ADVERTISEMENT

ಶರಾವತಿ ಕಣಿವೆಯಲ್ಲಿ ಮಯೂರ ನರ್ತನ

ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರಪಕ್ಷಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 8 ಮೇ 2022, 3:14 IST
Last Updated 8 ಮೇ 2022, 3:14 IST
ತುಮರಿ ಬಳಿಯ ಕೃಷಿ ಭೂಮಿಯಲ್ಲಿ ಕಂಡುಬಂದ ನವಿಲು.
ತುಮರಿ ಬಳಿಯ ಕೃಷಿ ಭೂಮಿಯಲ್ಲಿ ಕಂಡುಬಂದ ನವಿಲು.   

ತುಮರಿ: ಬೇಸಿಗೆಯ ಕಾರಣ ಆಹಾರವನ್ನು ಅರಸಿ ರಾಷ್ಟ್ರಪಕ್ಷಿ ನವಿಲುಗಳು ರೈತರ ಕೃಷಿ ಭೂಮಿಯತ್ತ ಧಾವಿಸುತ್ತಿವೆ.

ದ್ವೀಪದ ಕರೂರು ಹೋಬಳಿಯ ಕಟ್ಟಿನಕಾರು ಕಳಸವಳ್ಳಿ, ಮಾರಲಗೋಡು, ಹೊಸಕೊಪ್ಪದ ಹಳ್ಳ ಕೊಳ್ಳ, ದಿಬ್ಬದ ತೋಟ ಗದ್ದೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ.

ಬೆಳಿಗ್ಗೆ 9ರ ಒಳಗೆ ಹಾಗೂ ಸಂಜೆ 5ರ ನಂತರ ಶರಾವತಿ ಕಣಿವೆಯ ಹೊಳೆಬಾಗಿಲು ಸಿಗಂದೂರು ಮಾರ್ಗ ಮಧ್ಯೆ, ಕಟ್ಟಿನಕಾರಿನ ಅರಣ್ಯ ನೆಡುತೋಪು ಬಳಿ, ಕಟ್ಟಿನಕಾರು ಬಳಿಯ ವೀರಾಂಜನೇಯ ದೇವಸ್ಥಾನದ ಹತ್ತಿರ, ತುಮರಿ ಗ್ರಾಮದ ಮಾರಲಗೋಡು, ವಳೂರಿನ ಸಹ್ಯಾದ್ರಿ ತಪ್ಪಲು, ಅಂಬಾರ ಗುಡ್ಡದ ತಗ್ಗು ಪ್ರದೇಶಗಳಲ್ಲಿ ನವಿಲುಗಳು ಕಂಡುಬಂದಿವೆ. 4 ಸಾವಿರಕ್ಕೂ ಹೆಚ್ಚು ನವಿಲುಗಳು ಈ ಭಾಗದಲ್ಲಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಮಂಜಿನ ಹನಿಗಳು ಬಿದ್ದರೆ ಹೊಲದಲ್ಲಿ ಗರಿ ಬಿಚ್ಚಿ ನರ್ತನ ಮಾಡುವ ಗಂಡು ನವಿಲು ಸಂಗಾತಿಯನ್ನು ಆಕರ್ಷಿಸುತ್ತದೆ. ತನ್ನ ಧ್ವನಿಯ ಮೂಲಕಹೊಲದಲ್ಲಿ ಕೆಲಸ ಮಾಡುವ ರೈತರನ್ನು ತನ್ನೆಡೆಗೆ ಸೆಳೆಯುತ್ತದೆ. ಸಿಗಂದೂರು ದೇವಸ್ಥಾನಕ್ಕೆ ಬರುವ ಭಕ್ತರಿಗೂ ನವಿಲು ನರ್ತನ ನೋಡಲು ಸಿಗುತ್ತಿದೆ.

ತೋಟದಲ್ಲಿ 8ರಿಂದ 10 ನವಿಲುಗಳು ಮರಿಗಳೊಂದಿಗೆ ಒಂದೇ ಗುಂಪಿನಲ್ಲಿ ತಿರುಗಾಡುತ್ತಿವೆ.

ದ್ವೀಪದ ವಿಶಾಲವಾದ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಕೊಳ್ಳಗಳಿವೆ. ಪೊದೆಗಳು, ಗುಂಪು ಗಿಡಗಳು ಕುರುಚಲು ಆಡವಿ ನವಿಲುಗಳಿಗೆ ನೆಚ್ಚಿನ ತಾಣವಾಗಿದ್ದು, ಇಲ್ಲಿ ಮೊಟ್ಟೆಯನ್ನು ಇಡಲು ಬರುತ್ತವೆ. ಇದರಿಂದ ನವಿಲುಗಳ ಸಂತಾನಾಭಿವೃದ್ಧಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಇಲ್ಲಿನ ಪಶ್ಚಿಮ ಘಟ್ಟ ಕಾರ್ಯಪಡೆಯ ಸಂಚಾಲಕ ಕೆ.ಎಸ್‌. ಜಯಂತ್ ಏಳಿಗೆ.

‘ರೈತರ ಕೃಷಿ ಜಮೀನಿನಲ್ಲಿ ಕಂಡುಬರುವ ಕೀಟಗಳು, ಬೆಳವಣಿಗೆ ಹಂತದಲ್ಲಿರುವ ಪೈರುಗಳ ಎಲೆಗಳು ನವಿಲುಗಳಿಗೆ ಆಹಾರವಾಗಿವೆ. ಹಾವು ಇತರೆ ವಿಷಜಂತುಗಳು ನವಿಲುಗಳು ಸಂಚರಿಸುವ ಅಸುಪಾಸಿನಲ್ಲಿ ಕಾಣಿಸುವುದಿಲ್ಲ. ಇದರಿಂದ ನಿರ್ಭಿತರಾಗಿ ಓಡಾಡಲು
ಅನುಕೂಲ ಆಗಿದೆ’ ಎನ್ನುತ್ತಾರೆ ರೈತ ಕೃಷ್ಣಮೂರ್ತಿ.

ನವಿಲು ಧಾಮಕ್ಕೆ ಒಲವು

ದಿನದಿಂದ ದಿನಕ್ಕೆ ಶರಾವತಿ ಹಿನ್ನೀರಿನ ಮಾರಲಗೋಡು, ಮುಪ್ಪಾನೆ, ಹೆರಾಟೆ, ಕಾರಣಿ, ಬಿಳಿಗಾರು, ವಳೂರು, ಬರುವೆ, ಹೊಸಕೊಪ್ಪ, ಕಟ್ಟಿನಕಾರು ಭಾಗದಲ್ಲಿ ನವಿಲುಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳ ರಕ್ಷಣೆಯ ಅಗತ್ಯವಿದೆ. ಇಲ್ಲದಿದ್ದರೆ ಬೇಟೆಗಾರರ ಹೊಂಚಿಗೆ ನವಿಲುಗಳು ನಶಿಸಬಹುದು ಎಂಬುದು ಪರಿಸರ ಪ್ರೇಮಿಗಳ ಆತಂಕ.

ರೈತರು ಸಾವಯವ ಕೃಷಿಗೆ ಒತ್ತು ನೀಡಿ ಕ್ರಿಮಿನಾಶಕ ಬಳಕೆ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಅಮೂಲ್ಯ ಜೀವ ವೈವಿಧ್ಯ ಸರಪಳಿ ತುಂಡಾಗಲಿದೆ. ಆದಕಾರಣ ಹಿನ್ನೀರು ಪ್ರದೇಶದಲ್ಲಿ ನವಿಲು ಧಾಮ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.