ತೀರ್ಥಹಳ್ಳಿ: ಲಾಕ್‌ಡೌನ್ ಕಾರಣ ಮನೆ ಸೇರಿದ ಮಲೆನಾಡಿನ ವಿದ್ಯಾರ್ಥಿಗಳು ಆನ್‌ಲೈನ್ ಪಾಠ ಕೇಳಲು ಮೊಬೈಲ್ ಹಿಡಿದು ಗುಡ್ಡ ಹತ್ತಬೇಕಾಗಿದೆ. ಮಳೆಗಾಲದಲ್ಲಿ ಛತ್ರಿಯೊಂದಿಗೆ ಮರದ ಕೆಳಗೆ ಸಿಗ್ನಲ್ ಇರುವಲ್ಲಿ ಮೊಬೈಲ್ ಹಿಡಿದು ಪಾಠ ಕೇಳುವ ಅನಿವಾರ್ಯಕ್ಕೆ ಒಳಗಾಗಿದ್ದಾರೆ.
ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆನ್‌ಲೈನ್ ಮೂಲಕ ತಮ್ಮ ಹಾಜರಾತಿ ದಾಖಲು ಮಾಡಲೂ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸಿಗ್ನಲ್ ಸಿಗುವಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಟೆಂಟ್ ನಿರ್ಮಿಸಿಕೊಂಡು ಒಂದೇ ಕಡೆಯಲ್ಲಿ ಪಾಠ ಕೇಳುವ ಪ್ರಯತ್ನ ನಡೆಸಿದ್ದಾರೆ. ಮನೆ ಬಿಟ್ಟು ಗುಡ್ಡ ಹತ್ತುವ ವಿದ್ಯಾರ್ಥಿಗಳು ಗುಡುಗು, ಸಿಡಿಲು, ಗಾಳಿಗೆ ಮರಗಳುಬೀಳುವ ಅಪಾಯವನ್ನೂ ಎದುರಿಸಬೇಕಿದೆ.
ಮಲೆನಾಡಿನಲ್ಲಿ ವಿದ್ಯುತ್ ಇಲ್ಲದ ವೇಳೆ ಮೊಬೈಲ್‌ಗಳ ಸಿಗ್ನಲ್ ಸಿಗುತ್ತಿಲ್ಲ. ಅಪಘಾತ, ಸಾವಿನ ಸುದ್ದಿಯನ್ನೂ ತಿಳಿಸಲು ಸಾಧ್ಯವಾಗುತ್ತಿಲ್ಲ. ತುರ್ತು ಸಂದರ್ಭದಲ್ಲಿ 108, ಪೊಲೀಸ್ ಠಾಣೆಯನ್ನೂ ಸಂಪರ್ಕ ಮಾಡಲು ಆಗುತ್ತಿಲ್ಲ. ಸಮರ್ಪಕ ಸೇವೆ ಒದಗಿಸದೇ ಇದ್ದರೆ ದೂರ ಸಂಪರ್ಕ ಸಂಸ್ಥೆ ಮುಚ್ಚಿ ತಲೆನೋವು ತಪ್ಪಿಸಿ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾ, ಮನೆ ಬಾಗಿಲಿಗೆ ಬ್ರಾಡ್ ಬ್ಯಾಂಡ್ ಸೇವೆ, ಉಚಿತ ಕರೆಗಳ ಸೌಲಭ್ಯದಿಂದ ಮಲೆನಾಡಿನ ನೂರಾರು ಹಳ್ಳಿಗಳು ದೂರ ಉಳಿದಿವೆ. ಸಮರ್ಪಕ ಸೇವೆ ಸಿಗದೆ ಈಗ ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ನಿಗಮದ (ಬಿಎಸ್‌ಎನ್‌ಎಲ್) ವಿರುದ್ಧ ಗ್ರಾಹಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹಳ್ಳಿಗಾಡಿನ ಪ್ರದೇಶದ ಬಿಎಸ್ಎನ್ಎಲ್ ಟವರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮಳೆಗಾಲದಲ್ಲಂತೂ ಇಲಾಖೆಗೆ ದೂರು ನೀಡಲೂ ಸಂಪರ್ಕ ಸಾಧ್ಯವಾಗುತ್ತಿಲ್ಲ. ದೂರವಾಣಿ ಸಂಪರ್ಕವನ್ನು ನೆಚ್ಚಿಕೊಂಡ ಗ್ರಾಹಕರು ಸ್ಥಿರ ಹಾಗೂ ಮೊಬೈಲ್ ಬಳಕೆಯನ್ನು ಸ್ಥಗಿತಗೊಳಿಸುವಂತಾಗಿದೆ.
