ADVERTISEMENT

ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಕಿರಿಕಿರಿ

ಸಂಘರ್ಷಕ್ಕೆ ಕಾರಣವಾದ ಸಿಂಥೆಟಿಕ್ ಟ್ರ್ಯಾಕ್‌ ಮೇಲೆ ನಿತ್ಯವೂ ನಾಗರಿಕರ ವಾಯುವಿಹಾರ

ಚಂದ್ರಹಾಸ ಹಿರೇಮಳಲಿ
Published 10 ಸೆಪ್ಟೆಂಬರ್ 2020, 2:32 IST
Last Updated 10 ಸೆಪ್ಟೆಂಬರ್ 2020, 2:32 IST
ಶಿವಮೊಗ್ಗದ ನೆಹರೂ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್
ಶಿವಮೊಗ್ಗದ ನೆಹರೂ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್   

ಶಿವಮೊಗ್ಗ: ಕ್ರೀಡಾಪ್ರಿಯರ ನೆಚ್ಚಿನ ತಾಣ ನೆಹರೂ ಕ್ರೀಡಾಂಗಣ ಈಗ ವಾಯುವಿಹಾರಿಗಳು,ಕ್ರೀಡಾಪಟುಗಳಸಂಘರ್ಷದ ತಾಣವಾಗಿ ಬದಲಾಗಿದೆ.

ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆಬೆಳಿಗ್ಗೆ ಮತ್ತು ಸಂಜೆ ಅಧಿಕ ಸಂಖ್ಯೆಯನಾಗರಿಕರು ವಾಯುವಿಹಾರ ಮಾಡುವ ಪರಿಣಾಮ ತಮ್ಮ ತರಬೇತಿಗೆ ಅಡಚಣೆಯಾಗುತ್ತಿದೆ ಎಂದು ಕ್ರೀಡಾಪಟುಗಳು ದೂರಿದರೆ, ಕೊರೊನಾದಂತಹ ಸಮಯದಲ್ಲಿ ವಾಯುವಿಹಾರಕ್ಕೆ ಸೂಕ್ತ ಸ್ಥಳಗಳೇ ಇಲ್ಲ. ಹಾಗಾಗಿ, ಕ್ರೀಡಾಂಗಣ ಬಳಕೆ ಅನಿವಾರ್ಯ ಎನ್ನುವುದು ವಾಯುವಿಹಾರಿಗಳ ವಾದ.

ಹಲವು ದಿನಗಳಿಂದ ಎರಡು ವರ್ಗಗಳ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದು, ಕೆಲವು ಬಾರಿ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ADVERTISEMENT

1977ರಲ್ಲಿ ನಿರ್ಮಿಸಿದ ಈ ಕ್ರೀಡಾಂಗಣ 43 ವರ್ಷಗಳಿಂದಲೂ ಜಿಲ್ಲೆಯ ಜನರ ಜೀವನದ ಒಂದು ಭಾಗವಾಗಿ ಮುಂದುವರಿದುಕೊಂಡು ಬರುತ್ತಿದೆ. ಮೂರು ದಶಕಗಳು ಈ ಕ್ರೀಡಾಂಗಣ ಕೇವಲ ಮಣ್ಣಿನ ಮೈದಾನವಾಗಿಯೇ ಇತ್ತು. 9 ವರ್ಷಗಳ ಹಿಂದೆ ಮೊದಲ ಬಾರಿಗೆ ಸಿಂಥೆಟಿಕ್‌ ಟ್ರ್ಯಾಕ್ ಹೊಂದಿತ್ತು. ಎರಡು ವರ್ಷಗಳ ಹಿಂದೆ ₹ 42 ಲಕ್ಷ ವೆಚ್ಚದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಈಗ ₹24.85 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ರೀಡಾಂಗಣವಾಗಿ ರೂಪುಗೊಳ್ಳುತ್ತಿದೆ. ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಪೂರ್ಣ
ಗೊಂಡರೆರಾಜ್ಯದಲ್ಲೇ ನಂಬರ್ 1 ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಶಿವಮೊಗ್ಗಕ್ಕೆ ‘ಸ್ಮಾರ್ಟ್‌ ಸಿಟಿ’ ಸ್ಥಾನ ದೊರೆತ ಮೇಲೆ ಕ್ರೀಡಾಂಗಣದ ಚಿತ್ರಣವೇ ಬದಲಾಗುತ್ತಿದೆ. ಆರಂಭದಲ್ಲಿ ರೂಪಿಸಿದ ಕ್ರಿಯಾ
ಯೋಜನೆಯಲ್ಲಿ ₹ 4.85ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದ ಸುತ್ತ ತಡೆಗೋಡೆ ನಿರ್ಮಾಣ, ರೂಫಿಂಗ್, ಸ್ಥಳಾಂತರಿಸಬಹುದಾದ ವಾಲಿಬಾಲ್ ಮೈದಾನ, ವಾಯುವಿಹಾರ ಮಾರ್ಗ ರೂಪಿಸುವ ಕೆಲಸ ಪ್ರಗತಿಯತ್ತ ಸಾಗಿದೆ.ಈ ಮಧ್ಯೆ ಸ್ಮಾರ್ಟ್ ‌ಸಿಟಿ ಯೋಜನೆಯಲ್ಲಿ ಮತ್ತೆ ₹ 20 ಕೋಟಿ ದೊರೆತಿದೆ.

