ADVERTISEMENT

ಒಂದು ಸಂಸ್ಕತಿಯನ್ನು ಮುಳುಗಿಸಿದ ’ಮುಳುಗಡೆ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 13:56 IST
Last Updated 31 ಜನವರಿ 2024, 13:56 IST
ಹೊಸನಗರ ತಾಲ್ಲೂಕು ಮೇಲುಸುಂಕದಲ್ಲಿ ನಡೆದ ಎಂ.ಎಂ.ಪ್ರಭಾಕರ ಕಾರಂತರ ‘ಮುಳುಗಡೆ ಒಡಲಾಳ’ ಪುಸ್ತಕ ಬಿಡುಗಡೆ ಸಮಾರಂಭವನ್ನು ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು
ಹೊಸನಗರ ತಾಲ್ಲೂಕು ಮೇಲುಸುಂಕದಲ್ಲಿ ನಡೆದ ಎಂ.ಎಂ.ಪ್ರಭಾಕರ ಕಾರಂತರ ‘ಮುಳುಗಡೆ ಒಡಲಾಳ’ ಪುಸ್ತಕ ಬಿಡುಗಡೆ ಸಮಾರಂಭವನ್ನು ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು   

ಹೊಸನಗರ: ‘ಮುಳುಗಡೆ ಎಂಬುದು ಕೇವಲ ತೋಟ, ಮನೆ ಮುಳುಗಿಸಿಲ್ಲ. ಇದು ಇಲ್ಲಿನ ಸಂಸ್ಕೃತಿ, ಜನಪದ, ನಂಬಿದ ದೇವರು, ದೈವ ಹಾಗೂ ಸಂಬಂಧಗಳನ್ನು ಮುಳುಗಿಸಿ ಅನಾಥ ಭಾವ ಮೂಡಿಸಿದೆ’ ಎಂದು ಸಾಹಿತಿ ಗಜಾನನ ಶರ್ಮಾ ವಿಷಾದಿಸಿದರು.

ತಾಲ್ಲೂಕಿನ ವಾರಾಹಿ ಹಿನ್ನೀರು ಪ್ರದೇಶದ ಮೇಲುಸುಂಕ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸಾಹಿತಿ, ಪತ್ರಕರ್ತ ಎಂ.ಎಂ.ಪ್ರಬಾಕರ ಕಾರಂತ ಅವರ ವಾರಾಹಿ ಸಂತ್ರಸ್ತರ ಬದುಕು, ಬವಣೆ ಕುರಿತ ‘ಮುಳುಗಡೆ ಒಡಲಾಳ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯಕ್ಕೆ 70ರ ದಶಕದಲ್ಲಿ ಜಲವಿದ್ಯುತ್ ಅನಿವಾರ್ಯವಾಗಿತ್ತು. ಆದರೆ ಯೋಜನೆಯ ಜಾರಿಯಲ್ಲಿ ಸಂತ್ರಸ್ತರನ್ನು ಸರ್ಕಾರ ಹಾಗೂ ಅಧಿಕಾರಿ ವರ್ಗ ನೋಡಿಕೊಂಡ ರೀತಿ ಸರಿ ಇಲ್ಲ. ಭೌತಿಕವಾಗಿ ಕನಿಷ್ಟ ಪರಿಹಾರ ನೀಡಿದ್ದನ್ನು ಹೊರತುಪಡಿಸಿದರೆ, ಅವರ ಜನ-ಜೀವನದ ಬಗ್ಗೆ ಕಾಳಜಿ ವಹಿಸಿಲ್ಲ’ ಎಂದು ದೂರಿದರು.

ADVERTISEMENT

ವಾರಾಹಿ ನೀರಿನ ಮುಳುಗಡೆ ಸಂತ್ರಸ್ತರ ಸಾಮಾಜಿಕ, ಜಾನಪದ, ನೋವು, ನಲಿವು ಕುರಿತಂತೆ ಕೃತಿ ಹೆಚ್ಚು ಬೆಳಕು ಚೆಲ್ಲಿದೆ. ಇದೊಂದು ದಾಖಲೆ ಹಾಗೂ ಉಲ್ಲೇಖನೀಯ ಕೃತಿ ಆಗಿದೆ ಎಂದರು.