ಮೊಬೈಲ್ ಟವರ್‌ಗಳ ತರಂಗಾಂತರ ಸಾಮರ್ಥ್ಯ ಕಡಿಮೆ ಇರುವುದರಿಂದಾಗಿ ಮೊಬೈಲ್ ಹಿಡಿದುಕೊಂಡ ಗ್ರಾಹಕರು ಟವರ್ ಇರುವಲ್ಲಿಗೆ ಹೋಗಬೇಕು. ಅಲ್ಲಿಯೂ ಸಿಗ್ನಲ್ ಸಿಗುತ್ತಿಲ್ಲ. ಮೊಬೈಲ್ ಸೌಲಭ್ಯ ಚಾಲ್ತಿಗೆ ಬಂದ ನಂತರ ಮಲೆನಾಡು ಭಾಗದ ಸ್ಥಿರ ದೂರವಾಣಿ ಸೇವೆಯನ್ನೂ ಬಿಎಸ್ಎನ್‌ಎಲ್ ಸಿಬ್ಬಂದಿ ಕಡೆಗಣಿಸಿದೆ ಎಂದು ಗ್ರಾಹಕರು ದೂರುತ್ತಾರೆ.
ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ 53 ಟವರ್‌ಗಳಿವೆ, 20 ದೂರವಾಣಿ ಕೇಂದ್ರಗಳಿವೆ. ಅಭಿವೃದ್ಧಿ ಕಾಮಗಾರಿಗಳಿಂದಾಗಿ ನೆಲದಲ್ಲಿ ಅಳವಡಿಸಲಾದ ಒಎಫ್‌ಸಿ ಕೇಬಲ್ ಗಳನ್ನು ಜೆಸಿಬಿ ಯಂತ್ರ ಕಿತ್ತು ಹಾಕುತ್ತಿರುವುದು ಅಡಚಣೆಯಾಗಿದೆ. ಕಿತ್ತು ಹಾಕಿರುವ ಕೇಬಲ್ ಜೋಡಿಸಿ ಗ್ರಾಹಕರಿಗೆ ಸೇವೆ ನೀಡುವಲ್ಲಿ ಇಲಾಖೆ ವಿಫಲವಾಗಿದೆ. ಇದರಿಂದಾಗಿ ಬಹುತೇಕ ಸ್ಥಿರ ದೂರವಾಣಿ ಸೌಲಭ್ಯ ಸ್ಥಗಿತಗೊಂಡಂತಾಗಿದೆ. ತಾಲ್ಲೂಕಿನ ಗ್ರಾಮಿಣ ಪ್ರದೇಶದ ಬಿಎಸ್‌ಎನ್‌ಎಲ್ ಟವರ್‌ಗಳಲ್ಲಿ ಸಿಗ್ನಲ್ ಸಿಗದ ಕಾರಣ ನೂರಾರು ಹಳ್ಳಿಗಳಲ್ಲಿ ಗ್ರಾಹಕರು ಸೌಲಭ್ಯ ವಂಚಿತರಾಗಿದ್ದಾರೆ.
