಬೆಳೆಯಲು ರೈತರಿಗೆ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.
ಮಂಗಗಳು ನಾಶಪಡಿಸುವ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿಲ್ಲ. ಮಂಗಗಳನ್ನು ವನ್ಯಜೀವಿ ಎಂದು ಪರಿಗಣಿಸಿಲ್ಲ. ನಿಯಂತ್ರಣವನ್ನೂ ಮಾಡುತ್ತಿಲ್ಲ. ಊರಿನ ಒಳಗೂ, ಹೊರಗೂ ಮಂಗಗಳು ನೀಡುವ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಲೆನಾಡಿನ ಅಡಿಕೆ ತೋಟಗಳಿಗೆ ದಾಳಿ ಇಡುವ ಮಂಗಗಳ ಹಿಂಡು ಅಡಿಕೆ ಮೆಳೆ ಬಲಿಯುತ್ತಿದ್ದಂತೆ ಅವುಗಳ ತೊಟ್ಟು ಮುರಿದು ರಸ ಹೀರುವ ಮೂಲಕ ಕೋಟ್ಯಂತರ ಬೆಲೆಯ ಅಡಿಕೆ ಫಸಲು ನಾಶ ಮಾಡುತ್ತಿವೆ. ಬಲಿಯುವ ಹಂತದಲ್ಲಿರುವ ಅಡಿಕೆ ಗೊನೆ (ಕೊನೆ) ಮೇಲೆ ಉಗುರಿನ ಕಲೆ ಮೂಡಿಸುವುದರಿಂದ ಬೆಳೆಯುತ್ತಿರುವ ಸೂಕ್ಷ್ಮ ಅಡಿಕೆ ಗೊನೆಯಲ್ಲಿನ ಅಡಿಕೆ ಮೆಳೆಗಳು ಉದುರಿ ಗೊನೆ ಕ್ರಮೇಣ ಸತ್ತುಹೋಗುತ್ತಿವೆ. ಮಂಗಗಳ ಹಾವಳಿ ತಡೆಗಟ್ಟಲು ರೈತರು ಬಗೆ ಬಗೆಯಲ್ಲಿ ಯತ್ನಿಸಿ ಕೈಚೆಲ್ಲಿದ್ದಾರೆ.
‘ಚಿಗುರು ಅಡಿಕೆ ಮೆಳೆಯ ತೊಟ್ಟು ಮುರಿಯುವಾಗ ಚಿಮ್ಮುವ ಒಗರು ಮಿಶ್ರಿತ ಎಳನೀರನ್ನು ಮಂಗಗಳು ಹೀರುತ್ತಿದ್ದು, ಇದರಿಂದ ಮತ್ತೇರಿಸಿಕೊಳ್ಳುವ ಚಟಕ್ಕೆ ಬಿದ್ದಿವೆ. ಇದರಿಂದ ಮಂಗಗಳು ಹಿಂಡು ಹಿಂಡಾಗಿ ಅಡಿಕೆ ತೋಟಗಳಿಗೆ ದಾಳಿ ಇಡುತ್ತಿವೆ’ ಎನ್ನುತ್ತಾರೆ ಮಂಡಗದ್ದೆ ಹೋಬಳಿ ರೈತ ಮಂಜಪ್ಪ.
ಮಲೆನಾಡಿನ ಸಹಜ ಕಾಡನ್ನು ನಾಶಪಡಿಸಿ ಎಂಪಿಎಂ ನೆಡುತೋಪು ನಿರ್ಮಾಣವಾದ ಬಳಿಕ ಆಹಾರದ ಕೊರತೆ ಎದುರಿಸುತ್ತಿರುವ ಮಂಗಗಳು ಜನವಸತಿ ಪ್ರದೇಶ, ರೈತರ ಬೆಳೆಗೆ ದಾಳಿ ಇಡುವಂತಾಗಿದೆ. ನಾಶವಾಗಿರುವ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವುದಕ್ಕೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಒತ್ತಾಯಿಸುತ್ತಾರೆ.
ಮಂಗಗಳ ನಿಯಂತ್ರಣಕ್ಕೆ ಹೊಸನಗರ ತಾಲ್ಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿ ಸರ್ಕಾರ ₹ 6 ಕೋಟಿ ವೆಚ್ಚದಲ್ಲಿ ರೂಪಿಸಲು ಉದ್ದೇಶಿಸಿರುವ ‘ಮಂಕಿಪಾರ್ಕ್’ ನಿರ್ಮಾಣದ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಪಾರ್ಕ್ ನಿರ್ಮಾಣ ಮಾಡುವ ಕುರಿತು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಇನ್ನೂ ಸ್ಥಳ ನಿಗದಿಯಾಗದೇ ಇರುವುದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.
ವಿಧಾನಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಕಾಡುಪ್ರಾಣಿಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಮುನ್ನೆಚ್ಚರಿಕರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವೇ ಅವುಗಳನ್ನು ಕೊಲ್ಲಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
***
ಮಂಗಗಳು ನಾಶಪಡಿಸುವ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ. ಪ್ರತಿವರ್ಷ ರೈತರು ನಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ರೈತರಿಗೆ ಪರಿಹಾರ ನೀಡಿ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
ಬಾಳೇಹಳ್ಳಿ ಪ್ರಭಾಕರ್, ಅಧ್ಯಕ್ಷ, ತಾಲ್ಲೂಕು ಕೃಷಿಕ ಸಮಾಜ
***
ಮಂಗಗಳಿಂದ ಅಡಿಕೆ ಬೆಳೆ ಹಾನಿ ಕುರಿತು ದೂರುಗಳು ಬರುತ್ತಿವೆ. ಪರಿಹಾರ ನೀಡುವ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.
ಸತೀಶ್ ಚಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.