‘ಇಂದಿನ ತಲೆಮಾರಿಗೆ ನಿಸರ್ಗದ ಜ್ಞಾನ ಇಲ್ಲದಂತಾಗಿದೆ. ನಿಸರ್ಗ ಶಿಕ್ಷಣವನ್ನು ಕೇವಲ ಪುಸ್ತಕಕ್ಕೆ ಮೀಸಲಿಡಬಾರದು. ನಿಸರ್ಗದಲ್ಲಿರುವ ಕಾಡು, ತೊರೆ, ಪ್ರಾಣಿ, ಪಕ್ಷಿ ಗುರುತಿಸುವಿಕೆಯ ಮೂಲಕ ರಕ್ಷಣೆಯ ಕೆಲಸ ಆಗಬೇಕು’ ಎಂದು ಸಾಹಿತಿ ಶಿವಾನಂದ ಕಳವೆ ಆಶಿಸಿದರು.

ಮುಳುಗಡೆಯ ಕಾರಣ ಮನುಷ್ಯ ಸಂಬಂಧಗಳು ದೂರ ಆಗಿದೆ. ಹಳ್ಳಿಯಲ್ಲಿ ಒಟ್ಟಾಗಿದ್ದ ಕೂಡು ಕುಟುಂಬ ಈಗ ಇಲ್ಲದಂತೆ ಆಗಿದೆ ಎಂದು ಸಾಹಿತಿ, ಪತ್ರಕರ್ತ ಶರತ್ ಕಲ್ಕೋಡ್ ವಿಷಾದಿಸಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮ ಉದ್ಘಾಟಿಸಿದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕ ಎಂ.ಎಂ.ಪ್ರಭಾಕರ್ ಕಾರಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಪತ್ರಕರ್ತ ಗಿರಿಜಾ ಶಂಕರ್, ಸಾಹಿತಿ ರೂಪಕಲಾ, ಅಂಕಣಕಾರ್ತಿ ಪೂರ್ಣಿಮಾ ನರಸಿಂಹ, ಹಿರಿಯ ಪತ್ರಕರ್ತರಾದ ಜಯರಾಮ ಅಡಿಗ, ಮುರಳೀಕೃಷ್ಣ ಮಡ್ಡಿಕೇರಿ, ಸಾಹಿತಿಗಳಾದ ಜಯಪ್ರಕಾಶ್ ಮಾವಿನಕುಳಿ, ತಿರುಪತಿ ನಾಯಕ್, ಮಂಜುಳಾ ಹುಲ್ಲಹಳ್ಳಿ, ಜಿ.ವಿ.ಗಣೇಶಯ್ಯ ಹಾಗೂ ಕಿಶೋರ್ ಶೀರ್ನಾಳಿ ಇದ್ದರು.

ಚಿತ್ರನಟಿ ನಾಗಶ್ರೀ ಬೇಗಾರ್ ಅವರನ್ನು ಸನ್ಮಾನಿಸಲಾಯಿತು. ಸುಜಾತ ರಾವ್ ಪ್ರಾರ್ಥಿಸಿದರು. ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು. ಚಿತ್ರ ನಿರ್ದೇಶಕ ರಮೇಶ ಬೇಗಾರ್ ನಿರೂಪಿಸಿದರು. ತಾರಾ ನಾಗರಾಜ್ ವಂದಿಸಿದರು.

ಹೊಸನಗರ ತಾಲ್ಲೂಕು ಮೇಲುಸುಂಕದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಎಂ.ಎಂ.ಪ್ರಭಾಕರ ಕಾರಂತರ ‘ಮುಳುಗಡೆ ಒಡಲಾಳ’ ಪುಸ್ತಕವನ್ನು ನೀಲಾವರ ಸುರೇಂದ್ರ ಅಡಿಗ ಬಿಡುಗಡೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.