‘ಮಳೆಗಾಲದಲ್ಲಿ ದೂರವಾಣಿ ಸಂಪರ್ಕ ಬಹುತೇಕ ಕಡಿದು ಹೋಗುತ್ತದೆ. ಸಿಗ್ನಲ್‌ಗಾಗಿ ಗುಡ್ಡ ಹತ್ತಬೇಕು. ಮಕ್ಕಳು ಆನ್‌ಲೈನ್ ಪಾಠ ಕೇಳಲು ಪರದಾಟ ನಡೆಸುವಂತಾಗಿದೆ. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೇಲಿನಕೊಪ್ಪ ಹರೀಶ್.
***
ದ್ವೀಪದಲ್ಲಿ ವಿದ್ಯುತ್ – ನೆಟ್‌ವರ್ಕ್ ಜುಗಲ್‌ಬಂದಿ
ಎಂ.ರಾಘವೇಂದ್ರ
ಸಾಗರ: ರಾಜ್ಯಕ್ಕೆ ಬೆಳಕು ನೀಡಲು ಜಲವಿದ್ಯುತ್ ಯೋಜನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿರುವವರು ತಾಲ್ಲೂಕಿನ ಕರೂರು–ಬಾರಂಗಿ ಹೋಬಳಿ ಗ್ರಾಮಸ್ಥರು. ಆದರೆ, ಈ ಗ್ರಾಮಗಳ ಜನರ ಸಮಸ್ಯೆಗಳಿಗೆ ಕೊನೆಯೇ ಇಲ್ಲವಾಗಿದೆ.
ಶರಾವತಿ ನದಿಯ ಹಿನ್ನೀರಿನಿಂದ ಆವೃತವಾಗಿರುವ ಇಲ್ಲಿನ ಗ್ರಾಮಗಳ ಜನರು ಅನೇಕ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆಯೆಂದರೆ ಮೊಬೈಲ್ ಫೋನ್ ನೆಟ್‌ವರ್ಕ್ ಸಮಸ್ಯೆ.
ಮೊಬೈಲ್ ನೆಟ್‌ವರ್ಕ್ ಈ ಭಾಗದಲ್ಲಿ ಸದಾ ಕೈ ಕೊಡುತ್ತಿರುವುದರಿಂದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಹಾಜರಾಗಲು ಹರಸಾಹಸ ಮಾಡಬೇಕಾಗಿದೆ. ನೆಟ್‌ವರ್ಕ್ ಹುಡುಕಿಕೊಂಡು ನಾಲ್ಕೈದು ಕಿ.ಮೀ. ದೂರ ಕ್ರಮಿಸಿ ಗುಡ್ಡ ಏರಿ ಅವರು ಆನ್‌ಲೈನ್ ತರಗತಿಗಳಿಗೆ ಹಾಜರಾಗಬೇಕಿದೆ.
ಕೆಲವು ದಿನಗಳಿಂದ ತಾಲ್ಲೂಕಿನಾದ್ಯಂತ ಗಾಳಿ ಸಮೇತ ಬಾರಿ ಮಳೆಯಾಗುತ್ತಿದೆ. ವಿದ್ಯಾರ್ಥಿಗಳು ರೈನ್‌ಕೋಟ್ ಧರಿಸಿ, ಛತ್ರಿ ಹಿಡಿದು, ಪ್ರತಿಕೂಲ ವಾತಾವರಣದ ಮಧ್ಯೆಯೇ ಮೊಬೈಲ್‌ನೊಂದಿಗೆ ಗುಡ್ಡ ಏರಬೇಕಾಗಿದೆ.
ಗುಡ್ಡದ ಪ್ರದೇಶಕ್ಕೆ ಬಾಲಕಿಯರನ್ನು ಕಳುಹಿಸಲು ಪೋಷಕರಿಗೂ ಭಯ. ಹೀಗಾಗಿ ಅವರೊಂದಿಗೆ ಪೋಷಕರೂ ಗುಡ್ಡಕ್ಕೆ ತೆರಳುತ್ತಿದ್ದಾರೆ. ಇತ್ತ ಕೃಷಿ ಕೆಲಸ ಮಾಡುವುದೋ ಅಥವಾ ಮಕ್ಕಳನ್ನು ಆನ್‌ಲೈನ್ ತರಗತಿಗಾಗಿ ಗುಡ್ಡಕ್ಕೆ ಕರೆದುಕೊಂಡು ಹೋಗುವುದೋ ಎಂಬ ದ್ವಂದ್ವಕ್ಕೆ ಪೋಷಕರು ಸಿಲುಕಿದ್ದಾರೆ.