ಸಾರ್ವಜನಿಕರ ಕಾಳಜಿಯ ಫಲ: ಒಂದು ಕಾಲದಲ್ಲಿ ಇಡೀ ನಗರದ ಕ್ರೀಡಾಚಟುವಟಿಕೆಗೆ ನೆಹರೂ ಕ್ರೀಡಾಂಗಣವೇ ಜೀವಾಳ. ಈ ಮೈದಾನವನ್ನು ಹಿಂದೆ ಕ್ರೀಡೆಯ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜಕೀಯ ಸಮಾವೇಶಗಳು, ಧರ್ಮಸಭೆಗಳು, ಆಹಾರ ಮೇಳಗಳು, ರಾಷ್ಟ್ರೀಯ ಹಬ್ಬಗಳು, ಜಯಂತಿ ಮಹೋತ್ಸವಗಳು, ಪೊಲೀಸ್ ಚಟುವಟಿಕೆಗೆ ನೀಡಲಾಗುತ್ತಿತ್ತು. ಹೀಗೆ ವಿಭಿನ್ನ ಚಟುವಟಿಕೆಗೆ ಅವಕಾಶ ನೀಡುತ್ತಾ ಕ್ರೀಡೆಯನ್ನೇ ಮೂಲೆ ಗುಂಪು ಮಾಡಲಾಗಿತ್ತು.ವಿವಿಧ ಸಂಘಟನೆಗಳು, ಕ್ರೀಡಾಪಟುಗಳ ನಿರಂತರ ಪ್ರತಿಭಟನೆಗಳಿಗೆ ಮಣಿದ ಅಂದಿನ ಜಿಲ್ಲಾಡಳಿತ ಕೊನೆಗೂ ಇತರೆ ಚಟುವಟಿಕೆಗೆ ಮೈದಾನ ಬಳಕೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.

‘ಜಿಲ್ಲೆಯ ಪ್ರಮುಖ ಕ್ರೀಡಾಂಗಣದಲ್ಲಿ ಮತ್ತೆ ಸಂಘರ್ಷ ಆರಂಭವಾಗಿವೆ. ಹೊಣೆಗಾರಿಕೆ ನಿಭಾಯಿಸಬೇಕಾದ ಕ್ರೀಡಾ ಇಲಾಖೆ ಅಧಿಕಾರಿಗಳು ನಿರ್ಲಿಪ್ತ ಮನೋಭಾವ ತೋರುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಕ್ರೀಡಾಂಗಣದ ಹೊರಗೆ ಸಾಕಷ್ಟು ಜಾಗವಿದೆ. ಅಲ್ಲಿ ನಾಗರಿಕರು ವಾಯು ವಿಹಾರ ಮಾಡಬಹುದು. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕ್ರೀಡಾಪಟು ಪ್ರವೀಣ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.