ADVERTISEMENT

‘ಕಂಪನಿ ನಾಟಕ, ಗುಣಮಟ್ಟದತ್ತ ಚಿತ್ತ’

-

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:55 IST
Last Updated 22 ಅಕ್ಟೋಬರ್ 2024, 15:55 IST
ಶಿವಮೊಗ್ಗದ ಬಸವಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ಅವರನ್ನು ಬಸವ ಮರುಳಸಿದ್ಧ ಸ್ವಾಮೀಜಿ ಸನ್ಮಾನಿಸಿದರು
ಶಿವಮೊಗ್ಗದ ಬಸವಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ಅವರನ್ನು ಬಸವ ಮರುಳಸಿದ್ಧ ಸ್ವಾಮೀಜಿ ಸನ್ಮಾನಿಸಿದರು   

ಶಿವಮೊಗ್ಗ: ಮನರಂಜನೆ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಉತ್ತಮ ಅಭಿರುಚಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ಹೇಳಿದರು.

ಇಲ್ಲಿನ ಬಸವಕೇಂದ್ರದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಸಿನಿಮಾ, ಟಿವಿ ಮಾಧ್ಯಮಗಳ ಜೊತೆಗೆ ಇಂದು ಮೊಬೈಲ್ ವಿರುದ್ಧವೂ ಕಂಪನಿ ನಾಟಕಗಳು ಸೆಣೆಸಬೇಕಾಗಿದೆ’ ಎಂದು ಹೇಳಿದರು.

‘ದ್ವಂದ್ವಾರ್ಥ ಸಂಭಾಷಣೆಗಳಿಂದ ಒಂದು ವರ್ಗದ ಪ್ರೇಕ್ಷಕರನ್ನು ಸೆಳೆದಿದ್ದ ಕಂಪನಿ ನಾಟಕಗಳು ಇದೇ ಸಂದರ್ಭದಲ್ಲಿ ಸದಭಿರುಚಿಯ ದೊಡ್ಡ ಪ್ರೇಕ್ಷಕ ವರ್ಗವನ್ನು ಕಳೆದುಕೊಂಡಿದೆ. ಇದನ್ನು ಅರ್ಥ ಮಾಡಿಕೊಂಡ ಕೆಲ ಕಂಪನಿಗಳು ಮರಳಿ ಉತ್ತಮ ಗುಣಮಟ್ಟದ ನಾಟಕಗಳ ಪ್ರದರ್ಶಿಸುವ ಕೆಲಸ ಮಾಡುತ್ತಿವೆ’ ಎಂದರು. 

ADVERTISEMENT

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ‘ಅಸಭ್ಯ, ಅನೈತಿಕ, ಅನಾರೋಗ್ಯಕರ ವ್ಯಕ್ತಿತ್ವಗಳೇ ಇಂದಿನ ಯುವ ಜನರಿಗೆ ಮಾದರಿ ಆಗುತ್ತಿರುವುದು ದುರಂತ’ ಎಂದು ಬೇಸರಿಸಿದರು.

ಕೀಳು ಅಭಿರುಚಿ ಬೆಳೆಸುವುದೇ ಆದರ್ಶ ಎಂದು ಸಿನಿಮಾ-ಟಿವಿಗಳಲ್ಲಿ ತೋರಿಸಲಾಗುತ್ತಿದೆ. ಇಂಥ ಪರಿಸರದಲ್ಲಿ ಸ್ವಸ್ಥ ಸಮಾಜ ಕಟ್ಟುವ ಹೊಣೆ ಎಲ್ಲರ ಮೇಲಿದೆ ಎಂದರು.

ರಂಗಕರ್ಮಿ ಸಾಸ್ವೇಹಳ್ಳಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರ ಒಕ್ಕೂಟದ ಅಧ್ಯಕ್ಷ ಕಾಂತೇಶ ಕದರಮಂಡಲಗಿ, ಪತ್ರಕರ್ತ ಆರ್‌.ಎಸ್‌. ಹಾಲಸ್ವಾಮಿ ಹಾಗೂ ಬಸವಕೇಂದ್ರದ ಉಪಾಧ್ಯಕ್ಷ ಚಂದ್ರಪ್ಪ, ರಂಗಕರ್ಮಿ ಗಣೇಶ್ ಕೆಂಚನಾಲ, ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.