ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಮರು ಮೌಲ್ಯಮಾಪನದ ನಂತರ ಮೊದಲು ಪಡೆದಿದ್ದ ಅಂಕಗಳಿಗಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಮೊದಲ ಸೆಮಿಸ್ಟರ್‌ನ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಸರಿಯಾಗಿ ಆಗದ್ದರಿಂದ ಕಡಿಮೆ ಅಂಕ ಬಂದಿದ್ದು, ಯುಜಿಸಿ ಅರ್ಹತಾ ಪರೀಕ್ಷೆ ಬರೆಯಲು ಅಗತ್ಯವಿರುವ
ಶೇ 55ರಷ್ಟು ಅಂಕಗಳು ನಮಗೆ ಬಂದಿಲ್ಲ. ಇದರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಪರೀಕ್ಷೆ ಬರೆದಿದ್ದ 24 ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಒತ್ತಾಯಿಸಿದ್ದರು.
ವಿದ್ಯಾರ್ಥಿಗಳ ಅಹವಾಲಿಗೆ ಸ್ಪಂದಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಆಡಳಿತ, ಮರು ಮೌಲ್ಯಮಾಪನಕ್ಕೆ ಆದೇಶಿಸಿತ್ತು. ಅಚ್ಚರಿಯೆಂದರೆ ಎಲ್ಲಾ ವಿದ್ಯಾರ್ಥಿಗಳಿಗೂ ಈಗ ಹೆಚ್ಚು ಅಂಕ ಲಭಿಸಿವೆ. ಎಲ್ಲರೂ ಶೇ 55ರ ಅರ್ಹತಾ ಗಡಿ ದಾಟಿದ್ದಾರೆ. ಈ ಮೊದಲು ಶೇ 59 ಅಂಕ ಪಡೆದಿದ್ದ ವಿದ್ಯಾರ್ಥಿನಿ ಸೌಂದರ್ಯಾ ಈಗ ಶೇ 65 ಅಂಕ ಗಳಿಸಿ ತರಗತಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಶೇ 59 ಅಂಕ ಪಡೆದಿದ್ದ ಬಿಂದು ಹಾಗೂ ಕೀರ್ತನಾ ಈಗ ಕ್ರಮವಾಗಿ ಶೇ 64 ಹಾಗೂ ಶೇ 63ರಷ್ಟು ಅಂಕ
ಪಡೆದಿದ್ದಾರೆ.
ರಾಜ್ಯಶಾಸ್ತ್ರ ವಿಭಾಗದ 3ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದ ನಾಲ್ವರು ವಿದ್ಯಾರ್ಥಿಗಳು, ಮರು ಮೌಲ್ಯಮಾಪನದ ನಂತರ ತಮ್ಮ ಸಾಮರ್ಥ್ಯ ಹಿಗ್ಗಿಸಿಕೊಂಡಿದ್ದಾರೆ. ಈ ಮೊದಲ ಶೇ 59ರಷ್ಟು ಅಂಕ ಪಡೆದಿದ್ದ ಸಂಗೀತಾ ಈಗ ಶೇ 64 ಅಂಕ ಪಡೆದಿದ್ದಾರೆ.
ಎಲ್ಲರೂ ತೇರ್ಗಡೆ: ಪಿಎಚ್.ಡಿ ಕೋರ್ಸ್ ವರ್ಕ್‌ನಲ್ಲಿ ಅನುತ್ತೀರ್ಣರಾಗಿದ್ದ ಎಲ್ಲಾ ಐವರು ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ನಂತರ ತೇರ್ಗಡೆಯಾಗಿದ್ದಾರೆ. ಸ್ನಾತಕೋತ್ತರ ವಿಷಯದಲ್ಲಿ ಚಿನ್ನದ ಪದಕ ಪಡೆದು, ರಾಷ್ಟ್ರೀಯ ಮಟ್ಟದಲ್ಲಿ ಸ್ಕಾಲರ್‌ಶಿಪ್ ಪಡೆಯುತ್ತಿದ್ದ ಅಂಧ ವಿದ್ಯಾರ್ಥಿನಿಯೊಬ್ಬರು ಕೋರ್ಸ್ ವರ್ಕ್‌ನಲ್ಲಿ ಫೇಲ್ ಆಗಿದ್ದರು. ಈಗ ಪಾಸ್ ಆಗಿದ್ದಾರೆ. ಪದವಿಯಲ್ಲಿ ಹೆಚ್ಚು ಅಂಕ ಪಡೆದವರು, ಚೆನ್ನಾಗಿ ಓದುವ ವಿದ್ಯಾರ್ಥಿಗಳು ಮೊದಲಿಗೆ ಕಡಿಮೆ ಅಂಕ ಪಡೆದಿದ್ದರು.
ವಿಶೇಷ ಪ್ರಕರಣ: ‘ನಿಯಮಾನುಸಾರ ಅವಕಾಶ ವಿರದಿದ್ದರೂ ವಿದ್ಯಾರ್ಥಿಗಳ ಮನವಿ ಮೇರೆಗೆ, ವಿಶೇಷ ಪ್ರಕರಣ ಎಂದು ಪರಿಗಣಿಸಿ ವಿಶ್ವವಿದ್ಯಾಲಯದ ಆಡಳಿತ ಮರುಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಟ್ಟಿತ್ತು’ ಎಂದು ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸತ್ಯನಾರಾಯಣ
ಹೇಳುತ್ತಾರೆ.
‘ಉದ್ದೇಶಪೂರ್ವಕವಾಗಿ ಅನ್ಯಾಯ?’
‘ಸಹ್ಯಾದ್ರಿ ಕಾಲೇಜಿನ ಪಿ.ಜಿ ಸೆಂಟರ್‌ನ ರಾಜ್ಯಶಾಸ್ತ್ರ ವಿಭಾಗದಲ್ಲಿ ಓದಿದರೆ ಹೆಚ್ಚು ಅಂಕ ಪಡೆಯಲು ಆಗುವುದಿಲ್ಲ. ಬದಲಿಗೆ, ವಿಶ್ವವಿದ್ಯಾಲಯದ ನೆಲೆ ಶಂಕರಘಟ್ಟದಲ್ಲಿ ಓದಿದವರು ಮಾತ್ರ ಹೆಚ್ಚು ಅಂಕಗಳ ಪಡೆಯಲು ಸಾಧ್ಯವಾಗುತ್ತದೆ ಎಂದು ಬಿಂಬಿಸಲು ಹೀಗೆ ಉದ್ದೇಶಪೂರ್ವಕವಾಗಿ ನಮ್ಮ ಅಂಕಗಳಿಗೆ ಕತ್ತರಿ ಹಾಕಲಾಗಿದೆ’ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ‘ ಎದುರು ಗುರುವಾರ ಅಳಲು ತೋಡಿಕೊಂಡರು.
’ಬೇಕಾಬಿಟ್ಟಿ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಮೌಲ್ಯಮಾಪಕರ ವಿರುದ್ಧ ವಿ.ವಿ ಆಡಳಿತ ಕ್ರಮಕ್ಕೆ ಮುಂದಾಗಲಿ’ ಎಂದು ಆಗ್ರಹಿಸಿದರು.
......
ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವೆ. ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಮಾಡಲು ತನಿಖೆ ಆರಂಭಿಸಿದ್ದೇವೆ. ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು
-ಪ್ರೊ.ವೀರಭದ್ರಪ್ಪ, ಕುಲಪತಿ, ಕುವೆಂಪು ವಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.