ಸೊರಬ: ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಉತ್ತಮ ಮಳೆ ಆಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳು ನಡೆಸಲು ಅನುಕೂಲವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲ್ಲೂಕಿನ ವರದಾ ನದಿ ಪ್ರವಾಹದಿಂದ ಉಂಟಾಗಿರುವ ನೆರೆ ಪೀಡಿತ ಪ್ರದೇಶಗಳಾದ ಹೊಳೆ ಜೋಳದಗುಡ್ಡೆ, ಕಡಸೂರು, ಬಾಡದಬೈಲು, ತಟ್ಟಿಕೆರೆ, ಶುಂಠಿಕೊಪ್ಪ ಗ್ರಾಮಗಳಲ್ಲಿ ಕೃಷಿ ಜಮೀನು ಮುಳುಗಡೆ ಪ್ರದೇಶಗಳನ್ನು ಗುರುವಾರ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 70,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಈಗಾಗಲೇ ಸೊರಬದಲ್ಲಿ 6,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಶೇ 80ರಷ್ಟು ಜೋಳ ಬಿತ್ತನೆ ಆಗಿದೆ. ರೈತರಿಗೆ ಬೆಳೆ ಬೆಳೆಯಲು ಅವಶ್ಯಕವಾಗಿರುವ ಬೀಜ, ಗೊಬ್ಬರ ಔಷಧಿಗಳಿಗೆ ಕೊರತೆ ಆಗದಂತೆ ಪೂರೈಕೆ ಮಾಡಲಾಗಿದೆ ಎಂದರು.
ತೋಟಗಾರಿಕಾ ಬೆಳೆ ವಿಮೆ ತುಂಬಲು ಜುಲೈ ತಿಂಗಳವರೆಗೆ ಅವಕಾಶ ನೀಡಿದೆ. ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘಗಳಲ್ಲಿ ಈ ಬಗ್ಗೆ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಬಿರುಸುಗೊಂಡ ಮಳೆಗೆ 21 ಮನೆಗಳು ಹಾನಿಗೀಡಾಗಿದ್ದು, 3 ಜಾನುವಾರುಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ. ಸರ್ಕಾರದಿಂದ ದೊರೆಯುವ ಪರಿಹಾರ ಮೊತ್ತವನ್ನು ನಿಗದಿತ ಸಮಯಕ್ಕೆ ಫಲಾನುಭವಿಗಳಿಗೆ ಸಿಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಅಧಿಕ ಮಳೆಯಿಂದ ಸೊರಬ, ಶಿರಾಳಕೊಪ್ಪ, ತವನಂದಿ, ಹೊಸೂರು, ಇಂಡುವಳ್ಳಿ ಮೂಲಕ ಶಿರಾಳಕೊಪ್ಪ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಳೆ ಆರಂಭಕ್ಕೂ ಮುನ್ನ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದರೆ ವಾಹನ ಸವಾರರು ಅನುಭವಿಸುವ ಕಿರಿಕಿರಿ ತಪ್ಪಿಸಬಹುದಿತ್ತು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗುವಂತೆ ತಿಳಿಸಿದರು.
ಪ್ರತಿ ವರ್ಷ ವರದಾ ನದಿ ಪ್ರವಾಹದಿಂದ ಹತ್ತಾರು ಗ್ರಾಮಗಳ ಕೃಷಿ ಜಮೀನು ಮುಳುಗಡೆ ಹೊಂದಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ನದಿಗೆ ಹೊಂದಿಕೊಂಡಂತೆ ನಾಲೆಯನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಹ ತಡೆಗಟ್ಟುಬಹುದು. ಜೊತೆಗೆ ಬೇಸಿಗೆಯಲ್ಲಿ ಈ ಭಾಗದ ರೈತರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸಲಾಗಿದ್ದು, ಸರ್ಕಾರ ಅದರ ಜಾರಿಗೆ ಮುಂದಾಗಬೇಕು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಒತ್ತಾಯಿಸಿದರು.
ತಹಶೀಲ್ದಾರ್ ಮಂಜುಳಾ ಹೆಗಡಾಳ್, ಕೃಷಿ ಅಧಿಕಾರಿ ಕೆ.ಜಿ.ಕುಮಾರ್, ಸಾಗರ ಉಪ ಕೃಷಿ ನಿರ್ದೇಶಕ ಬಸವರಾಜ್, ಶಿರಸ್ತೇದಾರ್ ನಾಗರಾಜ್, ಎಂಜನಿಯರ್ ಗಳಾದ ಗಣಪತಿ ನಾಯ್ಕ್, ಸೌಮ್ಯಾ, ಮುಖಂಡರಾದ ಶಿವಕುಮಾರ್ ಕಡಸೂರು, ಪ್ರಕಾಶ್, ಗುರುಕುಮಾರ್ ಪಾಟೀಲ್, ಎಂ.ಡಿ.ಉಮೇಶ್, ರಾಜು ಮಾವಿನಬಳ್ಳಿಕೊಪ್ಪ ಗಣಪತಿ ಟಿಜಿಕೊಪ್ಪ, ಸಂದೀಪ್, ಜಾನಕಪ್ಪ, ಮಲ್ಲಿಕಾರ್ಜುನ ವೃತ್ತಿಕೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.