ADVERTISEMENT

ನೈತಿಕತೆ ಉದ್ದೀಪಿಸುವ ಮಾಧ್ಯಮ ರಂಗಭೂಮಿ: ವಿಠ್ಠಲ ಭಂಡಾರಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 5:03 IST
Last Updated 28 ಮಾರ್ಚ್ 2021, 5:03 IST
ಸಾಗರದಲ್ಲಿ ಸ್ಪಂದನ ರಂಗತಂಡ ಶನಿವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗನಟ, ನಿರ್ದೇಶಕ ಪರಶುರಾಮ ಸೂರನಗದ್ದೆ ಅವರನ್ನು ಸನ್ಮಾನಿಸಲಾಯಿತು.
ಸಾಗರದಲ್ಲಿ ಸ್ಪಂದನ ರಂಗತಂಡ ಶನಿವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗನಟ, ನಿರ್ದೇಶಕ ಪರಶುರಾಮ ಸೂರನಗದ್ದೆ ಅವರನ್ನು ಸನ್ಮಾನಿಸಲಾಯಿತು.   

ಸಾಗರ: ರಂಗಭೂಮಿ ಮನುಷ್ಯನೊಳಗಿನ ನೈತಿಕತೆಯನ್ನು ಉದ್ದೀಪಿಸುವ ಮಾಧ್ಯಮ ಎಂದು ಸಿದ್ದಾಪುರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ವಿಠ್ಠಲ ಭಂಡಾರಿ ಹೇಳಿದರು.

ಇಲ್ಲಿನ ಎಸ್.ಎನ್. ನಗರ ಬಡಾವಣೆಯ ಭೂಮಿ ರಂಗಮನೆಯಲ್ಲಿ ಸ್ಪಂದನ ರಂಗತಂಡ ಶನಿವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಂಗಭೂಮಿ ಎನ್ನುವುದು ಉದಾತ್ತ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಚಳವಳಿ ಕೂಡ ಆಗಿದೆ.ಜೀವಪರತೆ ಜೊತೆಗೆ ವೈಚಾರಿಕ ಎಳೆ, ಕಲಾತ್ಮಕತೆಯನ್ನು ತನ್ನ ಜೊತೆಗೆ ಮೈಗೂಡಿಸಿಕೊಂಡಿರುವ ರಂಗಭೂಮಿ ಸದಾ ಕಾಲದ ಜೊತೆಗೆ ಅನುಸಂಧಾನ ನಡೆಸುವ ಚಲನಶೀಲ ಮಾಧ್ಯಮವಾಗಿದೆ. ನೇರವಾಗಿ ಪ್ರೇಕ್ಷಕರ ಜೊತೆ ಮುಖಾಮುಖಿ ಮಾಡುತ್ತಲೇ ಅವರೊಂದಿಗೆ ಸಾವಯವ ಸಂಬಂಧ ಕಟ್ಟುವ ಕೆಲಸ ಆಗುತ್ತದೆ ಎಂದು ವಿಶ್ಲೇಷಿಸಿದರು.

ADVERTISEMENT

ಸಂವಾದವನ್ನು ಬೆಳೆಸುವುದು, ವಿಚಾರಶೀಲತೆಯನ್ನು ಹಬ್ಬುವುದು ಕೂಡ ರಂಗಭೂಮಿಯ ಉದ್ದೇಶಗಳಲ್ಲಿ ಒಂದು. ಸಂವಾದವೇ ಕಷ್ಟಸಾಧ್ಯ ಎನ್ನುವಂತೆ ಆಗಿರುವ ಇಂದಿನ ದಿನಗಳಲ್ಲಿ ರಂಗಭೂಮಿಯ ಪ್ರಸ್ತುತತೆ ಮತ್ತಷ್ಟು ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ರಂಗನಟ, ನಿರ್ದೇಶಕ ಪರಶುರಾಮ ಸೂರನಗದ್ದೆ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಸಾಮಾಜಿಕ ಕಾರ್ಯಕರ್ತರಾದ ಶಿವಾನಂದ ಕುಗ್ವೆ, ಎನ್.ಡಿ. ವಸಂತ್ ಕುಮಾರ್, ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್ ಇದ್ದರು.

ನಾಗೇಂದ್ರ ಕುಮಟ ಮತ್ತು ಸಂಗಡಿಗರು ರಂಗಗೀತೆ ಹಾಡಿದರು. ನಂತರ ಸ್ಪಂದನ ತಂಡದಿಂದ ಪಿ.ಲಂಕೇಶ್ ಅವರ ಕಥೆ ಆಧರಿಸಿದ ‘ಮುಟ್ಟಿಸಿಕೊಂಡವನು’ (ರಂಗರೂಪ, ನಿರ್ದೇಶನ: ಎಂ.ವಿ.ಪ್ರತಿಭಾ) ಕಿರು ನಾಟಕ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.