ತೀರ್ಥಹಳ್ಳಿ: ಸಂಸ್ಕಾರದ ಶಿಕ್ಷಣದಿಂದ ಸಾಮಾಜಿಕ ಬದಲಾವಣೆ ಸಾಧ್ಯ. ನಾರಾಯಣಗುರುಗಳು ಶತಮಾನದ ಹಿಂದೆ ಸಾರಿದ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇದರಿಂದ ಸಮಾಜದಲ್ಲಿ ಶೈಕ್ಷಣಿಕ ಬದಲಾವಣೆ ಸಾಧ್ಯ ಎಂದು ಧರ್ಮಸ್ಥಳ ಶ್ರೀರಾಮಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ನಾರಾಯಣಗುರು ವಿಚಾರ ವೇದಿಕೆ ಭಾನುವಾರ ಆಯೋಜಿಸಿದ್ದ ಈಡಿಗ ಸಮುದಾಯದ 26 ಉಪಜಾತಿಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಾತ್ಮದ ಬಲದಿಂದ ಸಂಘಟನೆಗೆ ಭದ್ರ ಬುನಾದಿ ಹಾಕಬಹುದು. ಸಂಸ್ಕಾರದ ಸಂಪಾದನೆಯಿಂದ ಸಮುದಾಯ ಸಂಘಟನೆ ಬಲಗೊಳ್ಳಬೇಕು. ಧರ್ಮದ ಅಂತರಾಳದೊಳಗೆ ನಿಜವಾದ ಸುಖ, ಶಾಂತಿ, ನೆಮ್ಮದಿ ಇದೆ. ಗುರುಗಳ ಸಂದೇಶದೊಂದಿಗೆ ಸಂಘಟನೆ ಬಲಗೊಳ್ಳಲಿ. ಯಾವುದೇ ಜಾತಿಯ ವಿರುದ್ದದ ಸಂಘಟನೆ ಆಗಬಾರದು ಎಂದು ಕಿವಿಮಾತು ಹೇಳಿದರು.
ಶಾಸಕ, ನಾರಾಯಣಗುರು ವಿಚಾರ ವೇದಿಕೆಯ ಗೌರವಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ‘ರಾಜ್ಯದಲ್ಲಿನ 3ನೇ ಅತಿದೊಡ್ಡ ಜನಾಂಗವಾದರೂ ಸಮುದಾಯದ ಸಂಘಟನೆ ಇಲ್ಲವಾಗಿದೆ. ಗಂಗಾವತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಪೀಠ ಆರಂಭಿಸಲು ಹಾಗೂ ನಾರಾಯಣಗುರು ಪೀಠ ಸ್ಥಾಪಿಸಲು ಮನವಿ ಮಾಡಲಾಗಿದೆ. ಶಾಲೆಗಳಲ್ಲಿ ನಾರಾಯಣಗುರು ಜಯಂತಿ ಆಚರಣೆಯನ್ನು ಕಡ್ಡಾಯಗೊಳಿಸಬೇಕು’ ಎಂದು ಆಗ್ರಹಿಸಿದರು.
ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಕರ್ನಾಟಕ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ನಾರಾಯಣಗುರು ವಿಚಾರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ ಮಾತನಾಡಿದರು.
ತಾಲ್ಲೂಕು ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ವಿಶಾಲ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ರಾಜ್ಯ ಆರ್ಯ ಈಡಿಗ ಸಂಘದ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಉದ್ಯಮಿ ಡಾ. ಗೋವಿಂದಬಾಬು ಪೂಜಾರಿ, ಚಿತ್ರ ಸಾಹಿತಿ ಕವಿರಾಜ್, ನಾರಾಯಣಗುರು ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಇದರೆಗೋಡು, ತೀರ್ಥಹಳ್ಳಿ ಆರ್ಯ ಈಡಿಗರ ಸಂಘದ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರ ಇದ್ದರು. ಹೊದಲ ಶಿವು ಸ್ವಾಗತಿಸಿದರು. ಲತಾ ರಾಜ್‌ಕುಮಾರ್ ನಿರೂಪಿಸಿದರು.
ಇಂಥವರೇ ಮುಖ್ಯಮಂತ್ರಿ, ಮಂತ್ರಿ ಆಗಬೇಕು ಎಂದು ಸ್ವಾಮೀಜಿಗಳು ಹೇಳಬಾರದು. ಸ್ವಾಮೀಜಿಗಳು ಪ್ರಜಾ ಪ್ರತಿನಿಧಿಯಲ್ಲ. ಸತ್ಸಂಗ, ಆಶೀರ್ವಚನ ನೀಡುವುದು ಸ್ವಾಮೀಜಿಗಳ ಕೆಲಸ.
ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ಶ್ರೀರಾಮಕ್ಷೇತ್ರ, ಧರ್ಮಸ್ಥಳ
ಈಡಿಗ ಸಂಘದಿಂದ ಪ್ರತಿ ತಾಲ್ಲೂಕಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲು ಉದ್ದೇಶಿಸಲಾಗಿದೆ. ಸರ್ಕಾರ ಅದಕ್ಕೆ ಜಾಗ ನೀಡಬೇಕು. ಈಡಿಗ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಒಟ್ಟುಗೂಡಿಸಲಾಗುತ್ತದೆ.
ಡಾ.ಎಂ. ತಿಮ್ಮೇಗೌಡ, ಅಧ್ಯಕ್ಷ, ಕರ್ನಾಟಕ ಆರ್ಯ ಈಡಿಗ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.