ತುಮರಿ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವರ್ ಇದ್ದರೂ ಅಲ್ಲಿ ವಿದ್ಯುತ್ ಸಂಪರ್ಕ ಇದ್ದಾಗ ಮಾತ್ರ ನೆಟ್‌ವರ್ಕ್ ಲಭ್ಯವಿರುತ್ತದೆ. ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಪದೇ ಪದೇ ವಿದ್ಯುತ್ ಕೈ ಕೊಡುವುದರಿಂದ ಮೊಬೈಲ್ ನೆಟ್‌ವರ್ಕ್‌ಗೆ ಸಂಚಕಾರ ಬರುತ್ತದೆ. ಈ ಕಾರಣಕ್ಕಾಗಿಯೇ ಅಲ್ಲಿ ಖಾಸಗಿ ಮೊಬೈಲ್ ಕಂಪನಿ ಟವರ್ ಅಳವಡಿಸಲು ಮುಂದಾಗಿಲ್ಲ.
ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಹರತಾಳು ಅವರು ಈ ಸಮಸ್ಯೆ ಪ್ರಸ್ತಾಪಿಸಿದ್ದರು. ಆದರೂ ಇದುವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಡಿಜಿಟಲ್ ಇಂಡಿಯಾದ ಮಾತು ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ‘ದ್ವೀಪ’ನಾಡಿನ ಜನರ ಈ ಸಮಸ್ಯೆಗೆ ತುರ್ತು ಸ್ಪಂದನ ಬೇಕಿದೆ.
***
ಮುಂಜಾನೆ ಗುಡ್ಡವೇರಿದರೆ ಸಂಜೆಯೇ ವಾಪಸ್!
ಚಂದ್ರಹಾಸ ಹಿರೇಮಳಲಿ
ಶಿವಮೊಗ್ಗ: ನೆಟ್‌ವರ್ಕ್ ಸಮಸ್ಯೆ ವಿದ್ಯಾರ್ಥಿಗಳಿಗಷ್ಟೆ ಅಲ್ಲ, ಲಾಕ್‌ಡೌನ್ ಅವಧಿಯಲ್ಲಿ ಮಲೆನಾಡಿಗೆ ಬಂದು ಸಿಲುಕಿದ ಹಲವು ಉದ್ಯೋಗಿಗಳಿಗೂ ಬಿಸಿ ಮುಟ್ಟಿಸಿದೆ. ಇಂತಹ ಹಲವು ಪ್ರಸಂಗಗಳು ಮಲೆನಾಡಿನಲ್ಲಿ ಕಾಣಸಿಗುತ್ತವೆ.
‘ಲಾಕ್‌ಡೌನ್‌ಗೂ ಮೊದಲು ಬೇಸಿಗೆ ರಜೆಗೆ ಪತ್ನಿಯ ಊರು ತೀರ್ಥಹಳ್ಳಿ ತಾಲ್ಲೂಕಿನ ಹೆಗ್ಗೋಡಿಗೆ ಬಂದಿದ್ದೆವು. ಅದೇ ಸಮಯಕ್ಕೆ ಲಾಕ್‌ಡೌನ್ ಘೋಷಣೆಯಾಯಿತು. ಕಂಪನಿ ಮುಖ್ಯಸ್ಥರೂ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದರು. ಮನೆಯಿಂದ ಕೆಲಸ ಮಾಡಲು ಅಲ್ಲಿ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಸಮೀಪದ ಗುಡ್ಡವೇರಿ ನೆಟ್‌ವರ್ಕ್ ಸಿಗುವ ಸ್ಥಳ ಹುಡುಕಿದೆ. ಎರಡು ದಿನಗಳಲ್ಲಿ ಯಶಸ್ವಿಯಾದೆ’ ಎಂದು ಮಲೆನಾಡಿನ ಸಮಸ್ಯೆಗಳ ಚಿತ್ರಣ ಬಿಚ್ಚಿಟ್ಟರು ಖಾಸಗಿ ಕಂಪನಿ ಉದ್ಯೋಗಿಯಲಹಂಕದ ಜಗದೀಶ್ ಕೆ.ಟಿ.
