ತುಮರಿ: ‘ಜಾಗೃತ ಸಮುದಾಯದಿಂದ ದೂರ ಉಳಿದು ಒರಟು ವಿಚಾರ ವಾದದಿಂದ ಧರ್ಮವನ್ನು ವಿಶ್ಲೇಷಣೆ ಮಾಡುವುದರಿಂದ ಸಮಾಜದ ಮೂಲ ಬದಲಾವಣೆ ಸಾಧ್ಯವಿಲ್ಲ ಎಂಬುದು ನಾರಾಯಣ ಗುರುಗಳ ಆದರ್ಶವಾಗಿದ್ದು ಇಂದಿಗೂ ಪ್ರಸ್ತುತವಾಗಿದೆ’ ಎಂದು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು.
ತುಮರಿ ಸಮೀಪದ ಸಿಗಂದೂರು ದೇವಸ್ಥಾನದಲ್ಲಿ ಹಳೆಪೈಕ ದೀವರ ಸಾಂಸ್ಕೃತಿಕ ವೇದಿಕೆ ಮತ್ತು ಚೌಡಮ್ಮ ದೇವಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ನಾರಾಯಣಗುರು ವಿಚಾರ ಕಮ್ಮಟದಲ್ಲಿ ಮಾತನಾಡಿದರು.
‘ಜಾತ್ಯತೀತ ಭಾವದಿಂದ ಬದುಕು ವುದೆಂದರೆ ಧರ್ಮವನ್ನು ವಿರೋಧಿಸುವುದಲ್ಲ. ಧರ್ಮದಿಂದ ದೂರ ಉಳಿಯುವುದೆಂದರೆ ನಮ್ಮ ಸುತ್ತ ಧರ್ಮದ ಹೆಸರಿನಲ್ಲಿ ನಡೆಯುವ ಬಹುಮುಖಿ ಶೋಷಣೆಯನ್ನು ಖಂಡಿಸುವುದು’ ಎಂದು ಹೇಳಿದರು.
‘ನಾರಾಯಣ ಗುರುಗಳು ಸಾಂಸ್ಕೃತಿಕ ಜೀವನದ ಜೊತೆಗೆ ಸಮಾಜದ ರಚನೆಯನ್ನು ಧರ್ಮದ ಜೊತೆಗೆ ಇರುವ ಸಂಬಂಧವನ್ನು ನಿರಾಕರಿಸದೇ ಪರ್ಯಾಯ ದೇವರನ್ನು ಹುಟ್ಟು ಹಾಕುವ ಮೂಲಕ ಸಮಾನತೆ ತತ್ವಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದ್ದರು. ಕೇವಲ ದೇವರೊಂದೇ ಸಾಲದು ಶಿಕ್ಷಣದ ಅರಿವು, ವಿವೇಕ ಅಗತ್ಯ ಎಂಬುದನ್ನು ಮನಗೊಂಡು ದೇವಸ್ಥಾನವನ್ನು ಕಟ್ಟುವುದರ ಜೊತೆಜೊತೆಗೆ ಶೈಕ್ಷಣಿಕ ಸಂಸ್ಥೆಗಳನ್ನ ಕಟ್ಟುವ ಚಳವಳಿಯನ್ನ ಮುಂದುವರಿಸಿದರು. ಆ ಮೂಲಕ ಶಿಕ್ಷಣದಿಂದ ಮಾತ್ರ ಬೌದ್ಧಿಕ ದಿವಾಳಿತನವನ್ನು ಹೋಗಲಾಡಿಸಲು ಸಾಧ್ಯ ಎಂದು ಸ್ಪಷ್ಟವಾಗಿ ಸಾರಿದ್ದರು’ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಗಂದೂರಿನ ಧರ್ಮಾಧಿಕಾರಿ ಎಸ್.ರಾಮಪ್ಪ, ‘ಆಧುನಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ದುರುಪಯೋಗಗಳು ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನು ಧರ್ಮ ಧರ್ಮಗಳ ನಡುವೆ ಅಸಹನೆ ಸೃಷ್ಟಿಸುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಂತಹ ಕಮ್ಮಟಗಳು ಪರ್ಯಾಯ ಚಿಂತನೆ ಯನ್ನು ಸಮಾಜದಲ್ಲಿ ಮೂಡಿಸಲಿ’ ಎಂದರು.
ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ, ಪತ್ರಕರ್ತ ನಾಗರಾಜ ನೇರಿಗೆ ಹಾಜರಿದ್ದರು. ಶಿಕ್ಷಕಿ ಅನ್ನಪೂರ್ಣ ಸ್ವಾಗತಿಸಿದರು. ನವೀನ್ ಮಂಡಗದ್ದೆ ನಿರೂಪಿಸಿದರು. ಶಿಕ್ಷಕ ರವಿರಾಜ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.