‘ಮನೆಗೂ ಅಲ್ಲಿಗೂ ಬಹುದೂರ. ಮಧ್ಯಾಹ್ನದ ಊಟಕ್ಕೂ ಬರಲು ಆಗುತ್ತಿರಲಿಲ್ಲ. ಬೆಳಿಗ್ಗೆ ಉಪಾಹಾರ ಸೇವಿಸಿ, ಮನೆ ಬಿಟ್ಟರೆ ಸಂಜೆಯೇ ವಾಪಸ್ ಬರುತ್ತಿದ್ದೆ. ಕೆಲವೊಮ್ಮೆ ಮಳೆಯ ಕಾರಣ ಗುಡ್ಡದ ಮೇಲೂ ನೆಟ್‌ವರ್ಕ್ ಕೈಕೊಡುತ್ತಿತ್ತು.ಸಂಜೆಯ ಮೇಲೆ ಏನಾದರೂ ಕಂಪನಿ ಸಂಪರ್ಕಿಸಬೇಕಿದ್ದರೆ ಆಗುತ್ತಿರಲಿಲ್ಲ. ನೆಟ್‌ವರ್ಕ್ ಸಂಪರ್ಕ ತಪ್ಪಿದಾಗ ಲ್ಯಾಂಡ್‌ಲೈನ್‌ಗೆ ಫಾರ್ವರ್ಡ್ ಮಾಡಿಕೊಂಡಿದ್ದೆ. ರಾತ್ರಿ ಕಂಪನಿ ಕರೆ ಬಂದರೆ ಟಾರ್ಚ್ ಹಿಡಿದು ಮತ್ತೆ ಗುಡ್ಡ ಹತ್ತಬೇಕಿತ್ತು. ಕೊನೆಗೆ ಈ ಸಮಸ್ಯೆಗೆ ಪರಿಹಾರ ಇಲ್ಲ ಎಂದು ನಿರ್ಧರಿಸಿದೆ. ಪತ್ನಿ, ಮಕ್ಕಳನ್ನು ಅತ್ತೆ ಮನೆಯಲ್ಲೇ ಬಿಟ್ಟು ಬೆಂಗಳೂರಿಗೆಒಬ್ಬನೇ ಹಿಂದಿರುಗಿದೆ’ ಎಂದು ಅನುಭವಿಸಿದ ಸಮಸ್ಯೆ ತೆರೆದಿಟ್ಟರು ಜಗದೀಶ್.
ಶೇ 80ರಷ್ಟು ಮಕ್ಕಳಿಗೆ ತಲುಪಿದ ಆನ್‌ಲೈನ್ ಪಾಠ: ಮಲೆನಾಡಿನ ಎಷ್ಟೋ ಮನೆಗಳಲ್ಲಿ ಆನ್‌ಲೈನ್ ಪಾಠಕ್ಕೆ ಅಗತ್ಯವಾದ ಮೊಬೈಲ್, ಲ್ಯಾಪ್‌ಟಾಪ್ ಕೊಡಿಸಲು ಪೋಷಕರಿಗೆ ಸಾಧ್ಯವಾಗಿಲ್ಲ. ಸರ್ಕಾರಿ ಶಾಲೆಗಳನ್ನೇ ನಂಬಿಕೊಂಡ ಬಡವರು, ಕೂಲಿ ಕಾರ್ಮಿಕರ ಎಷ್ಟೋ ಮಕ್ಕಳು ಒಂದು ದಿನವೂ ಆನ್‌ಲೈನ್ ಪಾಠ ಕೇಳಿಲ್ಲ. ಶಾಲೆಯ ಶಿಕ್ಷಕರು–ವಿದ್ಯಾರ್ಥಿಗಳ ಮಧ್ಯೆ ಸಂಪರ್ಕವೂ ಸಾಧ್ಯವಾಗಿಲ್ಲ. ಕೆಲವು ದಾನಿಗಳು ಒಂದಷ್ಟು ಮಕ್ಕಳಿಗೆ ಹಳೆಯ ಮೊಬೈಲ್, ಲ್ಯಾಪ್‌ಟಾಪ್ ಕೊಟ್ಟರೂ ಅವು ಸುಸ್ಥಿತಿಯಲ್ಲಿ ಇರಲಿಲ್ಲ ಎನ್ನುವ ಗೋಳುಗಳೂ ಕೇಳಿಬಂದಿವೆ.
‘ಜಿಲ್ಲೆಯಲ್ಲಿ ಈ ಬಾರಿ 24,170 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಶೇ 80ರಷ್ಟು ಮಕ್ಕಳು ಆನ್‌ಲೈನ್ ಪಾಠದ ಸಂಪರ್ಕಕ್ಕೆ ಸಿಕ್ಕಿದ್ದರು. ಕೆಲವರ ಬಳಿ ಮೊಬೈಲ್ ಇಲ್ಲದಿದ್ದರೂ ನೆರೆಹೊರೆಯವರ ಸಹಾಯ ಪಡೆದಿದ್ದಾರೆ. ಜನವರಿಯಿಂದ ಮಾರ್ಚ್‌ವರೆಗೆ ಮೂರು ತಿಂಗಳು ಮಕ್ಕಳಿಗೆ ಆಫ್‌ಲೈನ್ ಪಾಠದ ಅವಕಾಶವೂ ದೊರೆತಿದೆ. ಶೇ 70ರಷ್ಟು ಪಠ್ಯ ಕಡಿತವಾಗಿರುವ ಕಾರಣ ಅವರಿಗೆ ಅನುಕೂಲವಾಗಿದೆ. ಹಾಗಾಗಿ, ಎಲ್ಲ ಮಕ್ಕಳಿಗೂ ನ್ಯಾಯ ದೊರಕಿದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ್.
***
ನಗರಗಳು ಮತ್ತು ಹಳ್ಳಿಗಳ ನಡುವಿನ ಶೈಕ್ಷಣಿಕ ಅಂತರವನ್ನು ನೆಟ್‌ವರ್ಕ್ ಸಮಸ್ಯೆ ಮತ್ತಷ್ಟು ಹೆಚ್ಚಿಸಿದೆ. ದೂರವಾಣಿ ಸೌಲಭ್ಯವನ್ನು ಸಮರ್ಪಕವಾಗಿ ನೀಡದೆ ಆನ್‌ಲೈನ್ ಶಿಕ್ಷಣಕ್ಕೆ ಅರ್ಥವಿಲ್ಲ.
- ನೆಂಪೆ ದೇವರಾಜ್, ಸಾಮಾಜಿಕ ಹೋರಾಟಗಾರ
***
ನಮ್ಮಮನೆಯ ಮೂವರು ಹೆಣ್ಣುಮಕ್ಕಳಿಗೆ ಆನ್‌ಲೈನ್ ತರಗತಿ ನಡೆಯುತ್ತಿವೆ. ನೆಟ್‌ವರ್ಕ್ ಸಿಗದೆ ಅವರು ನಿತ್ಯ ಪರದಾಡುತ್ತಿದ್ದಾರೆ. ಹತ್ತಿರದ ನಿಟ್ಟೂರು ಗ್ರಾಮದಲ್ಲಿ ಅಳವಡಿಸಿರುವಂತೆ ವಯರ್‌ಲೆಸ್ ಟವರ್ ಈ ಭಾಗದಲ್ಲಿ ನಿರ್ಮಿಸಬೇಕು.
- ಓಂಕಾರ್ ಜೈನ್, ಎಪಿಎಂಸಿ ಸದಸ್ಯ, ಕಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.